ಎರಡನೇ ಅಲೆಯ ನಂತರ ರಾಜ್ಯದಲ್ಲಿ ಕೊರೊನಾ ಸೋಂಕು ದಿನೇ ದಿನೇ ತೀವ್ರ ಹೆಚ್ಚಳವಾಗುತ್ತಿದ್ದು. ಸರ್ಕಾರಿ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ, ಜನರು ಖಾಸಗಿ ಆಸ್ಪತ್ರೆಯ ಬಿಲ್ ಭರಿಸಲಾಗದೆ ಬಡ ಮತ್ತು ಮಧ್ಯಮ ವರ್ಗದ ಜನತೆ ಹೈರಾಣಾಗಿದ್ದಾರೆ. ಈ ನಡುವೆ 'ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ' ಯೋಜನೆ ಅಡಿಯಲ್ಲಿ ಆಯುಷ್ಮಾನ್ ಕಾರ್ಡ್ ಕಾರ್ಡ್ ಹೊಂದಿರುವ ಸೋಂಕಿತರಿಗೆ ಸಾರ್ವಜನಿಕ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ನೀಡಲಾಗುತ್ತದೆ ಎಂದುಆಯುಷ್ಮಾನ್ ಯೋಜನೆಯನ್ನು ನಿರ್ವಹಿಸುವ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ನ ಮುಖ್ಯಸ್ಥರು ತಿಳಿಸಿದ್ದು, ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯ CHBMS ವೆಬ್ಸೈಟ್ ಪೋರ್ಟಲ್ ಮೂಲಕ ಹಾಗೂ ಇತರೆ ಜಿಲ್ಲೆಗಳಲ್ಲಾದರೆ ಜಿಲ್ಲಾ ಆಸ್ಪತ್ರೆ ರೆಫರಲ್ ಲೆಟರ್ ಮೂಲಕ ಕೊರೋನಾ ಸೋಂಕಿತರು ನೇರವಾಗಿ ಜಿಲ್ಲೆಯ ಒಳಗಿನ ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗಿ ಉಚಿತ ಚಿಕಿತ್ಸೆ ಪಡೆಯಬಹುದಾಗಿದೆ. ಜಿಲ್ಲೆಯ ಹೊರಗಿನ ಖಾಸಗೀ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಅನಿವಾರ್ಯತೆ ಇದ್ದಲ್ಲಿ ಜಿಲ್ಲಾಧಿಕಾರಿಗಳ ರೆಫರಲ್ ಲೆಟರ್ ಅವಶ್ಯಕವಾಗಿರುತ್ತದೆ.

 'ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ' ಕಾರ್ಡ್ ಹೊಂದಿದ್ದರೂ ಸಹ ರೆಫರಲ್ ಇಲ್ಲದೆ ನೇರವಾಗಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಲ್ಲಿ ಅಂತವರು ಜನರಲ್ ವಾರ್ಡಿಗೆ ಸರ್ಕಾರ ನಿಗದಿ ಪಡಿಸಿರುವ ದರದಂತೆ 10 ಸಾವಿರ ರೂಪಾಯಿ, ಎಚ್ಡಿಯು ವಾರ್ಡಿಗೆ 12 ಸಾವಿರ ರೂಪಾಯಿ, ಐಸೋಲೇಶನ್ ಐಸಿಯುಗೆ 15 ಸಾವಿರ ರೂಪಾಯಿ ಹಾಗೂ ವೆಂಟಿಲೇಶನ್ ಸಹಿತ ಐಸೋಲೇಶನ್ ಐಸಿಯುಗೆ 25 ಸಾವಿರ ರೂಪಾಯಿಗಳನ್ನು ನಿಗದಿಪಡಿಸಲಾಗಿದ್ದು, ಈ ವೆಚ್ಚವನ್ನು ರೋಗಿಗಳೇ ಭರಿಸಬೇಕಾಗಿರುತ್ತದೆ.