ಶೃಂಗೇರಿ : ಶೃಂಗೇರಿ ಶಾರದಾ ಪೀಠದ ಭಾಗವಾದ ಶ್ರೀ ಶಾರದಾ ಆಯುರ್ವೇದಿಕ್‌ ಚಿಕಿತ್ಸಾಲಯ, ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರ ಬೆಂಗಳೂರು ಕೊರೋನಾ ಸೋಂಕು ನಿವಾರಣೆಗೆ ಸಹಕಾರಿಯಾಗಬಲ್ಲ ಮೂರು ಆಯುರ್ವೇದಿಕ್‌ ಔಷಧಿಗಳನ್ನು ಅಭಿವೃದ್ಧಿಪಡಿಸಿರುವುದಾಗಿ ತಿಳಿಸಿದೆ.

ಕೊರೋನಾ ವಿರುದ್ಧ ಹೋರಾಡಲು ಅಮೃತ ಸಂಜೀವಿನಿ,  ಜೀವನೀಯಂ ಮತ್ತು ಓಜೋವರ್ಧಿನಿ ಎಂಬ ಮಾತ್ರೆಗಳನ್ನು ಸಿದ್ಧಪಡಿಸಿದ್ದು, ಇವುಗಳನ್ನು ರೋಗದ ಆರಂಭಿಕ ಲಕ್ಷಣಗಳುಳ್ಳ ಹಾಗೂ ರೋಗ ಲಕ್ಷಣ ರಹಿತ ಸೋಂಕಿತರಿಗೆ ಔಷಧಿಯಾಗಿ ಬಳಸುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಹೆಚ್ಚಾಗುವುದಲ್ಲದೆ ಕೋವಿಡ್‌ ನಿಂದ ಗುಣಮುಖರಾದ ನಂತರ ಕಾಣಿಸಿಕೊಳ್ಳುವ ಅನಾರೋಗ್ಯ ಲಕ್ಷಣಗಳಿಂದ ಶೀಘ್ರದಲ್ಲೇ ಚೇತರಿಸಿಕೊಳ್ಳಬಹುದು ಎಂಬುದು ಅಧ್ಯಯನ ವರದಿಯಲ್ಲಿ ದೃಢಪಟ್ಟಿದೆ.

ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕಿಯಾದ ಡಾ. ಸಿ.ಆರ್‌. ಜಯಂತಿ ಅವರ ಮೇಲ್ವಿಚಾರಣೆಯಲ್ಲಿ ನಡೆಸಿದ  ವೈದ್ಯಕೀಯ ಪರೀಕ್ಷೆಯಲ್ಲಿ ಈ ಔಷಧಿ ಶೇ.92 ರಷ್ಟು ಪರಿಣಾಮಕಾರಿ ಎಂದು ಸಾಭಿತಾಗಿದೆ ಎಂದು ಅಧ್ಯಯನ ಕೇಂದ್ರವು ತಿಳಿಸಿದೆ.

ಓಜೋವರ್ಧಿನಿ ಉಸಿರಾಟಕ್ಕೆ ಸಂಬಂಧಿಸಿದ ಹಲವು ರೀತಿಯ ರೋಗಗಳ ನಿವಾರಣೆಗೆ ಬಳಕೆಯಾಗಲಿದೆ. ಉರಿಯೂತ ಲಕ್ಷಣಗಳು ಹಾಗೂ ರೋಗನಿರೋಧಕ ಸಮತೋಲನಕ್ಕೆ ಸಹಕಾರಿಯಾಗಿದೆ.

ಜೀವನೀಯಂ ಉಸಿರಾಟ ತೊಂದರೆಯ ಚಿಕಿತ್ಸೆಗೆ ಪ್ರಬಲ ಪದಾರ್ಥಗಳಿಂದ ತಯಾರಿಸಿದ ಮಾತ್ರೆಗಳಾಗಿದೆ. ಅಮೃತ ಸಂಜೀವಿನಿ ರೋಗನಿರೋಧಕ ಶಕ್ತಿಯ ಸಮತೋಲನ ಕಾಯ್ದುಕೊಳ್ಳಲು ಶಿಫಾರಸು ಮಾಡಲಾಗಿದೆ ಎಂದು ಶಾರದಾ ಚಿಕಿತ್ಸಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ

ಶೃಂಗೇರಿ ಶ್ರೀ ಮಠದ ಉಭಯ ಗುರುಗಳ ಆಶೀರ್ವಾದ ಮತ್ತು  ಆಡಳಿತಾಧಿಕಾರಿ ವಿ.ಆರ್‌. ಗೌರೀಶಂಕರ್‌ ಅವರ ಮಾರ್ಗದರ್ಶನದಲ್ಲಿ ಈ ಔಷಧಿಗಳನ್ನು ಅಭಿವೃದ್ಧಿಪಡಿಸಲಾಗಿದ್ದು ಐಸೋಲೇಷನ್‌ನಲ್ಲಿರುವ ಸೋಂಕಿತರಿಗೆ ಈ ಔಷಧಗಳ ಕ್ಲಿನಿಕಲ್‌ ಟ್ರಯಲ್‌ ಮಾಡಿದ್ದು, ಈ ಮಾತ್ರೆಗಳನ್ನು ಪಡೆಯದೆ ಇರುವ ರೋಗಿಗಳಿಗಿಂತ ಪಡೆದವರ ಆರೋಗ್ಯದಲ್ಲಿ ಹೆಚ್ಚಿನ ಸುಧಾರಣೆ ಕಂಡುಬಂದಿದೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.