ಉತ್ತರ ಕನ್ನಡ : ಇತ್ತೀಚಿನ ವರ್ಷಗಳಲ್ಲಿ ನೆರೆ ಪ್ರವಾಹ  ಮಲೆನಾಡು, ಕರಾವಳಿ ಹಾಗೂ ಗುಡ್ಡಗಾಡು ಪ್ರದೇಶಗಳ ಜನರನ್ನು ಕಾಡುತ್ತಿರುವ ಅತಿದೊಡ್ಡ ಸಮಸ್ಯೆಯಾಗಿದೆ.

ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿ ಬದುಕೇ ಬೀದಿಗೆ ಬಂದು ಬಿಡುತ್ತದೆ. 

ಭೂಕುಸಿತ, ಸೇತುವೆ ಸಂಪರ್ಕ ಕಡಿತ, ಸಮುದ್ರದ ಅಲೆಗಳ ಆರ್ಭಟದ ಸಂದರ್ಭದಲ್ಲಿ ಜನರ ಹಾಗೂ ಪ್ರಾಣಿಗಳ ಜೀವ ರಕ್ಷಣೆಯೇ ದೊಡ್ಡ ಸವಾಲಾಗುತ್ತದೆ. ಆದರೆ ಇನ್ಮುಂದೆ ಅಂತಹ ಸಂಕಷ್ಟದ ಪರಿಸ್ಥಿತಿ ಎದುರಾದರೆ ಜನರಿಗೆ ಸ್ಪಂದಿಸಲು ಸಹಾಯವಾಗುವ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಹೈಟೆಕ್ ತಂತ್ರಜ್ಞಾನ ಬಳಕೆ ಮಾಡಲು ಮುಂದಾಗಿದೆ.

ಮಳೆಗಾಲದ ಸಂದರ್ಭದಲ್ಲಿ ಸಂಭವಿಸುವ ಅತಿಯಾದ ಗಾಳಿ ಹಾಗೂ ಚಂಡಮಾರುತಕ್ಕೆ ಗುಡ್ಡಗಾಡು ಹಾಗೂ ಕಡಲ ತೀರದ ಪ್ರದೇಶದ ಜನರು ತೀರಾ ಸಂಕಷ್ಟಕ್ಕೀಡಾಗುತ್ತಿದ್ದಾರೆ.

ಗುಡ್ಡ ಕುಸಿತ, ಭೂ ಕುಸಿತ, ಕಾಡಿನಲ್ಲಿ ಬೆಂಕಿ ಕಾಣಿಸಿಕೊಳ್ಳುವುದು ಕೂಡ ಸರ್ವೇ ಸಾಮಾನ್ಯವಾಗಿದೆ. ಈ ಸಂದರ್ಭದಲ್ಲಿ ಎಲ್ಲಾದರೂ ಜನರು ಸಿಲುಕಿದ್ದಾರೋ, ಪ್ರಾಣಿಗಳು ಸಿಲುಕಿವೆಯೋ ಅಥವಾ ಕಾಡುಗಳ ರಕ್ಷಣೆ ಹೇಗೆ ಸಾಧ್ಯವೇ ಎಂಬ ಸವಾಲುಗಳು ಎದುರಾಗುತ್ತವೆ. ಇದಕ್ಕೆಲ್ಲಾ ಸ್ಪಂದಿಸುವ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಹೈಟೆಕ್ ತಂತ್ರಜ್ಞಾನದ ಬಳಕೆಗೆ ಮುಂದಾಗಿದೆ. ಅತ್ಯಾಧುನಿಕವಾಗಿ ಕೆಲಸ ಮಾಡುವ ಡ್ರೋಣ್ ಕ್ಯಾಮೆರಾವನ್ನು ಇನ್ಮು ಮುಂದೆ ಇದಕ್ಕಾಗಿ ಪೊಲೀಸ್ ಇಲಾಖೆ ಬಳಸಲಿದೆ. 

ಉತ್ತರಕನ್ನಡ ಜಿಲ್ಲಾಡಳಿತವು ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಫಂಡ್‌ನಿಂದ ಡ್ರೋಣ್ ಖರೀದಿಗಾಗಿ ಪೊಲೀಸ್ ಇಲಾಖೆಗೆ ಹಣ ನೀಡಿದೆ. 

ಪೊಲೀಸ್ ಇಲಾಖೆಯ ಸಿವಿಲ್, ಡಿಎಆರ್, ಮತ್ತು ವೈಯರ್ ಲೆಸ್ ವಿಭಾಗದ ಒಟ್ಟು ಆರು ಸಿಬ್ಬಂದಿಗಳಿಗೆ ಈ ತಂತ್ರಜ್ಞಾನದ ಆಪರೇಟಿಂಗ್ ತರಬೇತಿ ನೀಡಲಾಗಿದೆ.

ಇನ್ನು ಈ ಡ್ರೋಣ್​ನ ವಿಶೇಷತೆ ಎಂದರೆ, ಇದು ಸುಮಾರು 40ರಿಂದ 50ಕಿ.ಮೀ ಸ್ಪೀಡ್‌ನಲ್ಲಿ ಚಲಿಸುತ್ತದೆ, ಹಾಗೂ ದೂರ ಸುಮಾರು 3 ರಿಂದ 4 ಕಿ.ಮೀ.ವರೆಗೆ ಸಾಗುತ್ತದೆ. ಹಾಗೆಯೇ 1 ಕಿ.ಮೀ. ವರೆಗೆ ದೂರದವರೆಗಿನ ವಸ್ತುವಿನ ಚಿತ್ರವನ್ನು ಕೂಡಾ ಈ ಡ್ರೋಣ್ ಸ್ಪಷ್ಟವಾಗಿ ಸೆರೆ ಹಿಡಿಯಲಿದೆ.

ಇದರಲ್ಲಿ ಆಟೋ ಪೈಲೆಟ್ ವ್ಯವಸ್ಥೆ ಸಹ ಇದ್ದು, ಒಂದು ವೇಳೆ ಗಾಳಿ ವೇಗ ಜಾಸ್ತಿ ಇದ್ದಲ್ಲಿ ಅಥವಾ ಬ್ಯಾಟರಿ ಲೋ ಆದಲ್ಲಿ ಈ ಡ್ರೋಣ್ ಆಪರೇಟರ್ ಬಳಿಯೇ ಬಂದು ಸೇರಿಕೊಳ್ಳುತ್ತದೆ. 

ಇನ್ನು ಎದುರಿನಲ್ಲಿ ಹಕ್ಕಿಗಳು ಬಂದಲ್ಲಿ ಡ್ರೋನ್ ಅವುಗಳನ್ನು ಡಿಟೆಕ್ಟ್ ಮಾಡಿ ಪಕ್ಕಕ್ಕೆ ಸರಿಯುತ್ತದೆ. ಈ ಆಧುನಿಕ ಡ್ರೋಣ್ ಅನ್ನು ಪೊಲೀಸ್ ಇಲಾಖೆ ಖರೀದಿಸಿದೆ.

ಉತ್ತರಕನ್ನಡ ಜಿಲ್ಲೆಗೆ ಇದರ ಅಗತ್ಯತೆ ಕೂಡ ಇದ್ದು. ನೆರೆ ಸಂದರ್ಭದಲ್ಲಿ, ಕಾಡು ಅಥವಾ ಇತರ ಜಾಗಗಳಲ್ಲಿ ಅನಾಹುತವಾದ ಸಮಯದಲ್ಲಿ ಇತರ ಉಪಯೋಗ ಬಹಳವಾಗಿದ್ದು, ಸಮುದ್ರದಲ್ಲಿ ಯಾರಾದರೂ ಸಿಲುಕಿಕೊಂಡಲ್ಲಿ ಅವರ ಪರಿಸ್ಥಿತಿ ಪರಿಶೀಲಿಸಲು ಸಹ ಸಾಧ್ಯವಾಗಲಿದೆ. ಆದಕಾರಣ ಪ್ರಕೃತಿ ವಿಕೋಪ ಸಂದರ್ಭದಲ್ಲಿ ರಕ್ಷಣಾ ಕಾರ್ಯಾಚರಣೆ ಮಾಡಲು ಈ ಡ್ರೋಣ್ ಸಹಾಯವಾಗಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

ಒಟ್ಟಾರೆ ಜನರ ಹಾಗೂ ಪ್ರಾಣಿಗಳ ಮತ್ತು ಪರಿಸರ ಸಂರಕ್ಷಣೆಗಾಗಿ ಉತ್ತರಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ಇದೀಗ ಡ್ರೋಣ್ ಬಳಕೆಗೆ ಮುಂದಾಗಿರೋದು ಒಳ್ಳೆಯ ಬೆಳವಣಿಗೆ. 

ಮಲೆನಾಡಿನ ಇತರೆ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ , ಕೊಡಗು ಜಿಲ್ಲಾಡಳಿತ ಸಹ ಈ ಯೋಜನೆಯನ್ನು ತಮ್ಮ ವ್ಯಾಪ್ತಿಯಲ್ಲಿ ಜಾರಿಗೆ ತಂದಲ್ಲಿ ಬಹಳಷ್ಟು ಅನುಕೂಲವಾಗಲಿದೆ.