ದೇಶಾದ್ಯಂತ ಲಭ್ಯವಿರುವ ಪೋಷಕಾಂಶಯುಕ್ತ ರಸಗೊಬ್ಬರಗಳ ಹಳೆ ದಾಸ್ತಾನನ್ನು ಹಳೆ ದರದಲ್ಲಿಯೇ ಮಾರಾಟ ಮಾಡಲು ರಸಗೊಬ್ಬರ ಉತ್ಪಾದಕರು ಸಮ್ಮತಿಸಿದ್ದಾರೆ ಆದ ಕಾರಣ ಈಗಿರುವ ರಸಗೊಬ್ಬರ ವನ್ನು ಹಳೆಯ ದರದಲ್ಲೇ ಮಾರಾಟ ಮಾಡವಾಗುವುದುಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದರು.
ರಸಗೊಬ್ಬರ ತಯಾರಿಕೆಗೆ ಬೇಕಾಗುವ ಶೇ. 90ರಷ್ಟು ಕಚ್ಚಾವಸ್ತುಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾವಸ್ತುಗಳ ಬೆಲೆ ತೀವ್ರ ಹೆಚ್ಚಾದ ಕಾರಣ ಇಲ್ಲಿಯೂ ಹೆಚ್ಚಾಗಿದೆ. ಸದ್ಯದ ಮಟ್ಟಿಗೆ ರಸಗೊಬ್ಬರ ಕಂಪನಿಗಳು ಹಳೆಯ ದಾಸ್ತಾನನ್ನು ಹಳೆಯ ದರದಲ್ಲಿಯೇ ಮಾರಾಟ ಮಾಡಲು ಒಪ್ಪಿಕೊಂಡಿವೆ. ರಸಗೊಬ್ಬರದ ಪ್ರಮುಖ ಬಳಕೆದಾರರಾದ ಯುಎಸ್ಎ, ಬ್ರೆಜಿಲ್, ಹಾಗೂ ಐರೋಪ್ಯ ಒಕ್ಕೂಟ ದೇಶಗಳಲ್ಲಿ ದಾಸ್ತಾನು ಮುಗಿದಿರುವುದರಿಂದ ಬೇಡಿಕೆ ಕುಸಿದು ಬೆಲೆ ಸಹ ಇಳಿಯತೊಡಗಿದೆ. ಹಾಗಾಗಿ ಮುಂಬರುವ ದಿನಗಳಲ್ಲಿ ಪರಿಸ್ಥಿತಿ ಇನ್ನಷ್ಟು ಸುಧಾರಿಸಿ ಬೆಲೆ ಇಳಿಯುವ ವಿಶ್ವಾಸವಿದೆ ಎಂದು ಹೇಳಿದರು.
ದೇಶದಲ್ಲಿ ಎಲ್ಲಾ ವಿಧದ ರಸಗೊಬ್ಬರಗಳು ಸಾಕಷ್ಟು ದಾಸ್ತಾನಿವೆ. ಮುಂಗಾರು ಸಮಯದಲ್ಲಿ ಯಾವುದೇ ಕಾರಣಕ್ಕೂ ರಸಗೊಬ್ಬರ ಕೊರತೆ ಆಗದಂತೆ ನೋಡಿಕೊಳ್ಳಲಾಗುವುದು ಎಂದರು.
ರೈತರಿಗೆ ಆದಷ್ಟು ಕಡಿಮೆ ಬೆಲೆಗೆ ರಸಗೊಬ್ಬರ ಪೂರೈಸಲು ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬದ್ಧವಾಗಿದೆ. ರಸಗೊಬ್ಬರ ಸಬ್ಸಿಡಿಗಾಗಿ ಬಹು ದೊಡ್ಡ ಮೊತ್ತದ ಹಣವನ್ನು ವ್ಯಯಿಸಲಾಗುತ್ತದೆ ಎಂದರು.
ಇನ್ನು ಮಾಜಿ ಮುಖ್ಯಮಂತ್ರಿಯಾಗಿ ಅನುಭವ ಹೊಂದಿರುವ ಕುಮಾರಸ್ವಾಮಿ ಅವರಿಗೆ ದೇಶದ ರಸಗೊಬ್ಬರ ಬೆಲೆ ಹಾಗೂ ಸರಬರಾಜು ವ್ಯವಸ್ಥೆಯು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂಬುದರ ಪ್ರಾಥಮಿಕ ತಿಳುವಳಿಕೆಯೂ ಇಲ್ಲದಿರುವುದು ಶೋಚನೀಯವಾಗಿದೆ. ಅವರಿಗೆ ಈ ಬಗ್ಗೆ ಏನಾದರು ಮಾಹಿತಿ ಬೇಕಾದರೆ ನಮ್ಮ ಬಳಿ ಬಂದು ಕೇಳಲಿ. ನಾವು ಸಂಪೂರ್ಣ ಮಾಹಿತಿ ಒದಗಿಸುತ್ತೇವೆ ಎಂದು ಕುಮಾರಸ್ವಾಮಿ ಅವರ ಟ್ವೀಟ್ ಗೆ ಖಾರವಾಗಿ ಪ್ರತಿಕ್ರಿಯಿಸಿದರು.


0 Comments