ಚಿಕ್ಕಮಗಳೂರು
ಶಿಥಿಲಾವಸ್ಥೆಯಲ್ಲಿದ್ದ ದೇವಾಲಯವನ್ನು ದತ್ತು ಪಡೆದ ಸಿ.ಟಿ.ರವಿ
ಚಿಕ್ಕಮಗಳೂರು ; ಚಿಕ್ಕಮಗಳೂರಿನ ಹಳೆ ಲಕ್ಯಾ ಬಳಿ ಇರುವ ಶ್ರೀ ಚನ್ನಕೇಶವ ದೇವಾಲಯವು ಶಿಥಿಲಾವಸ್ಥೆಯನ್ನು ತಲುಪಿತ್ತು. ಈ ಪುರಾತನ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಸಿ. ಟಿ ರವಿ ಅವರು ಪಣ ತೊಟ್ಟಿದ್ದಾರೆ. ಶಿಥಿಲಾವಸ್ಥೆಯಲ್ಲಿರುವ ದೇವಾಲಯವನ್ನು ದತ್ತು ಪಡೆದಿದ್ದಾರೆ ಹಾಗೂ ಪುನರ್ ನವೀಕರಣ ಗೊಳಿಸುವುದಾಗಿ ಹೇಳಿ ಟ್ವೀಟ್ ಮಾಡಿದ್ದಾರೆ. ಸುಮಾರು 800 ವರ್ಷಗಳಷ್ಟು ಹಳೆಯದಾದ ಈ ದೇವಾಲಯವು ಸದ್ಯ ಪೊದೆ ಗಳಿಂದ ತುಂಬಿದೆ. ಹೊಯ್ಸಳರ ಕಾಲದ ಈ ದೇವಾಲಯಕ್ಕೆ ಹೊಸ ರೂಪ ನೀಡುವ ನಿರ್ಧಾರ ಮಾಡಿದ್ದಾರೆ ಸಿ. ಟಿ ರವಿ
ಹಾಸನ
ಬೇಲೂರಿನ ಚೆನ್ನಕೇಶವ ದೇವಾಲಯ ಒಂದು ತಿಂಗಳು ಬಂದ್
ಹಾಸನ/ಬೇಲೂರು ;ದೇಶದಲ್ಲಿ ಕೋರನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆಯು ತನ್ನ ವ್ಯಾಪ್ತಿಯಲ್ಲಿ ಬರುವ ಎಲ್ಲಾ ದೇಗುಲಗಳನ್ನು ಬಂದ್ ಮಾಡುವ ಆದೇಶ ಹೊರಡಿಸಿದೆ.
ಬೇಲೂರಿನ ಚೆನ್ನಕೇಶವ ದೇವಾಲಯವನ್ನು ಪುರಾತತ್ವ ಇಲಾಖೆಯ ಆದೇಶದ ಮೇರೆಗೆ ಒಂದು ತಿಂಗಳುಗಳ ಕಾಲ ಬಂದ್ ಮಾಡಲಾಗಿದೆ. ಪ್ರವಾಸಿಗರು ಹಾಗೂ ಭಕ್ತಾದಿಗಳಿಗೆ ಇನ್ನು ಒಂದು ತಿಂಗಳುಗಳ ಕಾಲ ಬೇಲೂರಿನ ಚೆನ್ನಕೇಶವ ದರ್ಶನ ಲಭ್ಯವಿರುವುದಿಲ್ಲ.
ಶಿವಮೊಗ್ಗ
ಕೊರೋನಾ ನಿಯಂತ್ರಣಕ್ಕಾಗಿ ಈಶ್ವರಪ್ಪ ಹೊಸ ಯೋಜನೆ!
ಶಿವಮೊಗ್ಗ ;ಜಿಲ್ಲೆಯಲ್ಲಿ ದಿನೇ ದಿನೇ ಕೊರೋನಾ ಹೆಚ್ಚುತ್ತಿದೆ. ಈ ಬಗ್ಗೆ ಹೊಸ ನಿಯಂತ್ರಣಾ ಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಕೆ. ಎಸ್ ಈಶ್ವರಪ್ಪ ಜಿಲ್ಲೆಯಲ್ಲಿ ಜಾರಿಗೆ ತರಲಿದ್ದಾರೆ.
ಕೊರೋನಾ ನಿಯಂತ್ರಣಕ್ಕಾಗಿ ಕಾರ್ಯಪಡೆಯೊಂದನ್ನು ರಚಿಸಲಾಗಿದೆ. ಇದರಲ್ಲಿ ಗ್ರಾಮ ಪಂಚಾಯ್ತಿಯ ಸದಸ್ಯರು ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಒಳಗೊಂಡಿರುತ್ತಾರೆ. ಈ ಕಾರ್ಯಪಡೆಯು ಕೊರೋನಾ ಜಾಗೃತಿಗಾಗಿ ಪ್ರತಿ ಗ್ರಾಮ ಹಾಗೂ ಗ್ರಾಮಪಂಚಾಯ್ತಿ ಮಟ್ಟದಲ್ಲೂ ಕೆಲಸ ನಿರ್ವಹಿಸಲಿದೆ ಎಂದರು.
ಈ ಕಾರ್ಯಪಡೆಗೆ ಬೇಕಾಗುವ ವೆಚ್ಚವನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ಮತ್ತು 15 ನೇ ಹಣಕಾಸು ನಿಧಿಯಡಿ ಬಳಸಿಕೊಳ್ಳಲಾಗುತ್ತದೆ. ಕಾರ್ಯಪಡೆಯು 8 - 10 ಜನರನ್ನು ಹೊಂದಿರುತ್ತದೆ. ಈ ಕಾರ್ಯಪಡೆಯ ಮುಖ್ಯ ಕೆಲಸವೆಂದರೆ ಜನರಲ್ಲಿ ಜ್ವರ, ಶೀತ ಮುಂತಾದ ಅನಾರೋಗ್ಯದ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ಆಸ್ಪತ್ರೆಗೆ ದಾಖಲಿಸುವುದು ಹಾಗೂ ಕೊರೋನಾ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದಾಗಿದೆ ಎಂದು ಅವರು ಹೇಳಿದರು.
ಉತ್ತರ ಕನ್ನಡ
ಗೋಮಾತೆಯನ್ನು ಕೊಂದ ಶಾಪ ;ಕೊರೋನಾ ಹೆಚ್ಚುತ್ತಲೇ ಇದೆ.
ಶಿರಸಿ ; ಮಾರಿಕಾಂಬಾ ದೇವಾಲಯದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಯುಗಾದಿ ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಬಣ್ಣದ ಮಠದ ಶಿವಲಿಂಗ ಶ್ರೀಗಳು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀಗಳು "ಯುಗಾದಿ ಹಬ್ಬದ ಆಚರಣೆ ಭಾರತ ಬಿಟ್ಟು ಯಾವ ದೇಶದಲ್ಲೂ ಇಲ್ಲ. ಯುಗಾದಿ ಎಂದರೆ ನಿಸರ್ಗದ ವಿಸ್ಮಯ. ನಿಸರ್ಗವನ್ನು ಅಧ್ಯಯನ ಮಾಡಿ ತನ್ನತನ ಅರ್ಥ ಮಾಡಿಕೊಳ್ಳುವ ಹಬ್ಬವೇ ಯುಗಾದಿಯಾಗಿದೆ."ಎಂದು ಹೇಳಿದರು
"ನಮ್ಮ ದೇಶದ ಪಂಚಕನ್ಯೆಯರಲ್ಲಿ ಗೋಮಾತೆಯೂ ಸಹ ಒಬ್ಬಳಾಗಿದ್ದಾಳೆ.ಈಗ ಆಹಾರಕ್ಕಾಗಿ ಗೋಮಾತೆಯನ್ನು ಕೊಲ್ಲಲಾಗುತ್ತಿದೆ. ಈ ಹತ್ಯೆಯ ಶಾಪದಿಂದಲೇ ಇಂದು ಕೊರೋನಾ ದಿನೇ ದಿನೇ ಹೆಚ್ಚುತ್ತಿದೆ.ಇದಕ್ಕಾಗಿ ರೋಗವನ್ನು ಎದುರಿಸಲಾಗದೇ ಎಲ್ಲಕಡೆಯೂ ಲಾಕ್ ಡೌನ್ ಜಾರಿ ಮಾಡ್ತಿದ್ದಾರೆ. ಸಾರ್ವಜನಿಕರು ಈ ರೀತಿಯ ರೋಗಕ್ಕೆ ಹೆದರುವ ಯಾವುದೇ ಅಗತ್ಯವೇ ಇಲ್ಲ.ಸ್ವಲ್ಪ ದಿನ ಇದ್ದು ಈ ಖಾಯಿಲೆ ಮತ್ತೆ ಕಡಿಮೆಯಾಗುತ್ತದೆ. "ಎಂದರು.
ಕೊಡಗು
ದಳ ಸೇರಿದ ಕಾಂಗ್ರೆಸ್ ನ ಸಕ್ರಿಯ ಕಾರ್ಯಕರ್ತ!
ಮಡಿಕೇರಿ ; ಕಾಂಗ್ರೆಸ್ ಪಕ್ಷದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದರೂ ಸಹ ಕಡೆಗಣಿಸಿದ್ದಕ್ಕಾಗಿ ಕೊಡಗಿನ ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತರಾಗಿದ್ದ ಕೆ. ಇ ಮಾಥ್ಯೂ ಅವರು ಜೆಡಿಎಸ್ ಪಕ್ಷವನ್ನು ಸೇರಿದ್ದಾರೆ.
ಕೆ. ಇ ಮಾಥ್ಯೂ ಅವರು ಅಲ್ಪಸಂಖ್ಯಾತರ ಘಟಕದ ಪ್ರಮುಖರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಸುಮಾರು ಮೂವತ್ತು ವರ್ಷಗಳಿಂದ ಇವರು ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದರು.ಮಡಿಕೇರಿಯಲ್ಲಿರುವ ಜೆಡಿಎಸ್ ಕಛೇರಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಕೆ. ಎಂ ಗಣೇಶ್ ಅವರ ಸಮ್ಮುಖದಲ್ಲಿ ತಾವು ಹಾಗೂ ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್ ಪಕ್ಷ ಸೇರಿದರು.
ಜೆಡಿಎಸ್ ಪಕ್ಷ ಸೇರಿದ್ದರ ಬಗ್ಗೆ ಮಾತನಾಡಿದ ಅವರು "ನಾನು ಕಾಂಗ್ರೆಸ್ ಪಕ್ಷದಲ್ಲಿ ಸುಮಾರು 30 ವರ್ಷಗಳಿಂದ ಸಕ್ರಿಯವಾಗಿದ್ದೇನೆ.ನನ್ನ ಸೇವೆಯನ್ನು ಗುರುತಿಸದೇ, ನಗರಸಭೆ ಚುನಾವಣೆಗೆ ನನಗೆ ಸ್ಪರ್ಧಿಸಲು ಅವಕಾಶವೇ ನೀಡಲಿಲ್ಲ. ಕಾಂಗ್ರೆಸ್ ಪಕ್ಷದಲ್ಲಿನ ಮುಖಂಡರು ಹಾಗೂ ನಾಯಕರ ಈ ನಡೆ ನನಗೆ ಬೇಸರ ತಂದಿದೆ ಇದನ್ನು ಖಂಡಿಸಿ ನಾನು ಜೆಡಿಎಸ್ ಪಕ್ಷವನ್ನು ಸೇರುತ್ತಿದ್ದೇನೆ" ಎಂದು ಹೇಳಿದರು.


0 Comments