ಚಿಕ್ಕಮಗಳೂರು: ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ "ರಾಹುಲ್ ಗಾಂಧಿಯವರನ್ನು ಕಂಡರೆ ಬಿಜೆಪಿಯವರಿಗೆ ಭಯ" ಎಂಬ ಹೇಳಿಕೆಗೆ  ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಟಾಂಗ್ ಕೊಟ್ಟಿದ್ದಾರೆ. ರಾಹುಲ್ ಗಾಂಧಿ ನೇತೃತ್ವದಲ್ಲಿ ಸ್ವತಃ ಮಲ್ಲಿಕಾರ್ಜುನ ಖರ್ಗೆ ಅವರೇ ಚುನಾವಣೆ ಗೆಲ್ಲಲಿಲ್ಲ. ರಾಹುಲ್ ನೇತೃತ್ವದಲ್ಲಿ ನೀವು ಯಾವ ಚುನಾವಣೆಯನ್ನು ಗೆದ್ದಿದ್ದೀರಿ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಕೇವಲ 1 ಕ್ಷೇತ್ರವನ್ನು ಕಾಂಗ್ರೆಸ್ ನವರು ಗೆದ್ದರು. ನಾವು ಪ್ರಬಲ ಅಭ್ಯರ್ಥಿಯನ್ನು ನಿಲ್ಲಿಸಿ ಪ್ರಚಾರ ನಡೆಸಿದ್ದಿದ್ದರೆ ಅಲ್ಲಿಯೂ ಸಹ ನಾವೇ ಗೆಲ್ಲುತ್ತಿದ್ದೆವು. ಕಾಂಗ್ರೆಸ್ ಒಂದು ಎಡಬಿಡಂಗಿತನದ ಪಕ್ಷವಾಗಿದೆ ಎಂದು ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿ, ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಅಂತವರನ್ನು ನಾಯಕರೆಂದು ಒಪ್ಪಿಕೊಳ್ಳುತ್ತೇನೆ. ಆದರೆ ಈ ರಾಹುಲ್, ಪ್ರಿಯಾಂಕಾ, ಹಾಗೂ ಸೋನಿಯಾ ಗಾಂಧಿ ಅವರನ್ನು ನಾಯಕರೆಂದು ಕರೆಯಲು ಆಗುವುದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ನಿರ್ಧಿಷ್ಟವಾದ ತಾತ್ವಿಕ ತಳಹದಿಯಾಗಲೀ, ರಾಷ್ಟ್ರೀಯ ನಾಯಕತ್ವವಾಗಲೀ ಯಾವುದೂ ಇಲ್ಲ. ಅದೊಂದು ಮುಳುಗುತ್ತಿರುವ ಹಡಗು ಎಂದು ವ್ಯಂಗ್ಯವಾಡಿದರು.