ಚಿಕ್ಕಮಗಳೂರು

ಧಾರ್ಮಿಕ ಕಾರ್ಯಕ್ರಮಕ್ಕೆ ಸಜ್ಜಾದ ಶೃಂಗೇರಿ ಶ್ರೀಶಾರದಾ ಪೀಠ

ಶೃಂಗೇರಿ ; ಜಗದ್ಗುರು ಶ್ರೀ ಭಾರತೀತಿರ್ಥ ಮಹಾಸನ್ನಿಧಾನಂಗಳವರ 71 ವರ್ಧಂತಿ ಉತ್ಸವದ ಅಂಗವಾಗಿ ಏಪ್ರಿಲ್ 13 ರಿಂದ 27 ರವರೆಗೆ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮದ ಪೂರ್ವತಯಾರಿ 90%ರಷ್ಟು  ಸಂಪೂರ್ಣವಾಗಿದೆ. ಯಾಗಶಾಲೆಯಲ್ಲಿ ಹೋಮಕುಂಡಗಳು ಸಿದ್ಧತೆಗೊಂಡಿವೆ, ಋತ್ವಿಜರಿಗೆ ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ.ಯಾಗ ಮಾಡುವ ಋತ್ವಿಜರ ಸಾಮಾಜಿಕ ಅಂತರ ಕಾಪಾಡಲು ಕುಳಿತುಕೊಳ್ಳುವ ಸ್ಥಳಗಳನ್ನು ಗುರುತು ಮಾಡಲಾಗಿದೆ. ಯಾಗಶಾಲೆಯ ಆವರಣವು ಸ್ವಾಗತ ಮಂಟಪ ಹಾಗೂ ಮಲೆನಾಡಿನ ಸೋಗೆ ಚಪ್ಪರದಿಂದ ಕಂಗೊಳಿಸುತ್ತಿದೆ. ಭಕ್ತಾದಿಗಳು ಶ್ರೀಮಠದ ಈ ಕಾರ್ಯಕ್ರಮದ ಪೂರ್ವಸಿದ್ಧತಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.ಮಠದ ಆಡಳಿತಾಧಿಕಾರಿ, ಗುರುಸೇವಾಧುರೀಣ ಡಾ. ವಿ. ಆರ್. ಗೌರಿಶಂಕರ್ ರವರು ಭಕ್ತಾದಿಗಳು ಕೋವಿಡ್ ನಿಯಮಾನುಸಾರವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿ ಕೋರಿದ್ದಾರೆ.

ನಿರಂತರ ವಿದ್ಯುತ್ ವ್ಯತ್ಯಯ ; ಅಧಿಕಾರಿಗಳಲ್ಲಿ ಪರಿಹಾರಕ್ಕಾಗಿ ಮನವಿ.

ಶೃಂಗೇರಿ; ಶೃಂಗೇರಿಯಲ್ಲಿ ಕಳೆದ ಒಂದು ತಿಂಗಳಿನಿಂದ ಉಂಟಾಗಿರುವ ವಿದ್ಯುತ್ ವ್ಯತ್ಯಯದ ಸಮಸ್ಯೆಗೆ ಮೆಸ್ಕಾಂ ಅಧಿಕಾರಿಗಳೊಂದಿಗೆ ಚರ್ಚಿಸಿ ಶೀಘ್ರ ಪರಿಹಾರಕ್ಕಾಗಿ ಸಾರ್ವಜನಿಕರು ಆಗ್ರಹಿಸಿದ್ದಾರೆ. ಅವಶ್ಯಕವಾಗಿರುವ ಟ್ರಾನ್ಸ್ಫಾರ್ಮರ್ ಗಳನ್ನು ಅಳವಡಿಸಿ, ರೈತರು, ವ್ಯಾಪಾರಸ್ಥರು, ಹಾಗೂ ಜನಸಾಮಾನ್ಯರಿಗೆ ಆಗುತ್ತಿರುವ ಅನಾನುಕೂಲತೆ ತಪ್ಪಿಸಲು ದಿನಕ್ಕೆ ಸಮರ್ಪಕವಾಗಿ ವಿದ್ಯುತ್ ವ್ಯವಸ್ಥೆ ಕಲ್ಪಿಸುವಂತೆ ಮನವಿಯನ್ನೂ ಸಲ್ಲಿಸಿದರು.

ಅಡ್ಡಗದ್ದೆ ಗ್ರಾಮ ಪಂಚಾಯಿತಿ ಸದಸ್ಯರಾದ ಹಂಚಲಿ ರಾಘವೇಂದ್ರ, ಕೂತುಗೋಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ನಾಗೇಶ್, ಶರತ್ ಕಾನುಗೋಡು, ಶ್ರೇಯಸ್, ವಿಘ್ನೇಶ್, ಅನಿರುದ್ಧ, ನಿರಂಜನ್ ಮತ್ತಿತರರು ಉಪಸ್ಥಿತರಿದ್ದರು.

ಉತ್ತರ ಕನ್ನಡ

ಮೀನುಗಾರಿಕೆಗೆ ತೆರಳಿದ್ದ ದೋಣಿ ನುಜ್ಜುಗುಜ್ಜು 

ಉತ್ತರಕನ್ನಡ;ಮೀನುಗಾರಿಕೆಗೆ ತೆರಳಿದ್ದ ವಾಟರ್ ಕ್ವೀನ್ ಎಂಬ ದೋಣಿ ಅವಘಡಕ್ಕೀಡಾಗಿದೆ. ದೋಣಿಯಲ್ಲಿದ್ದ ಆರು ಜನರನ್ನು ಕಾರ್ಯಾಚರಣೆಯ ಮೂಲಕ ರಕ್ಷಿಸಲಾಗಿದೆ. 'ವಾಟರ್ ಕ್ವೀನ್ ' ಪ್ರಕಾಶ್ ಪಾಸ್ಕೊಲ್ ಎಂಬುವವರ ಮಾಲೀಕತ್ವದ್ದಾಗಿದೆ.ದೋಣಿಯ ಕೆಳಭಾಗ ಬಿರುಕು ಬಿಟ್ಟು ನೀರು ತುಂಬುವ ಪರಿಸ್ಥಿತಿಯಲ್ಲಿತ್ತು. ದೋಣಿಯನ್ನು ದಡಕ್ಕೆ ತರುವಾಗ ಮರಳು ದಿಣ್ಣೆಗೆ ಬಡಿದು ದೋಣಿ ಪುಡಿಯಾಗಿದೆ ಎಂದು ದೋಣಿ ಮಾಲೀಕರ ಸಂಘದ ಕಾರ್ಯದರ್ಶಿ ವಿವನ್ ಫರ್ನಾಂಡಿಸ್ ಹೇಳಿದರು.

ಕೊಡಗು

ಜೀಪ್ ಬಸ್ ಮುಖಾಮುಖಿ ಡಿಕ್ಕಿ ; ವೃದ್ಧೆ ಸಾವು

ಮಡಿಕೇರಿ : ಖಾಸಗಿ ಬಸ್ ಮತ್ತು ಜೀಪ್ ನಡುವೆ ಅಪಘಾತ ಸಂಭವಿಸಿ ವೃದ್ಧೆಯೊಬ್ಬರ ಸಾವಾಗಿದೆ. ಮಡಿಕೇರಿ ವಿರಾಜಪೇಟೆಯ ಬೇತ್ರಿ ಬಳಿ ಈ ಘಟನೆ ನಡೆದಿದೆ. 70 ವರ್ಷದ ಲಕ್ಷ್ಮೀ ಎಂಬುವವರು ಮೃತಪಟ್ಟಿದ್ದಾರೆ. ಲಕ್ಷ್ಮೀಯವರ ಪುತ್ರ, ನಿವೃತ್ತ ಯೋಧ ಮೋಹನ್ ಅವರಿಗೆ ಗಾಯಗಳಾಗಿವೆ. ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಹಾಸನ

ಸಾರಿಗೆ ನೌಕರರ ಕಷ್ಟಕ್ಕೆ ಸ್ಪಂದಿಸಿ ; ಪಾದಯಾತ್ರೆಯ ನಿರ್ಧಾರ ಮಾಡಿದ ನೌಕರ!

ಹಾಸನ; ಸಾರಿಗೆ ನೌಕರರ ಕಷ್ಟಗಳಿಗೆ ಸರ್ಕಾರ ಕೂಡಲೇ ಸ್ಪಂದಿಸಬೇಕು ಎಂದು ಆಗ್ರಹಿಸಿ ಕಾಂತರಾಜಪುರದ ಸಾರಿಗೆ ನೌಕರರಾದ ಪ್ರದೀಪ್ ಅವರು ಪಾದಯಾತ್ರೆ ಹೊರಟಿರುವ ದೃಶ್ಯಗಳು ವೈರಲಾಗಿದೆ. ಕಾಂತರಾಜಪುರದ ನಿವಾಸಿ ಪ್ರದೀಪ್ ಅವರು, ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ವಿಡಿಯೋದಲ್ಲಿ ಮಾತನಾಡಿದ ಅವರು "ಇದು ನನ್ನೊಬ್ಬನ ಪಾದಯಾತ್ರೆ ಅಲ್ಲ, ನಾಲ್ಕು ನಿಗಮದಲ್ಲಿ ಕೆಲಸ ಮಾಡುತ್ತಿರುವ ಎಷ್ಟೋ ಲಕ್ಷ ಜನರ ಪಾದಯಾತ್ರೆಯಾಗಿದೆ. ಸರ್ಕಾರ ಇದಕ್ಕೆ ಸ್ಪಂದಿಸಿ ಸೂಕ್ತ ಪರಿಹಾರ ನೀಡಬೇಕು. ಆದ್ದರಿಂದ ನಾನು ಬೆಂಗಳೂರಿನ ಸಿಎಂ ನಿವಾಸಕ್ಕೆ ಪಾದಯಾತ್ರೆ ಮಾಡುತ್ತೇನೆ" ಎಂದರು.