ಚಿಕ್ಕಮಗಳೂರು

ಕಾಂಗ್ರೆಸ್ ಎಡಬಿಡಂಗಿ ಪಕ್ಷ ; ಮಲ್ಲಿಕಾರ್ಜುನ ಖರ್ಗೆಗೆ ಟಾಂಗ್ ಕೊಟ್ಟ ಸಿ. ಟಿ. ರವಿ

ಚಿಕ್ಕಮಗಳೂರು ; ಮಲ್ಲಿಕಾರ್ಜುನ ಖರ್ಗೆಯವರ ಹೇಳಿಕೆಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ತಿರುಗೇಟು ಕೊಟ್ಟಿದ್ದಾರೆ. "ಭಾರತೀಯ ಜನತಾ ಪಕ್ಷಕ್ಕೆ ರಾಹುಲ್ ಗಾಂಧಿ ಕಂಡರೆ ಭಯ" ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು.

ಇದಕ್ಕೆ ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಸಿ. ಟಿ. ರವಿ "ರಾಹುಲ್ ಗಾಂಧಿ ಕಂಡರೆ ಬಿಜೆಪಿಗೆ ಭಯ ಎಂದು ಖರ್ಗೆ ಹೇಳಿದ್ದಾರೆ. ಆದರೆ ರಾಹುಲ್ ಗಾಂಧಿ ಅವರ ನೇತ್ರತ್ವದಲ್ಲೇ ನಡೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರೇ ಗೆಲ್ಲಲಿಲ್ಲ. ನೀವು ಯಾವ ಚುನಾವಣೆಯಲ್ಲಿ ಗೆದ್ದಿದ್ದೀರಿ?"

"ಕಾಂಗ್ರೆಸ್ ನ ರಾಹುಲ್ ಗಾಂಧಿ ನೇತ್ರತ್ವದಲ್ಲಿ ರಾಜ್ಯದಲ್ಲಿ ಚುನಾವಣೆಯೂ ನಡೆದಿತ್ತು. ಆದರೆ ಕಾಂಗ್ರೆಸ್ ಗೆದ್ದಿದ್ದು ಮಾತ್ರ 1 ಕ್ಷೇತ್ರವನ್ನು ಮಾತ್ರ. ಒಂದು ಅದೇ ಕ್ಷೇತ್ರದಲ್ಲಿ ಬಿಜೆಪಿಯಿಂದ ಒಬ್ಬ ಬಲಿಷ್ಠ ಅಭ್ಯರ್ಥಿಯನ್ನು ನಿಲ್ಲಿಸಿದರೆ ಆ ಕ್ಷೇತ್ರದಲ್ಲೂ ಸಹ ನಮ್ಮ ಪಕ್ಷವೇ ಗೆಲ್ಲುತ್ತಿತ್ತು.ಕಾಂಗ್ರೆಸ್ ಒಂದು ನಿರ್ದಿಷ್ಟ ಉದ್ದೇಶ ಇಲ್ಲ. ಅದೊಂದು ಎಡಬಿಡಂಗಿತನದಿಂದ ಕೂಡಿದ ಪಕ್ಷವಾಗಿದೆ "ಎಂದು ಟಾಂಗ್ ನೀಡಿದರು.


ಕೊಡಗು

ಪಟ್ಟಣ ಪಂಚಾಯಿತಿ ಸಭೆ ಬಹಿಷ್ಕರಿಸಿ ಹೊರನಡೆದ ಸದಸ್ಯರು.

ವಿರಾಜಪೇಟೆ ; ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶ್ಮಿತಾ ಅವರು ಸೋಮವಾರ ಸಭೆ ನಡೆಸುವಾಗ ಸದಸ್ಯರು ಸಭೆ ಬಹಿಷ್ಕರಿಸಿ ಹೊರನಡೆದ ಘಟನೆ ನಡೆದಿದೆ. ಕೊರೋನಾ ಲಸಿಕೆ ನೀಡುವುದರ ಬಗ್ಗೆ ಸದಸ್ಯರಿಗೆ ಮಾಹಿತಿ ನೀಡದ ಕಾರಣ ಈ ಘಟನೆ ನಡೆದಿದೆ.

ಸಭೆಯು ಶುರುವಾಗುತ್ತಿದ್ದಂತಲೇ ಬಿಜೆಪಿ ಸದಸ್ಯ ಮಹಾದೇವ್ ಮಾತನಾಡಿ "ಗಾಂಧಿನಗರದಲ್ಲಿ ಕೋವಿಡ್ ನಿಯಂತ್ರಿಸುವ ಕೋವಿಡ್ ಲಸಿಕೆ ನೀಡಲಾಗಿತ್ತು. ಏಪ್ರಿಲ್ 11 ರಂದು ಲಸಿಕೆ ನೀಡುವ ಕಾರ್ಯ ನಡೆದಿತ್ತು. ಆದರೆ ಈ ಕಾರ್ಯಕ್ರಮದ ಬಗ್ಗೆ ಸದಸ್ಯರಾದ ನಮಗೆ ಮಾಹಿತಿಯನ್ನೇ ನೀಡಿಲ್ಲ. ನಾವು ಚುನಾಯಿತ ಪ್ರತಿನಿಧಿಗಳು ನಮಗೆ ಬೆಲೆಯಿಲ್ಲವೇ?" ಎಂದು ಕಿಡಿಕಾರಿದರು. ಈ ಮಾತು ಹೇಳುತ್ತಿದ್ದಂತೆಯೇ ಉಳಿದೆಲ್ಲ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಕಾಂಗ್ರೆಸ್ ನ ರಂಜಿ ಪೂಣಚ್ಛ, ಮಹಮ್ಮದ್ ರಫಿ, ರಾಜೇಶ್, ಜೆಡಿಎಸ್ ಸದಸ್ಯ ಮತೀನ್ ಸಭೆಯನ್ನು ಬಹಿಷ್ಕರಿಸಿ ಹೊರನಡೆದರು


ಉತ್ತರ ಕನ್ನಡ

ಸೆಲ್ಫಿ ತಂದ ಆಪತ್ತು ; ಪ್ರೇಮಿಗಳು ನೀರುಪಾಲು!

ಸೆಲ್ಫಿ ಬಂದಮೇಲೆ ಜನರು ಒಂದಲ್ಲ ಒಂದು ರೀತಿಯಲ್ಲಿ ಯಡವಟ್ಟು ಮಾಡಿಕೊಳ್ತಾರೆ. ಹುಚ್ಚು ಸೆಲ್ಫಿಗಳಿಗೆ ಬಲಿಯಾಗುವವರೇ ಹೆಚ್ಚು. ಉತ್ತರಕನ್ನಡದ ಜೊಯಿಡಾದ ಗಣೇಶಗುಡಿಯ ಸೇತುವೆಯಲ್ಲಿ ಪ್ರೇಮಿಗಳು ನೀರುಪಾಲಾಗಿದ್ದಾರೆ.

ಬೀದರ್ ನ ಯುವತಿ ರಕ್ಷಿತಾ ಯುವಕ ಪುರುಷೋತ್ತಮ ಪಾಟೀಲ ಪ್ರೇಮಿಗಳು ಮೃತರಾದವರು. ರಕ್ಷಿತಾ ಗುಲ್ಬರ್ಗದಲ್ಲಿ ಎಂಜಿನಿಯರಿಂಗ್ ಅಧ್ಯಯನ ನಡೆಸುತ್ತಿದ್ದರು. ಪುರುಷೋತ್ತಮ್ ಬೀದರ್ ನ ಕರ್ನಾಟಕ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದರು. ಸೂಫಾ ಜಲಾಶಯದ ಕಾಳಿ ನದಿಯ ಸೇತುವೆಯ ಕೆಳಮಟ್ಟದ ಕಟ್ಟೆಯಲ್ಲಿ ಇಬ್ಬರು ಸೆಲ್ಫಿ ತೆಗೆಯುತ್ತಿದ್ದರು. ಆಗ ಕಾಲುಜಾರಿ ನದಿಗೆ ಬಿದ್ದಿದ್ದಾರೆ ಎಂದು ಘಟನೆಯ ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ದೇಹಗಳಿಗಾಗಿ ಶೋಧಕಾರ್ಯ ನಡೆಸುತ್ತಿದ್ದವರಿಗೆ ಮೃತರ ದೇಹಗಳು ಸಿಕ್ಕಿವೆ ಎಂದು ವರದಿಯಾಗಿದೆ.


ಹಾಸನ

ಮುಂದುವರೆದ ಸಾರಿಗೆ ನೌಕರರ ಮುಷ್ಕರ ; ವಿಷ ಸೇವಿಸಿದ ನೌಕರ!

ಹಾಸನ; ವಿವಿಧ ಬೇಡಿಕೆಗಳ ಈಡೇರಿಸಬೇಕೆಂದು ಆಗ್ರಹಿಸಿ ಸಾರಿಗೆ ನೌಕರರ ಮುಷ್ಕರ ಮುಂದುವರೆದಿದೆ. ಹಾಸನ ಚಿಕ್ಕಮಗಳೂರು ಸಾರಿಗೆ ನೌಕರರ ಪತ್ತಿನ ಸಂಘದ ಉಪಾಧ್ಯಕ್ಷ ಪಾಲಾಕ್ಷ ಎಂಬುವವರು ವಿಷ ಸೇವಿಸಿದ್ದಾರೆ.

"ಈಗಿರುವ ಸರ್ಕಾರಕ್ಕೆ ಕಣ್ಣೇ ಇಲ್ಲ. ಸಾರಿಗೆ ನೌಕರರಿಗೆ ಆದಷ್ಟು ಬೇಗ ನ್ಯಾಯ ದೊರಕಬೇಕು.ಸಾರಿಗೆ ನೌಕರರಿಗೆ ಅನ್ಯಾಯವಾಗುತ್ತಿದೆ. "ಎಂದು ಪಾಲಾಕ್ಷ ಅವರು ಆರೋಪಿಸಿದರು.