ಗ್ರಾಮ ಪಂಚಾಯಿತಿ ಚುನಾವಣೆ ಗೆದ್ದ ನಂತರ ವಿಜಯೋತ್ಸವ ಆಚರಿಸುವ ಬದಲು ಸರ್ಕಾರಿ ಶಾಲೆಯನ್ನು ಸ್ವಚ್ಛಗೊಳಿಸಿ ಅಂದಗಾಣಿಸುವ ಮೂಲಕ ಸುದ್ಧಿಯಾಗಿ ರಾಜ್ಯ ಶಿಕ್ಷಣ ಸಚಿವರು ಹಾಗೂ ಬಿ.ಎಲ್. ಸಂತೋಷ್ ಅವರಿಂದರೂ ಬೆನ್ನು ತಟ್ಟಿಸಿಕೊಂಡಿದ್ದ ಶೃಂಗೇರಿ ತಾಲೂಕಿನ ಅಡ್ಡಗದ್ದೆ ಗ್ರಾಮ ಪಂಚಾಯಿತಿಯ ಕಾವಡಿ ಗ್ರಾಮದ ಸದಸ್ಯ ರಾಘವೇಂದ್ರ ಹಂಚಲಿ ಮತ್ತೊಂದು ವಿಭಿನ್ನ ಯೋಜನೆಗೆ ಕೈಹಾಕಿದ್ದಾರೆ.
ರಾಜಕೀಯಕ್ಕೆ ಬರುವುದು ಎಂದರೆ ಹಣ, ಅಧಿಕಾರದ ಆಸೆಗೆ ಬರುತ್ತಾರೆ ಎಂಬ ವಾತಾವರಣ ಇರುವ ಈ ಸಂಧರ್ಭದಲ್ಲಿ ಹಣ, ಹೆಂಡ ಹಂಚದೇ ಚುನಾವಣೆ ಗೆದ್ದು ಗೆದ್ದ ನಂತರವೂ ಸ್ವಂತ ಹಣದಿಂದ ಗ್ರಾಮದ ಶ್ರೇಯೋಬಲಕ್ಕಾಗಿ ಖರ್ಚು ಮಾಡುತ್ತಿರುವ ಇವರು ನಿಜಕ್ಕೂ ದೇಶದಲ್ಲೇ ಮಾದರಿ ಗ್ರಾಮ ಪಂಚಾಯಿತಿ ಸದಸ್ಯ ಎನ್ನಬಹುದು.
ಚುನಾವಣೆ ಗೆದ್ದ ನಂತರ "ಗ್ರಾಮ ಸೇವಕ್" ಎಂಬ ಪರಿಕಲ್ಪನೆಯೊಂದಿಗೆ ಸರ್ಕಾರಿ ಸೇವೆಗಳನ್ನು ಗ್ರಾಮ ಮಟ್ಟದಲ್ಲಿ ಸಮರ್ಪಕವಾಗಿ ಅನುಷ್ಠಾನ ಮಾಡುವ ಕುರಿತು ಅರ್ಹ ಫಲಾನುಭವಿಗಳಿಗೆ ಸಲಹೆ, ಮಾರ್ಗದರ್ಶನ ಹಾಗೂ ಸಹಾಯ ಮಾಡುವ ನಿಟ್ಟಿನಲ್ಲಿ ಇವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವೈಯಕ್ತಿಕ ಹಿತಾಸಕ್ತಿಯೊಂದಿಗೆ "ಗ್ರಾಮ ಸೇವಕ್" ಎಂಬ ಯೋಜನೆಯನ್ನು ಜಾರಿಗೆ ತಂದಿದ್ದು ಗ್ರಾಮದ ಪ್ರತಿಯೊಬ್ಬರ ಮನೆ ಬಾಗಿಲಿಗೆ ಸರಕಾರದ ಸೇವೆಗಳನ್ನು ತಲುಪಿಸಲು "ಗ್ರಾಮ ಸೇವಕ್" ಆಗಿ ಗಿರಿಜಾ ಪ್ರಸಾದ್ ಎಂಬುವವರನ್ನು ನೇಮಿಸಿದ್ದಾರೆ.
ಅವರು ಪ್ರತಿ ಮನೆ ಬಾಗಿಲಿಗೆ ಸರ್ಕಾರಿ ಯೋಜನೆಗಳ ಕುರಿತು ಮಾಹಿತಿಯನ್ನು ತಲುಪಿಸುತ್ತಾ ಮಾರ್ಗದರ್ಶನ ಮತ್ತು ಸಹಾಯ ಮಾಡುತ್ತಾರೆ. ಅದರ ಸಂಪೂರ್ಣ ಖರ್ಚು ವೆಚ್ಚವನ್ನು ರಾಘವೇಂದ್ರ ಅವರು ತಮ್ಮ ವೈಯಕ್ತಿಕ ಹಣದಿಂದಲೇ ನೀಡುತ್ತಿದ್ದಾರೆ.
ಕೃಷಿ ಯೋಜನೆ, ಆಯುಷ್ಮಾನ್, ಪಡಿತರ ಚೀಟಿ, ಆಧಾರ್ ಕಾರ್ಡ್, ಮತದಾನದ ಗುರುತಿನ ಚೀಟಿ, ಜಾಬ್ ಕಾರ್ಡ್, ವೃದ್ಧಾಪ್ಯ ವೇತನ, ವಿಧವಾ ವೇತನ, ಕೃಷಿ ಸಮ್ಮಾನ್ ಯೋಜನೆ, ಆರೋಗ್ಯ ಸಂಬಂಧಿತ ಯೋಜನೆಗಳು, ಅಂಗವಿಕಲರಿಗೆ ಸಂಬಂಧಿಸಿದ ಯೋಜನೆಗಳು, ಬೆಳೆ ವಿಮೆ, ಸುಕನ್ಯಾ ಯೋಜನೆ ಸೇರಿದಂತೆ ಸರ್ಕಾರದ ಯೋಜನೆಗಳನ್ನು
ಪ್ರತಿಯೊಂದು ಮನೆಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಅದೂ ಗ್ರಾಮಸ್ಥರಿಂದ ಯಾವುದೇ ಶುಲ್ಕ ಪಡೆಯದೇ.
ಕಳೆದ ಎರಡು ತಿಂಗಳಿನಿಂದ ಈ ಕಾರ್ಯ ಯಶಸ್ವಿಯಾಗಿ ನಡೆಯುತ್ತಿದ್ದು, ಮುಂದಿನ ತಮ್ಮ ಒಟ್ಟು ಐದು ವರ್ಷಗಳ ಅಧಿಕಾರಾವಧಿಯಲ್ಲೂ ಜನರ ಅನುಕೂಲಕ್ಕಾಗಿ ಗ್ರಾಮ ಸೇವಕ್ ನೇಮಕದಲ್ಲಿರುತ್ತಾರೆ ಎನ್ನುತ್ತಾರೆ ರಾಘವೇಂದ್ರ ಹಂಚಲಿ.
ಈ ಕುರಿತು ಪ್ರತಿಕ್ರಿಯಿಸಿರುವ ಗ್ರಾಮಸ್ಥರು ಮೊದಲೆಲ್ಲಾ ಯಾವುದೇ ಸರ್ಕಾರದ ಯೋಜನೆಗಳು ಬಂದಲ್ಲಿ ನಮಗೆ ಮಾಹಿತಿ ಸಿಗುತ್ತಿರಲಿಲ್ಲ, ಯಾವ ಕೆಲಸವನ್ನು ಎಲ್ಲಿ ಹೋಗಿ ಹೇಗೆ ಮಾಡಬೇಕೆಂದು ತಿಳಿಯುತ್ತಿರಲಿಲ್ಲ ಈಗ ನಮ್ಮ ಸದಸ್ಯರ ಕಡೆಯಿಂದ ನೇಮಕವಾಗಿರುವ ಪತಿನಿಧಿ ಈ ಕುರಿತು ಎಲ್ಲಾ ಮಾಹಿತಿಗಳನ್ನು ನೀಡುತ್ತಾರೆ, ಯಾವುದೇ ತೊಂದರೆ ಇದ್ದರೆ ರಾಘವೇಂದ್ರ ಅವರೇ ಮನೆಗೆ ಬರುತ್ತಾರೆ. ಇದರಿಂದ ನಮಗೆ ಬಹಳಷ್ಟು ಅನುಕೂಲಗಳಾಗುತ್ತಿವೆ ಎನ್ನುತ್ತಾರೆ.
ಮಾದರಿ ಸದಸ್ಯ ರಾಘವೇಂದ್ರ ಹಂಚಲಿ ಅವರಿಗೊಂದು ಕರೆ ಮಾಡಿ ಶುಭಾಶಯ ತಿಳಿಸಿ +919480195885



0 Comments