ತೀರ್ಥಹಳ್ಳಿಯ ಪಟ್ಟಣ ಪಂಚಾಯಿತಿ ಚುನಾವಣೆ ಕೊರೋನಾ ಅಬ್ಬರದ ಜೊತೆಗೆ ಹಣ, ಹೆಂಡದ ಅಬ್ಬರದಲ್ಲಿ ಮುಗಿದಿದೆ. ಚುನಾವಣೆಯಲ್ಲಿ ಬಿಜೆಪಿಯ 15, ಕಾಂಗ್ರೆಸ್ ನ 13 ಹಾಗೂ 12 ಪಕ್ಷೇತರ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿದ್ದರು. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಇದ್ದಿತ್ತು.
ಎರಡು ಪ್ರಮುಖ ರಾಜಕೀಯ ಪಕ್ಷಗಳು ಚುನಾವಣೆಯ ಹಿಂದಿನ ದಿನಗಳಲ್ಲಿ ಹಿಂಬಾಗಿಲಿನಿಂದ ಹಣ, ಹೆಂಡದ ಹೊಳೆಯನ್ನೇ ಹರಿಸಿರುವುದನ್ನು ನೋಡಿ ತಾಲೂಕಿನ ಕೆಲವು ಪ್ರಜ್ಞಾವಂತ ಮತದಾರರು ಬೇಸರ ವ್ಯಕ್ತಪಡಿಸಿದ್ದಾರೆ.
ಮೊದಲೆಲ್ಲಾ ವಿದ್ಯಾವಂತ ಮತದಾರರು ಪ್ರಾಮಾಣಿಕರಾಗಿದ್ದರು ಆದರೆ ಈಗ ಅವರೂ ಸಹ ಇದರಲ್ಲಿ ಸಹಭಾಗಿಗಳಾಗಿದ್ದಾರೆ. ಕೊರೋನಾ ಅಬ್ಬರ ಎಲ್ಲೆಡೆ ಮಿತಿಮೀರಿದ್ದು ಲಾಕ್ಡೌನ್ ಸಹ ಹೇರಲಾಗಿದ್ದು ಜನಸಾಮಾನ್ಯರು ಹೈರಾಣಾಗಿದ್ದಾರೆ.
ಈ ನಡುವೆಯೂ ಆಸ್ಪತ್ರೆ, ಅಭಿವೃದ್ಧಿಯನ್ನು ಮಾನದಂಡವಾಗಿ ಇಟ್ಟುಕೊಳ್ಳದೇ ಅನೈತಿಕ ಮಾರ್ಗದ ಮೂಲಕ ಮತದಾರರನ್ನು ಸೆಳೆಯುತ್ತಿರುವುದು ರಾಷ್ಟ್ರಕವಿ ಕುವೆಂಪು, ಕಡಿದಾಳು ಮಂಜಪ್ಪನಂತಹ ಮಹನೀಯರು ಬದುಕಿದ ನೆಲಕ್ಕೆ ಮಾಡುವ ಅವಮಾನ ಎಂದು ಜನಸಾಮಾನ್ಯರ ಪ್ರತಿನಿಧಿಯಾಗಿ ಕೃಷ್ಣಮೂರ್ತಿ ಹೇಳಿದರು.



0 Comments