ರಾಜ್ಯಾದ್ಯಂತ ಸಾರಿಗೆ ನಿಗಮಗಳ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು ಹಾಗೂ ಆರನೇ ವೇತನ ಆಯೋಗದ ಶಿಫಾರಸು ಮಾದರಿಯಲ್ಲಿ ವೇತನ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿ ರಾಜ್ಯದ್ಯಂತ ಕೆಎಸ್ಸಾರ್ಟಿಸಿ ನೌಕರರು ನಡೆಸಿದ ಪ್ರತಿಭಟನೆ ಹೈಕೋರ್ಟ್ ಆದೇಶದ ಬಳಿಕ ಕೈಬಿಡಲಾಗಿತ್ತು. ಈ ನಡುವೆ ಪ್ರಯಾಣಿಕರಿಗೆ ತೊಂದರೆಯಾಗಬಾರದೆಂದು ಸ್ವಹಿತಾಸಕ್ತಿಯಿಂದ ಪ್ರಯಾಣಿಕರ ಸೇವಗೆ ಹಾಜರಾದ ಡ್ರೈವರ್ ಒಬ್ಬರಿಗೆ ಸಾರ್ವಜನಿಕರಿಂದ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ.

ಸುಮಾರು 15 ದಿನಗಳವರೆಗೆ ನಡೆದ ನೌಕರರ ಮುಷ್ಕರದ ಮಧ್ಯೆಯೂ ಕೆಎಸ್ಸಾರ್ಟಿಸಿಯ ಬಸ್ ಚಾಲಕ ಕಮ್ ನಿರ್ವಾಹಕ ಆಗಿರುವ ನಾರಾಯಣ ಮೂರ್ತಿ ಅವರು ಕರ್ತವ್ಯಕ್ಕೆ ಹಾಜರಾಗಿದ್ದರು. ನಾರಾಯಣ್ ಅವರು ಮೂಲತಃ ಶೃಂಗೇರಿಯವರಾಗಿದ್ದು ಶೃಂಗೇರಿ-ಬೆಂಗಳೂರು ಮಾರ್ಗದ ರಾಜಹಂಸ ಬಸ್ ಚಾಲಕರಾಗಿ ಸೇವೆ ಸಲ್ಲಿಸುತ್ತಿದ್ದು, ಸದ್ಯ ರಜೆಯಲ್ಲಿದ್ದರು. ಆದರೆ ಸಾರಿಗೆ ನೌಕರರ ಪ್ರತಿಭಟನೆ ಇರುವಾಗ ಪ್ರಯಾಣಿಕರಿಗೆ ತೊಂದರೆಯಾಗಬಾರದೆಂದು ಕರ್ತವ್ಯಕ್ಕೆ ಹಾಜರಾಗಿದ್ದರು. ಪ್ರಯಾಣಿಕರ ಹಿತದೃಷ್ಟಿಯಿಂದ ಸೇವೆಯಲ್ಲಿ ತೊಡಗಿದ್ದ ನಾರಾಯಣ ಮೂರ್ತಿ ಅವರಿಗೆ ಸಾರ್ವಜನಿಕರು ಸನ್ಮಾನ ಮಾಡಿದ್ದಾರೆ.

ಈ ಕುರಿತು ನ್ಯೂಸ್ ಮಲ್ನಾಡ್ ನೊಂದಿಗೆ ಮಾತನಾಡಿದ ಚಾಲಕ ನಾರಾಯಣ್ ಮೂರ್ತಿ, ಕಳೆದ 19 ವರ್ಷದಿಂದ ಸಾರ್ವಜನಿಕರ ಸೇವೆಯಲ್ಲಿದ್ದೇನೆ. ಒಬ್ಬ ಸಾರಿಗೆ ನೌಕರನಾಗಿ ಮುಷ್ಕರಕ್ಕೆ ನನ್ನ ಬೆಂಬಲವಿದೆ ಆದರೆ ಸಾರ್ವಜನಿಕರಿಗೆ, ಶೃಂಗೇರಿಗೆ ಪ್ರತಿನಿತ್ಯ ಬರುವ ಪ್ರವಾಸಿಗರಿಗೆ, ಪರೀಕ್ಷೆ ಇರುವ ವಿಧ್ಯಾರ್ಥಿಗಳಿಗೆ ತೊಂದರೆಯಾಗಬಾದೆಂಬ ಉದ್ದೇಶದಿಂದ ಸೇವೆಗೆ ಹಾಜರಾದೆ. ಯಾರಾದರೂ ಕಲ್ಲೆಸೆಯುತ್ತಾರೆಂಬ ಸುದ್ದಿ ಬರುತ್ತಿದ್ದರೂ ನಿಮ್ಮೊಂದಿಗೆ ನಾವಿದ್ದೇವೆ ಎಂದು ಚಿಕ್ಕಮಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್ ಟಿ. ವೀರೇಶ್, ಡಿಪೋ ಮ್ಯಾನೇಜರ್ ಆದ ಕರುಣಾಕರ್ ಪಡುಕೋಣೆ, ಹಾಗೂ ಪ್ರದೀಪ್ ಅವರು ನನ್ನ ಬೆಂಬಲಕ್ಕೆ ನಿಂತಿದ್ದರು. ಅಲ್ಲದೆ ಪ್ರಯಾಣಿಕರೂ ಕೂಡ ಸಹಕಾರ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

 ಚಾಲಕರಾದ ನಾರಾಯಣ ಮೂರ್ತಿ ಅವರಿಗೆ ಸಂಸ್ಥೆಯ ಎಂ.ಡಿ ಪ್ರಮಾಣ ಪತ್ರ ನೀಡುತ್ತಿರುವುದು

ಶೃಂಗೇರಿ, ಬಾಳೆಹೊನ್ನೂರು  ಸೇರಿದಂತೆ ಸುತ್ತಮುತ್ತಲಿನ ತಮ್ಮ ಮಾರ್ಗದಲ್ಲಿ, ಚಾಲಕರಾದ ನಾರಾಯಣ‌ ಮೂರ್ತಿ ಅವರು ‘ಭಟ್ರು’ ಅಂತಲೇ ಅಚ್ಚುಮೆಚ್ಚಾಗಿದ್ದಾರೆ. ಸಾರಿಗೆ ಬಂದ್ ನಂತಹ ಸಂಧರ್ಭದಲ್ಲೂ ಜನರ ಸೇವೆಗೆಂದು ಮುಂದೆ ಬಂದ ಚಾಲಕರಾದ ನಾರಾಯಣ್ ಅವರಿಗೆ ಕರೆ ಮಾಡಿ ಶುಭಾಶಯ ತಿಳಿಸಿ. +9194488 69479