ತೀರ್ಥಹಳ್ಳಿ:  ಪಟ್ಟಣ ಪಂಚಾಯಿತಿ ಚುನಾವಣೆ ನಾಮಪತ್ರ ಸಲ್ಲಿಕೆ ಅವಧಿ ಕೊನೆಗೊಂಡಿದ್ದು, ಚುನಾವಣಾ ಕಾವು ಜೋರಾಗಿಯೇ ಏರುತ್ತಿದೆ.ಈಗಾಗಲೇ ಬಹುತೇಕ ಅಭ್ಯರ್ಥಿಗಳು ಹಾಗೂ ಮುಖಂಡರು ಚುನಾವಣೆ ಪ್ರಚಾರದಲ್ಲಿ ನಿರತರಾಗಿದ್ದಾರೆ.ಈ ನಡುವೆ ಜೆಡಿಎಸ್ ನ ಮಾಜಿ ಮುಖಂಡ ಹಾಗೂ ರಾಜ್ಯ ಅಪೆಕ್ಸ್ ಬ್ಯಾಂಕಿನ ಮಾಜಿ ಅಧ್ಯಕ್ಷರಾದ ಆರ್.ಎಂ.ಮಂಜುನಾಥಗೌಡ ಅವರು ಇತ್ತೀಚೆಗೆ ಕಾಂಗ್ರೆಸ್ ಸೇರ್ಪಡೆಗೊಂಡಿದ್ದು, ಹಲವು ರಾಜಕೀಯ ಬೆಳವಣಿಗೆಗಳಿಗೆ ದಾರಿ ಮಾಡಿಕೊಟ್ಟಿದೆ.ಪಟ್ಟಣ ಪಂಚಾಯತ್ ಟಿಕೆಟ್ ಹಂಚಿಕೆಯಲ್ಲಿ ಉಂಟಾದ ಗೊಂದಲ ಕಾಂಗ್ರೆಸ್‌ನಲ್ಲಿ ತೀವ್ರ ಭಿನ್ನಮತಕ್ಕೆ ಕಾರಣವಾಗಿದ್ದು, ಅಭ್ಯರ್ಥಿಗಳಾಗುವ ಕನಸು ಕಂಡಿದ್ದ ಹಲವು ಹಳೆಯ ತಲೆಗಳ ಮುನಿಸು ಹೊರಬಿದ್ದಿದೆ. 

ಈ ಮುಸುಕಿನ ಗುದ್ದಾಟ ಮುಂಬರುವ ಚುನಾವಣೆ ಮೇಲೆ ಸಹಜವಾಗಿಯೇ ಪರಿಣಾಮ ಬೀರಲಿದೆ ಎಂಬುದು ಪರಿಣತರ ಅಭಿಪ್ರಾಯ.ಈ ಹಿಂದೆ ಪ. ಪಂಚಾಯಿತಿ ಚುನಾವಣೆಯಲ್ಲಿ ಎರಡು ಬಾರಿ ಗೆಲುವು ಸಾಧಿಸಿ ಅಧ್ಯಕ್ಷರಾಗಿದ್ದ  ರಹಮತ್ ಅಸಾದಿ ಅವರು ಈ ಸಲ 15ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಈ ಬೆಳವಣಿಗೆ ಮಾಜಿ ಸಚಿವರಾಗಿದ್ದ ಕಿಮ್ಮನೆ ರತ್ನಾಕರ್ ಅವರ ನಿಕಟವರ್ತಿಯಾಗಿದ್ದ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಚಂದ್ರಶೇಖರ ಪೂಜಾರಿ ಅವರಿಗೆ ಟಿಕೆಟ್ ಕೈತಪ್ಪಿರುವುದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ಈ ಎರಡೂ ಪಕ್ಷಗಳಲ್ಲಿ ಎದ್ದಿರುವ ಭಿನ್ನಮತ ಪಕ್ಷದ ಮುಖಂಡರಿಗೆ ದೊಡ್ಡ ತಲೆನೋವಾಗಿದೆ.

ಮತ್ತೊಂದೆಡೆ ಕಾಂಗ್ರೆಸ್ ನ ಕಿಮ್ಮನೆ ರತ್ನಾಕರ್ ಹಾಗೂ ಮಂಜುನಾಥ್ ಗೌಡ ಇಬ್ಬರ ನಡುವಿನ ಬಣ ರಾಜಕೀಯದಿಂದ ಪಕ್ಷಕ್ಕೆ ಹೆಚ್ಚು ಲಾಭ ಮಾಡಿಕೊಳ್ಳಲು ಬಿಜೆಪಿ ಕಸರತ್ತು ನಡೆಸುತ್ತಿದೆ.ಈ ನಡುವೆ ಪಕ್ಷದಿಂದ ನಿಂತು ಚುನಾವಣೆಯಲ್ಲಿ ಗೆದ್ದ ನಂತರ ಆಪರೇಷನ್ ಕಮಲಕ್ಕೆ ಒಳಗಾಗಿ ಪಕ್ಷಕ್ಕೆ ದ್ರೋಹ ಬಗೆಯಬಾರದು ಎಂಬ ಕಾರಣಕ್ಕೆ ಆಣೆ ಪ್ರಮಾಣ ಮಾಡಿಸಿಕೊಂಡು 'ಬಿ' ಫಾರಂ ನೀಡಲಾಗಿದೆ ಎಂಬ ಮಾತು ಕೇಳಿಬರುತ್ತಿದೆ.

ಬಿಜೆಪಿ ಪಟ್ಟಣ ಪಂಚಾಯಿತಿಯ ಆಡಳಿತವನ್ನು ಸತತ 2 ಬಾರಿ ಹಿಡಿದಿದ್ದರಿಂದ ಈ ಬಾರಿ ಅಭ್ಯರ್ಥಿಗಳ ಆಕಾಂಕ್ಷಿಗಳ ಪಟ್ಟಿ ಬಹು ದೊಡ್ಡದಾಗಿ ಬೆಳೆದಿದೆ. ಹಾಲಿ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಮುಖಂಡರು ಹಲವು ಬಾರಿ ಸಭೆ ನಡೆಸಿ ಅಭ್ಯರ್ಥಿಗಳ ಅಂತಿಮ ಆಯ್ಕೆ ಮಾಡುವಂತಾಗಿದೆ.