ಚಿಕ್ಕಮಗಳೂರು

ಶ್ರೀಮಠಕ್ಕೆ ಭಕ್ತಾದಿಗಳಿಂದ ಹೊರೆಕಾಣಿಕೆ ಸಮರ್ಪಣೆ 

ಶೃಂಗೇರಿ ;ಶೃಂಗೇರಿ ಜಗದ್ಗುರು ಭಾರತೀತೀರ್ಥ ಮಹಾಸನ್ನಿಧಾನಂಗಳವರ 71ನೇ ವರ್ಧಂತಿ ಉತ್ಸವದ ಪ್ರಯುಕ್ತ ಶ್ರೀ ಶಾರದಾ ಪೀಠ ಶೃಂಗೇರಿಯಲ್ಲಿ 13 ನೇ ತಾರೀಖಿನಿಂದ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ.

ಈ ವರ್ಧಂತಿ ಉತ್ಸವದ ಪ್ರಯುಕ್ತ ಭಾನುವಾರ ಸಂಜೆ ಶೃಂಗೇರಿಯ ಸಾರ್ವಜನಿಕರು ಶ್ರೀಮಠಕ್ಕೆ ಹೊರೆಕಾಣಿಕೆ ಸಲ್ಲಿಸಿದರು.ಶೃಂಗೇರಿಯ ಶ್ರೀಶಂಕರಾಚಾರ್ಯ ವೃತ್ತಕ್ಕೆ ಸಾರ್ವಜನಿಕರು ವಾಹನಗಳಲ್ಲಿ ತಮ್ಮ ಹೊರೆಕಾಣಿಕೆಯನ್ನು ತಂದಿದ್ದರು.5:00  ಗಂಟೆಗೆ ಶಂಕರಾಚಾರ್ಯ ವೃತ್ತದಿಂದ ಹೊರೆಕಾಣಿಕೆ ಸಮರ್ಪಣಾ ಉತ್ಸವವು ಚಂಡೆಮೇಳ, ಕೀಲ್ಗೊಂಬೆ ಪ್ರದರ್ಶನದೊಂದಿಗೆ ಹೊರಟಿತು.

 ಶೃಂಗೇರಿಯ  ರಥಬೀದಿಯಲ್ಲಿ ಹೊರೆಕಾಣಿಕೆ ಸಮರ್ಪಣಾ ಉತ್ಸವವು ಸಾಗಿ ಶ್ರೀಮಠವನ್ನುಸೇರಿತು. ತದನಂತರ ಜಗದ್ಗುರು ಶ್ರೀವಿಧುಶೇಖರ ಭಾರತೀಗಳವರ ಸಮ್ಮುಖದಲ್ಲಿ ಹೊರೆಕಾಣಿಕೆಯನ್ನು ಅರ್ಪಿಸಲಾಯಿತು. ಕಾರ್ಯಕ್ರಮಕ್ಕೆ ಬೇಕಾದ ಅಕ್ಕಿ, ಬಾಳೆಗೊನೆ, ತೆಂಗಿನಕಾಯಿ ಮುಂತಾದವುಗಳನ್ನು ಸಾರ್ವಜನಿಕರು ಸಮರ್ಪಣಾ ಭಾವದಿಂದ ಶ್ರೀಮಠಕ್ಕೆ ಅರ್ಪಿಸಿದರು. ಸುಮಾರು 50 ಕ್ಕೂ ಹೆಚ್ಚು ವಾಹನಗಳಲ್ಲಿ ಹೊರೆಕಾಣಿಕೆಯನ್ನು ತರಲಾಗಿತ್ತು.


ಶಿವಮೊಗ್ಗ 

ಕಾಂಗ್ರೆಸ್ ಸೇರಿದ ಮಂಜುನಾಥ್ ಗೌಡ ;ಪಕ್ಷಕ್ಕೆ ಯಾವುದೇ ನಷ್ಟವಿಲ್ಲ ಎಂದ ಚಾಬುಸಾಬ್!

ಶಿವಮೊಗ್ಗ ; ಶಿವಮೊಗ್ಗದ ಜೆಡಿಎಸ್ ಜಿಲ್ಲಾಧ್ಯಕ್ಷರಾಗಿದ್ದ ಮಂಜುನಾಥ್ ಗೌಡ ಅಧಿಕೃತವಾಗಿ ಕಾಂಗ್ರೆಸ್ ಸೇರಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಜ್ಯ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಚಾಬುಸಾಬ್ "ಜೆಡಿಎಸ್ ಪಕ್ಷದಲ್ಲಿ ಸ್ವಾರ್ಥ ರಾಜಕಾರಣ, ಅಧಿಕಾರಕ್ಕಾಗಿ ಆಸೆ ಪಟ್ಟರೆ ಯಾವುದೇ ಪ್ರಯೋಜನವಿಲ್ಲ. ಸಂಘಟನೆ ಕಟ್ಟುವುದನ್ನು ಪಕ್ಷದ ಮುಖಂಡರು ಕಾರ್ಯಕರ್ತರಿಗೆ ನೀಡಬೇಕು. ಒಂದು ಪಕ್ಷದಲ್ಲಿ ಸ್ಥಿರವಾಗಿ ಕಾರ್ಯ ನಿರ್ವಹಿಸದೇ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಜಿಗಿಯುವವರಿಗೆ ನಾಯಕತ್ವ ನೀಡಬಾರದು" ಎಂದು ಹೇಳಿದರು.


ಹಾಸನ

ಜಿಲ್ಲೆಯಲ್ಲಿ ಒಂದೇ ದಿನ ನೂರಂಕಿ ದಾಟಿದ ಕೊರೋನಾ ಸೋಂಕಿತರ ಸಂಖ್ಯೆ!

ಹಾಸನ;ಹಾಸನದಲ್ಲಿ ನಿನ್ನೆ ಒಂದೇ ದಿನ 167 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಇದರ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 30,572 ಕ್ಕೆ ಏರಿದೆ. ಈವರೆಗೂ ಕೊರೋನಾ ಸೋಂಕಿಗೆ ಬಲಿಯಾದವರ ಸಂಖ್ಯೆ 479. 12 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1001 ಸಕ್ರಿಯ ಪ್ರಕರಣಗಳು ಇದ್ದಾವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಸತೀಶ್ ಕುಮಾರ್ ತಿಳಿಸಿದರು


ಕೊಡಗು

ಮೋದಿಗೆ ಮತ ಹಾಕಿದರೆ ದೇಶದ ಅಭಿವೃದ್ಧಿ ಇಲ್ಲ - ಚೆಲುವರಾಯಸ್ವಾಮಿ

ಕುಶಾಲನಗರ ; ಕಾಂಗ್ರೆಸ್ ಮುಖಂಡ ಚೆಲುವರಾಯ ಸ್ವಾಮಿಯವರು ಕೇಂದ್ರಸರ್ಕಾರದ ವಿರುದ್ಧ ಟೀಕೆಗಳ ಸುರಿಮಳೆಗೈದರು. ಮಡಿಕೇರಿ ನಗರಸಭಾ ಚುನಾವಣೆಯ ಉಸ್ತುವಾರಿ ಹೊತ್ತಿರುವ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚೆಲುವರಾಯಸ್ವಾಮಿ " ದೇಶದ ಅಭಿವೃದ್ಧಿಯಲ್ಲಿ ಹಿನ್ನಡೆಯಾಗಿದೆ. ಅಭಿವೃದ್ಧಿಯ ವಿಷಯದಲ್ಲಿ ವೈಫಲ್ಯ ಹೊಂದಿದ್ದನ್ನು ಮುಚ್ಚಿಹಾಕಲು ಕೇಂದ್ರ ಸರ್ಕಾರ ಕೊರೋನಾ ಸೋಂಕಿನ ನೆಪ ಹೇಳುತ್ತಿದೆ ಎಲ್ಲಿಯವರೆಗೆ ಮೋದಿಗೆ ಮತ ನೀಡುತ್ತಾರೋ ಅಲ್ಲಿಯವರೆಗೆ ದೇಶದ ಅಭಿವೃದ್ಧಿಯಾಗುವುದೇ ಇಲ್ಲ. ಹಿಂದೆ ದೇಶ ಕಾಂಗ್ರೆಸ್ ಭದ್ರಕೋಟೆಯಲ್ಲಿತ್ತು. ಇದೀಗ ಮತದಾರರಿಗೆ ಬಿಜೆಪಿ ನೀಡಿದ ಸುಳ್ಳು ಭರವಸೆಗಳ ಬಗ್ಗೆ ಅರಿವಾಗಿದೆ. ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ "ಎಂದು ಹೇಳಿದರು.


ಉತ್ತರ ಕನ್ನಡ

ಮೀನುಗಾರರಿಗೂ ಸಾಲಮನ್ನಾ ಯೋಜನೆ ಸಿಗುವಂತೆ ಪ್ರಯತ್ನಿಸುತ್ತೇನೆ -ರೂಪಾಲಿ ನಾಯ್ಕ್

ಉತ್ತರ ಕನ್ನಡ:ಶಾಸಕಿ ರೂಪಾಲಿ ನಾಯ್ಕ ಮುರ್ಡೇಶ್ವರದ ಆರ್.ಎನ್ ಶೆಟ್ಟಿ ಸಭಾಂಗಣದಲ್ಲಿ ಹರಿಕಂತ್ರ ಮಹಾಜನ ಸಂಘದ 15 ನೇ ವರ್ಷದ ಪ್ರತಿಭಾ ಪುರಸ್ಕಾರ ಹಾಗೂ ಹಿರಿಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿದರು.ನಂತರ ಮಾತನಾಡಿದ ಅವರು "ಮೀನುಗಾರರದ್ದು ಶ್ರಮಿಕ ಸಮಾಜ.ಈ ಸಮಾಜಕ್ಕೆ ಸರ್ಕಾರದ ಹಲವು ಸೌಲಭ್ಯಗಳು ಇನ್ನೂ ಸಿಗಬೇಕಿದೆ.ಈಗಾಗಲೇ ಸಮುದಾಯ ಭವನಕ್ಕೆ ೧ ಕೋಟಿ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗಿದೆ.ಮಿನುಗಾರರ ಪ್ರಗತಿಗಾಗಿ ರಾಜ್ಯ ಸರ್ಕಾರದ  ಮುಖ್ಯಮಂತ್ರಿಗಳಲ್ಲಿ ಆದಷ್ಟು ಬೇಗ ಚರ್ಚಿಸುತ್ತೇನೆ .ಮಿನುಗಾರರಿಗೂ ಸಹ ಸರ್ಕಾರದ ಸಾಲಮನ್ನ ಯೊಜನೆಯ ಸೌಲಭ್ಯ ಸಿಗುವ ಹಾಗೆ ಮಾಡಲಾಗುತ್ತದೆ" ಎಂದು ಹೇಳಿದರು.