ಚಿಕ್ಕಮಗಳೂರು

ಮೆಣಸೆಯಲ್ಲಿ ಕೊರೋನಾ ಜಾಗೃತಿ ಜಾಥಾ ಅಭಿಯಾನ

ಮೆಣಸೆ ; ತಾಲ್ಲೂಕಿನ ಮೆಣಸೆ ಗ್ರಾಮ ಪಂಚಾಯ್ತಿಯಲ್ಲಿ ಕೊರೋನಾ ಜಾಗೃತಿ ಜಾಥಾ ಅಭಿಯಾನ ಕಾರ್ಯಕ್ರಮ ನಡೆಸಲಾಯಿತು. ಗ್ರಾಮ ಪಂಚಾಯಿತಿ ಸದಸ್ಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು, ಪಿಡಿಒ ಹಾಗೂ ತಾಲ್ಲೂಕಿನ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಜಾಥಾದಲ್ಲಿ ಪಾಲ್ಗೊಂಡರು.

ಕಾರ್ಯಕ್ರಮದಲ್ಲಿ ಆಸ್ಪತ್ರೆಯ ಸಿಬ್ಬಂದಿ ಮಾತನಾಡಿ " ಜನರು ತಮಗೆ ಎಲ್ಲಿ ಕೊರೋನಾ ಒಕ್ಕರಿಸುತ್ತದೆ ಎಂದು ಹೆದರುವ ಅಗತ್ಯವಿಲ್ಲ. 45 ವರ್ಷ ಮೇಲ್ಪಟ್ಟವರಿಗೆಲ್ಲ ಉಚಿತವಾಗಿ ಲಸಿಕೆ ನೀಡುವ ವ್ಯವಸ್ಥೆ ಲಭ್ಯವಿದೆ. ಇದಕ್ಕೆ ನೀವು ನಿಮ್ಮ ಆಧಾರ್ ಕಾರ್ಡ್ ನೀಡಿ ಲಸಿಕೆಯನ್ನು ಯಾವುದೇ ಭಯವಿಲ್ಲದೇ ಸ್ವೀಕರಿಸಬಹುದು. ಒಂದು ವೇಳೆ ಯಾರಾದರೂ 45 ವರ್ಷ ಮೇಲ್ಪಟ್ಟೂ ಅಸ್ತಮಾ ಅಥವಾ ಉಸಿರಾಟದ ಸಮಸ್ಯೆ ಇದ್ದರೆ ವೈದ್ಯರು ನೀಡುವ ಸಲಹೆಯ ಪ್ರಕಾರ ಚಿಕಿತ್ಸೆ ಪಡೆದುಕೊಳ್ಳಬಹುದು ಮೆಣಸೆಯಲ್ಲಿ ಸದ್ಯ ಒಂಭತ್ತು ಮಂದಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ "ಎಂದು ಮಾಹಿತಿ ನೀಡಿದರು.


ಹಾಸನ

ನಿನ್ನೆ ಒಂದೇ ದಿನ 147 ಜನ ಕೊರೋನಾ ಸೋಂಕಿತರು

ಹಾಸನ ; ಬುಧವಾರದಂದು ಹಾಸನದಲ್ಲಿ ಕೊರೋನ ಸ್ಫೋಟವಾಗಿದೆ. ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ 147 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ.

ಇನ್ನು ಕೊರೋನಾಗೆ ಮೂರು ಮಂದಿ ಸಾವನ್ನಪ್ಪಿದರೆ, ಇಲ್ಲಿಯವರೆಗೆ ಸಾವಿನ ಸಂಖ್ಯೆ 485 ಆಗಿದೆ. 29,349 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಸತೀಶ್ ತಿಳಿಸಿದರು


ಉತ್ತರ ಕನ್ನಡ

ಕರ್ತವ್ಯ ನಡೆಸುತ್ತಿದ್ದ ಸಾರಿಗೆ ನೌಕರರ ಮೇಲೆ ಮುಷ್ಕರ ನಿರತ ನೌಕರರಿಂದ ಹಲ್ಲೆ!

ಯಲ್ಲಾಪುರ ; ಮುಷ್ಕರದಲ್ಲಿ ಭಾಗವಹಿಸದೇ ತಮ್ಮ ಕರ್ತವ್ಯಕ್ಕೆ ಹಾಜರಾಗಿ, ನಿರ್ವಹಿಸುತ್ತಿದ್ದ ವೇಳೆ ಮುಷ್ಕರ ನಿರತ ನೌಕರರು ಅಡ್ಡಿಪಡಿಸಿ, ಅವಮಾನ ಮಾಡಿದ್ದಾರೆ ಎಂದು ಯಲ್ಲಾಪುರ ಸಾರಿಗೆ ಘಟಕದ ವ್ಯವಸ್ಥಾಪಕ ರವಿ ಅಂಚಗಾವಿ ಪೊಲೀಸರಿಗೆ ದೂರು ನೀಡಿದ್ದಾರೆ.

ಬಸ್ ಚಾಲಕ ಜಿ. ಕೆ ನಾಯ್ಕ್ ನಿರ್ವಾಹಕ ಜಿ. ಬಿ ನಾಯ್ಕ್ ಶಿರಸಿಯಿಂದ ಯಲ್ಲಾಪುರ ಬಸ್ ನಿಲ್ದಾಣಕ್ಕೆ ಬಂದಿದ್ದರು. ಕರ್ತವ್ಯ ನಿರತರಾಗಿದ್ದ ಚಾಲಕ ಹಾಗೂ ನಿರ್ವಾಹಕರನ್ನು ಅಡ್ಡಗಟ್ಟಿ ಮುತ್ತಿಗೆ ಹಾಕಿದ್ದಾರೆ. ಅಲ್ಲದೇ ಇಬ್ಬರನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನೀವು ಸಾರಿಗೆ ಸಂಸ್ಥೆಯ ಕೆಲಸಕ್ಕೆ ಹೋಗಬಾರದು ಎಂದು ಮುಷ್ಕರನಿರತ ನೌಕರರು ಬೆದರಿಕೆ ಹಾಕಿದ್ದಾರೆ. ಕೂಡಲೇ ಬೆದರಿಕೆ ಹಾಕಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.


ಕೊಡಗು

ಜಿಲ್ಲೆಯಲ್ಲಿ ಇಂದು ಬರೋಬ್ಬರಿ 72 ಕೊರೋನಾ ಪ್ರಕರಣ

ಮಡಿಕೇರಿ; ಕೊಡಗು ಜಿಲ್ಲೆಯಲ್ಲಿ ಇಂದು ಒಂದೇ ದಿನ ಸುಮಾರು 72 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಒಟ್ಟು ಇಲ್ಲಿಯವರೆಗೆ ಸಕ್ರಿಯವಾಗಿರುವ ಕೊರೋನಾ ಪ್ರಕರಣಗಳ ಸಂಖ್ಯೆ 6,721 ಇದೆ. ಈ ಪೈಕಿ ಗುಣಮುಖರಾದವರ ಸಂಖ್ಯೆ 6400 ಹಾಗೂ 83 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆೆ.