ಚಿಕ್ಕಮಗಳೂರು

ಹೆಚ್ಚಿನ ಬೆಲೆಗೆ ರಸಗೊಬ್ಬರ ಮಾರಿದರೆ ಕಠಿಣ ಕ್ರಮ: ಚಿಕ್ಕಮಗಳೂರು ಜಂಟಿ ಕೃಷಿ ನಿರ್ದೇಶಕರಿಂದ ಪ್ರಕಟಣೆ

ಚಿಕ್ಕಮಗಳೂರು: ರಸಗೊಬ್ಬರಗಳನ್ನು ಖರೀದಿ ಮಾಡುವ ರೈತರಿಗೆ ಚಿಕ್ಕಮಗಳೂರಿನ ಜಂಟಿ ಕೃಷಿ ನಿರ್ದೇಶಕರಾದ ಡಾ. ಎಂ ತಿರುಮಲೇಶರವರು ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ. 

ಜಿಲ್ಲೆಯ ಯಾವುದೇ ರಸಗೊಬ್ಬರ ಮಾರಾಟಗಾರರು ರಸಗೊಬ್ಬರ ಚೀಲದ ಮೇಲೆ ನಮೂದಿಸಿರುವ ಎಂ.ಆರ್.ಪಿ. ದರಗಳಿಗಿಂತ  ಹೆಚ್ಚಿನ ದರದಲ್ಲಿ  ಮಾರಾಟ ಮಾಡಿದಲ್ಲಿ ತಪ್ಪದೆ ಹತ್ತಿರದ ರೈತ ಸಂಪರ್ಕ ಕೇಂದ್ರ/ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಗಳನ್ನು ಸಂಪರ್ಕಿಸಿ ದೂರು ನೀಡಲು ಸೂಚಿಸಿದ್ದಾರೆ. 

ಯಾವುದೇ ರಸಗೊಬ್ಬರ ಮಾರಾಟಗಾರರು ರಸಗೊಬ್ಬರ ಮಾರಾಟ ದರಗಳು ಏಪ್ರಿಲ್ ಒಂದರಿಂದ ಏರಿಕೆಯಾಗಿದೆ ಎಂಬ  ನೆಪವೊಡ್ಡಿ ಎಂ.ಆರ್.ಪಿ. ದರಗಳಿಗಿಂತ ಹೆಚ್ಚಿನ ದರದಲ್ಲಿ ಯಾವುದೇ ಕಾರಣಕ್ಕೂ ರೈತರಿಗೆ ರಸಗೊಬ್ಬರಗಳನ್ನು ಮಾರಾಟ ಮಾಡುವಂತಿಲ್ಲ. ಆದುದರಿಂದ ಎಲ್ಲ ರೈತ ಬಾಂಧವರು ಜಾಗರೂಕತೆಯಿಂದ ರಸಗೊಬ್ಬರ ಚೀಲದ ಮೇಲೆ ನಮೂದಿಸಿರುವ ಎಂಆರ್ ಪಿ ದರದಲ್ಲಿಯೇ ರಸಗೊಬ್ಬರಗಳನ್ನು ಖರೀದಿಸಲು ಆದೇಶ ಹೊರಡಿಸಿದ್ದಾರೆ


ಚಿಕ್ಕಮಗಳೂರಿನಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತನ ಹತ್ಯೆ!

ಚಿಕ್ಕಮಗಳೂರು :ಚಿಕ್ಕಮಗಳೂರು ನಗರದಲ್ಲಿ ವಾಸವಿರುವ, ಹಿಂದೂ ಸಂಘಟನೆಯ ಕಾರ್ಯಕರ್ತರಾಗಿದ್ದ ಮನೋಜ್ ಅವರ ಮೇಲೆ ಬುಧವಾರ ತಡರಾತ್ರಿ ಅಪರಿಚಿತ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಮನೋಜ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಸಂಜೆ ಸುಮಾರಿಗೆ ಮನೋಜ್ ಮೃತಪಟ್ಟಿದ್ದಾರೆ. ಈ ಕೃತ್ಯಕ್ಕೆ ಕಾರಣ ಏನು ಎಂಬುದು ಇನ್ನೂ ತಿಳಿದುಬಂದಿಲ್ಲ. ಪೋಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದು ಇನ್ನುಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ.


ಹಾಸನ

ಬಿಜೆಪಿ ಕಾಂಗ್ರೆಸ್ ಗೆ ಮತ ಕೇಳುವ ನೈತಿಕ ಹಕ್ಕಿಲ್ಲ - ರೇವಣ್ಣ ವಾಗ್ದಾಳಿ

ಬೇಲೂರು ; ವಿ. ಆರ್ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಜೆಡಿಎಸ್ ಆಯೋಜಿಸಿದ್ದ ಪುರಸಭೆ, ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಯ ಪೂರ್ವಭಾವಿ ಸಭೆಯಲ್ಲಿ ಹೆಚ್ ಡಿ ರೇವಣ್ಣ ಬಿಜೆಪಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

"ಈಗಿನ ಬಿಜೆಪಿ ರಾಜ್ಯ ಸರ್ಕಾರ ಪದೇ ಪದೇ ಇಂಧನದ ಬೆಲೆ ಏರಿಸುತ್ತಲೇ ಬಂದಿದೆ.ನಾನು ಈ ಹಿಂದೆ ಇಂಧನ ಸಚಿವನಾಗಿದ್ದಾಗ ಇಂಧನದ ಬೆಲೆಯನ್ನು ಏರಿಸಿರಲಿಲ್ಲ.ಅಭಿವೃದ್ಧಿ ಕಡೆ ನಾನು ಆಸಕ್ತಿ ನೀಡಿದ್ದರಿಂದ ನನ್ನನ್ನು ಸೂಪರ್ ಸಿಎಂ ಎಂದೆಲ್ಲಾ ಕರೆದರು. ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಮತ ಕೇಳುವ ನೈತಿಕ ಹಕ್ಕಿಲ್ಲ" ಎಂದು ಟೀಕಿಸಿದರು. ನಂತರ ಹಾಸನ ಕ್ಷೇತ್ರದ ಚುನಾವಣೆಗಳ ಬಗ್ಗೆ ಮಾತನಾಡಿದ ರೇವಣ್ಣ, " ನಮ್ಮ ಪಕ್ಷದಲ್ಲಿ ಹಲವಾರು ನಿಷ್ಠಾವಂತ ಕಾರ್ಯಕರ್ತರಿದ್ದಾರೆ, ಅಲ್ಲದೇ ಹಾಸನದಲ್ಲಿ ಜೆಡಿಎಸ್ ಪ್ರಬಲ ಪಕ್ಷವಾಗಿದೆ. ನಿಷ್ಠಾವಂತರಿಗೆ ಟಿಕೆಟ್ ನೀಡಲಾಗುತ್ತದೆ. ಕಾರ್ಯಕರ್ತರು ಅವರ ಗೆಲುವಿಗೆ ಶ್ರಮಿಸಬೇಕಾಗಿದೆ "ಎಂದು ಹೇಳಿದರು.


ಕೊಡಗು

ಕೋವಿಡ್ ಹೆಚ್ಚಳ ; ಕೋವಿಡ್ ಆಸ್ಪತ್ರೆ ಪುನರಾರಂಭ

ಕುಶಾಲನಗರ ; ಕೊಡಗಿನ ಕುಶಾಲನಗರ ವ್ಯಾಪ್ತಿಯಲ್ಲಿ ಇತ್ತೀಚೆಗೆ ಕೊರೋನಾ ಪ್ರಕರಣಗಳು ಹೆಚ್ಚುತ್ತಿವೆ .ಇದರ ಬಗ್ಗೆ ಸೋಮವಾರಪೇಟೆ ತಾಲೂಕಿನ ತಹಸೀಲ್ದಾರರಾದ ಗೋವಿಂದರಾಜು ಅವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ವೈದ್ಯಾಧಿಕಾರಿಗಳ ಕಛೇರಿಯಲ್ಲಿ ಸಭೆ ನಡೆಸಿ ಚರ್ಚಿಲಾಯಿತು. ಜನರ ಆರೋಗ್ಯ ಹಾಗೂ ಕೋವಿಡ್ ತಡೆಗಟ್ಟುವ ದೃಷ್ಟಿಯಿಂದ ಈ ಹಿಂದೆ ಕೋವಿಡ್ ಆಸ್ಪತ್ರೆಯಾಗಿದ್ದ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಪುನಃ ಕೋವಿಡ್ ಆಸ್ಪತ್ರೆಯನ್ನಾಗಿ ಪುನರಾರಂಭ ಮಾಡಲು ನಿರ್ಧರಿಸಲಾಯಿತು.


ಶಿವಮೊಗ್ಗ

ಬ್ಯಾಂಕ್ ಆಡಳಿತ ಮಂಡಳಿ ಹಾಗೂ ಅಧ್ಯಕ್ಷರ ಮಧ್ಯೆ ಜಗಳ!

ಶಿವಮೊಗ್ಗ ; ಇಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಚೆನ್ನವೀರಪ್ಪ ಅವರ ವಿರುದ್ಧ ಆಡಳಿತ ಮಂಡಳಿಯ ನಿರ್ದೇಶಕರಾದ ದುಗ್ಗಪ್ಪಗೌಡ ಅವರು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ದುಗ್ಗಪ್ಪಗೌಡ ಅವರು, ಹಿಂದಿನ ಅಧ್ಯಕ್ಷರಾಗಿದ್ದ ಮಂಜುನಾಥ್ ಗೌಡ ಅವರು ಸಮರ್ಥವಾಗಿದ್ದರು, ಯಾರ ಮೇಲೂ ಅಹಿತಕರವಾಗಿ ನಡೆದುಕೊಳ್ಳದೇ ಬ್ಯಾಂಕ್ ಮುನ್ನಡೆಸುತ್ತಿದ್ದರು. ಆಡಳಿತ ಮಂಡಳಿಯವರ ಸಲಹೆ ಹಾಗೂ ಮಾತುಗಳಿಗೆ ಬೆಲೆ ನೀಡುತ್ತಿದ್ದರು.ಆದರೆ ಚನ್ನವೀರಪ್ಪನವರು ದೌರ್ಜನ್ಯ ಮಾಡುತ್ತಾರೆ. ಅವರೊಬ್ಬರೇ ಮುಖ್ಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ರೈತರ ಬೆಳೆ ಸಾಲ ಮನ್ನಾ ಮಾಡುವುದರಲ್ಲೂ ಸಹ ಕಮಿಷನ್ ದಂಧೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.