ಚಿಕ್ಕಮಗಳೂರು : ಮಾನಹಾನಿ, ಸುಳ್ಳು ಆರೋಪ, ಹಾಗೂ ಗೌರವಕ್ಕೆ ಚ್ಯುತಿ ಬರುವಂತಹ ವರದಿ ಮಾಡಿದ್ದರ ಆರೋಪದ ಮೇಲೆ ಪತ್ರಿಕೆಯೊಂದರ ಸಂಪಾದಕ ಹಾಗೂ ಪ್ರಕಾಶಕರಿಗೆ ಕೆಳ ನ್ಯಾಯಾಲಯ ನೀಡಿದ್ದ ಜೈಲು ಶಿಕ್ಷೆ ಹಾಗೂ ದಂಡದ ತೀರ್ಪನ್ನು ಜಿಲ್ಲಾ ನ್ಯಾಯಾಲಯ ಎತ್ತಿ ಹಿಡಿದು ಶಿಕ್ಷೆಯನ್ನು ಖಾಯಂಗೊಳಿಸಿದೆ ಎಂದು ಸಾಮಾಜಿಕ ಹೋರಾಟಗಾರ ಹಾಗೂ ಪರಿಸರವಾದಿ ಕಲ್ಕುಳಿ ವಿಠಲ್‍ ಹೆಗ್ಡೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.


2007ರ ಜುಲೈ 3ರಂದು ಕರ್ನಾಟಕದ ಖಾಸಗಿ ಧೈನಿಕದಲ್ಲಿ ತಪ್ಪು ವರದಿ ಪ್ರಕಟಿಸಿದ್ದ ಪತ್ರಿಕೆಯ ಸಂಪಾದಕರು ಹಾಗೂ ಪ್ರಕಾಶಕರು ಶಿಕ್ಷೆಗೆ ಗುರಿಯಾಗಿದ್ದು, "ಕಲ್ಕುಳಿ ವಿಠಲ್ ಹೆಗ್ಡೆ ನಕ್ಸಲ್ ಬೆಂಬಲಿಗ" ಎಂಬ ಶೀರ್ಷಿಕೆಯಡಿಯಲ್ಲಿ ಛಾಯಾಚಿತ್ರ ಸಮೇತ ತನ್ನ ವಿರುದ್ಧ ಸುಳ್ಳು ವರದಿ ಮಾಡಲಾಗಿತ್ತು. ಈ ವರದಿ ವಿರುದ್ಧ ಶೃಂಗೇರಿ ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲಾಗಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ 2019, ಜನವರಿ 25ನೇ ತಾರೀಖಿನಂದು ತೀರ್ಪು ಪ್ರಕಟಿಸಿ ಶಿಕ್ಷೆಯನ್ನು ವಿಧಿಸಿತ್ತು. ಈ ತೀರ್ಪನ್ನು ಜಿಲ್ಲಾ ಸತ್ರ ನ್ಯಾಯಾಲಯ ಎತ್ತಿ ಹಿಡಿದಿದೆ ಎಂದು ತಿಳಿಸಿದ್ದಾರೆ.


ಜಿಲ್ಲಾ ನ್ಯಾಯಾಲಯ ಇಬ್ಬರು ಆರೋಪಿಗಳಿಗೆ 40 ಸಾವಿರ ರೂ. ದಂಡ ಹಾಗೂ 7 ತಿಂಗಳ ಸಜೆಯನ್ನು ಖಾಯಂಗೊಳಿಸಿ ಆದೇಶಿಸಿದೆ. ಚಾರಿತ್ರ್ಯ ಹರಣ ಮಾಡಿರುವುದರಿಂದ ದೂರುದಾರರಿಗೆ 35 ಸಾವಿರ ರೂ. ಪರಿಹಾರವನ್ನು ಹಾಗೂ ಸರಕಾರಕ್ಕೆ 5 ಸಾವಿರ ರೂ. ದಂಡವನ್ನು ಪಾವತಿಸಬೇಕೆಂದು, ತಪ್ಪಿದಲ್ಲಿ 7 ತಿಂಗಳ ಜೈಲು ಶಿಕ್ಷೆಗೆ ನ್ಯಾಯಾಲಯ ಆದೇಶಿಸಿದೆ ಎಂದು ವಿಠಲ್‍ ಹೆಗ್ಡೆ ತಿಳಿಸಿದ್ದಾರೆ.


ಸಾಮಾಜಿಕ ಹೋರಾಟಗಾರನಾದ ನನ್ನ ಚಳವಳಿಗಳನ್ನು ಹತ್ತಿಕ್ಕುವ ದುರುದ್ದೇಶದಿಂದ ಸಾರ್ವಜನಿಕರಲ್ಲಿ ನನ್ನ ಬಗ್ಗೆ ಅಗೌರವವನ್ನುಂಟು ಮಾಡಿ ನನ್ನನ್ನು ಮತ್ತು ನಮ್ಮ ಚಳುವಳಿಗಳನ್ನು ಹಿಮ್ಮೆಟ್ಟಿಸಲು ಈ ವರದಿ ಮೂಲಕ ಸಂಚು ಮಾಡಲಾಗಿತ್ತು. ಆದರೆ ನ್ಯಾಯಾಲಯದ ತೀರ್ಪಿನಿಂದಾಗಿ ಸುಳ್ಳು ಪ್ರಕಟಿಸಿದ ಇಬ್ಬರು ಪತ್ರಕರ್ತರಿಗೆ ತಕ್ಕ ಶಿಕ್ಷೆಯಾಗಿದೆ. ನಮ್ಮ ಹೋರಾಟ ಎಂದಿಗೂ ಪ್ರಜಾತಾಂತ್ರಿಕವಾಗಿಯೂ, ಸಾಂವಿಧಾನಿಕ ಚೌಕಟ್ಟಿನಲ್ಲಿಯೇ ನಡೆಯುತ್ತಿರುವುದಕ್ಕೆ ಈ ತೀರ್ಪೇ ಸಾಕ್ಷಿ ಹಾಗೂ ಇದು ಜನಪರ ಹೋರಾಟಗಾರರಿಗೆ ಸಿಕ್ಕ ಜಯವಾಗಿದೆ ಎಂದು ಅವರು ಹೇಳಿದರು.