ಶಿವಮೊಗ್ಗ: ಅನಗತ್ಯ ಹೆಸರುಗಳನ್ನು ತೆಗೆದು ಹಾಕಿ ಜಿಲ್ಲೆಯ ರೌಡಿಶೀಟರ್‌ಗಳ ಪಟ್ಟಿ ಪರಿಷ್ಕರಿಸುವ ಅಗತ್ಯತೆ ಕುರಿತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಿ ಪ್ರಸಾದ್ ಮಾತನಾಡಿದ್ದಾರೆ.

ಶಿವಮೊಗ್ಗ ಪ್ರೆಸ್‌ಟ್ರಸ್ಟ್‌ ವತಿಯಿಂದ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆಯ ರೌಡಿಶೀಟರ್‌ಗಳ ಪಟ್ಟಿ ಬಹಳ ದೊಡ್ಡದಿದೆ. ಅವರಲ್ಲಿ ಬಹುತೇಕರು ಕ್ರಿಮಿನಲ್ ಚಟುವಟಿಕೆ ತೊರೆದು ಈಗ ಸಹಜ ಜೀವನ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿ ಈಗಲೂ ಸಕ್ರಿಯರಾಗಿರುವ ರೌಡಿಗಳು, ಮೂಲಭೂತವಾದಿ ಮತಾಂಧರು, ಹಾಗೂ ಕೆಟ್ಟ ನಡತೆ ಇರುವವರನ್ನು ಸೇರಿಸಿ ಹೊಸಪಟ್ಟಿ ಸಿದ್ಧಪಡಿಸಲಾಗುವುದು. 

ಕೋಮುಗಲಭೆ ಪ್ರಕರಣಗಳನ್ನು ಎಂದಿಗೂ ಸಹಿಸುವುದಿಲ್ಲ. ಮಂಗಳೂರಿನ ಕೋಮು ಸೂಕ್ಷ್ಮ ವಾತಾವರಣಕ್ಕೂ ಶಿವಮೊಗ್ಗದ ವಾತಾವರಣಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಯಾವುದೇ ಸನ್ನಿವೇಶ ಎದುರಿಸಲು ನಮ್ಮ ಜಿಲ್ಲೆಯ ಪೊಲೀಸರು ಸಮರ್ಥರಿದ್ದಾರೆ. ಪೊಲೀಸ್‌ ಪಡೆಯನ್ನು ಸದಾ ಸನ್ನದ್ಧವಾಗಿಡಲಾಗುವುದು ಎಂದು ಹೇಳಿದರು.

ಮಲೆನಾಡಿನಲ್ಲಿ ನಕ್ಸಲ್ ಚಟುವಟಿಕೆ ಸಾಕಷ್ಟು ಕ್ಷೀಣಿಸಿದ್ದು ಮೊದಲಿನಂತೆ ಕಾಡಿನಲ್ಲಿ ನಕ್ಸಲರ ಚಟುವಟಿಕೆ ಇಲ್ಲ. ಈ ಹಿಂದೆ 2015ರಲ್ಲಿ ದಾಖಲಾದ ಪ್ರಕರಣವೇ ಕೊನೆಯದು. ನಕ್ಸಲ್‌ ನಾಯಕಿ ಹೊಸಗದ್ದೆ ಪ್ರಭಾ ಸಾವಿನ ಕುರಿತು ಸಧ್ಯ ಇಲಾಖೆಗೆ ಯಾವುದೇ ಮಾಹಿತಿ ಇಲ್ಲ ಎಂದರು.

ಹಾಗೆಯೇ ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ನನ್ನ ಕಲ್ಪನೆ. ಪೊಲೀಸ್ ಪರಿಕಲ್ಪನೆ ಬ್ರಿಟೀಷರದ್ದು. ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಅಸ್ತಿತ್ವದಲ್ಲಿದ್ದ ಬ್ರಿಟೀಷ್ ಕಾಯ್ದೆಗಳು ಹೋರಾಟಗಾರರನ್ನು ಬಗ್ಗುಬಡಿಯುತ್ತಿದ್ದವು. ಈಗಲೂ ಅದೇ ವ್ಯವಸ್ಥೆ ಇದೆ ಎಂಬಂತೆ ಜನರು ಪೊಲೀಸರನ್ನು ಭಯದಿಂದ ನೋಡುತ್ತಾರೆ. ಇಂತಹ ಮನೋಭಾವ ಬದಲಿಸಬೇಕಿದೆ. ಅದೆಲ್ಲದಕ್ಕೂ ಮೊದಲು ಪೊಲೀಸ್‌ ವ್ಯವಸ್ಥೆಯನ್ನು ಜನಸ್ನೇಹಿಗೊಳಿಸಬೇಕಿದೆ ಎಂದರು.


ಮುಂದಿನ ದಿನಗಳಲ್ಲಿ ಜನರು ಹಾಗೂ ಕೆಳ ಹಂತದ ಸಿಬ್ಬಂದಿ ನಡುವೆ ಸಂವಾದ ಹಮ್ಮಿಕೊಳ್ಳಲಾಗುವುದು. ಪೊಲೀಸರು ಹಾಗೂ ಸಾಮಾನ್ಯ ಜನರ ನಡುವಿನ ಕಂದಕ ಕಡಿಮೆ ಮಾಡಲಾಗುವುದು ಎಂದರು.