ಶೃಂಗೇರಿಯ ಜೆಸಿಬಿಎಂ ಕಾಲೇಜಿನ ಬಳಿ ಸೋಮವಾರ ಮಧ್ಯಾಹ್ನದ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಓರ್ವ ವಿಧ್ಯಾರ್ಥಿ ಗಂಭೀರ ಗಾಯಗೊಂಡಿದ್ದು, ಇನ್ನಿಬ್ಬರು ವಿಧ್ಯಾರ್ಥಿಗಳಿಗೆ ಚಿಕ್ಕಪುಟ್ಟ ಗಾಯಗಳಾಗಿವೆ.

ಪಟ್ಟಣದ ಖಾಸಗೀ ಕಾಲೇಜಿನ ಪ್ರಥಮ ಪಿಯುಸಿಯ ಮೂವರು ವಿಧ್ಯಾರ್ಥಿಗಳು ಬೈಕಿನಲ್ಲಿ ವೇಗವಾಗಿ ಬರುತ್ತಿದ್ದು, ಕಾಲೇಜಿನ ಮುಂಭಾಗದಲ್ಲಿ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ವ್ಯಾಗನರ್ ಕಾರಿಗೆ ಡಿಕ್ಕಿ ಹೊಡೆದಿದೆ. ಬೈಕ್ ನಲ್ಲಿದ್ದ ಮೂವರ ಪೈಕಿ ಇಬ್ಬರು ಅಪಾಯದಿಂದ ಪಾರಾಗಿದ್ದು ಚಿಕ್ಕಪುಟ್ಟ ಗಾಯಗಳಾಗಿದೆ. ಇನ್ನೋರ್ವ ವಿಧ್ಯಾರ್ಥಿಗೆ ಗಂಭೀರವಾಗಿ ಗಾಯವಾಗಿದೆ. ಸದ್ಯ ಆತನನ್ನು ಪ್ರಥಮ ಚಿಕಿತ್ಸೆ ಬಳಿಕ ತೀರ್ಥಹಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿದೆಯೆಂದು ತಿಳಿದುಬಂದಿದೆ.

ಬೈಕ್ ನಲ್ಲಿದ್ದ ಮೂವರೂ ವಿಧ್ಯಾರ್ಥಿಗಳು ಶೃಂಗೇರಿಯ ಖಾಸಗೀ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದಾರೆ, ಅಲ್ಲದೇ ಹೆಲ್ಮೆಟ್ ಕೂಡ ಧರಿಸಿರಲಿಲ್ಲ ಎಂದು ತಿಳಿದುಬಂದಿದೆ. ಕಾಲೇಜಿನ ಮುಂಭಾಗ ಪ್ರತಿನಿತ್ಯ ವಿಧ್ಯಾರ್ಥಿಗಳು ವೇಗವಾಗಿ ಬೈಕ್ ರೈಡ್ ಮಾಡುತ್ತಿದ್ದು ಈ ಹಿಂದೆಯೂ ಅನೇಕ ಅಪಘಾತಗಳಾಗಿವೆ. ಕೂಡಲೇ ಸಂಬಂಧಪಟ್ಟವರು ಗಮನ ಹರಿಸಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.