ಚಿಕ್ಕಮಗಳೂರು/ಕೊಪ್ಪ : ಇಂದು ಹಸೆಮಣೆ ಏರಬೇಕಿದ್ದ ಯುವಕ ಕೊರೋನಾ ಸೋಂಕಿಗೆ ಬಲಿಯಾಗಿರುವ ಘಟನೆ ಚಿಕ್ಕಮಗಳೂರಿನ ಕೊಪ್ಪ ತಾಲೂಕಿನಲ್ಲಿ ನಡೆದಿದೆ.

ಸಂಭ್ರಮದಲ್ಲಿ ಕಳೆ ಕಟ್ಟಿದ್ದ ಮನೆ ನೀರವ ಮೌನಕ್ಕೆ ಸಾಕ್ಷಿಯಾಗಿದೆ. ಇಂದು ವೈವಾಹಿಕ ಜೀವನಕ್ಕೆ ಕಾಲಿಡಬೇಕಾಗಿದ್ದ 32 ವರ್ಷದ ಪೃಥ್ವಿರಾಜ್ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗಿ ಆಗಿದ್ದರು, ಕಳೆದ ಹತ್ತು ದಿನದ ಹಿಂದಷ್ಟೇ ಮದುವೆ ತಯಾರಿಗೆಂದು ಬೆಂಗಳೂರಿನಿಂದ ಸ್ವಗ್ರಾಮಕ್ಕೆ ಬಂದಿದ್ದರು. ಆರೋಗ್ಯದಲ್ಲಿ ವ್ಯತ್ಯಾಸ ಕಂಡ ಬೆನ್ನಲ್ಲೇ ಕೊಪ್ಪದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು, ಆ ವೇಳೆ ಕೊರೋನಾ ರ್ಯಾಪಿಡ್ ಟೆಸ್ಟ್ ಮಾಡಿಸಿದಾಗ ಅದರಲ್ಲಿ ನೆಗೆಟಿವ್ ಎಂದು ವರದಿ ಬಂದಿತ್ತು. ತೀವ್ರ ಉಸಿರಾಟದ ಸಮಸ್ಯೆ ಕಂಡುಬಂದ ಹಿನ್ನಲೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದ್ದಾರೆ, ಶಿವಮೊಗ್ಗದಲ್ಲಿ ಪುನಃ ಟೆಸ್ಟ್ ಮಾಡಿದಾಗಲೂ ರಿಪೋರ್ಟ್ ನಲ್ಲಿ ನೆಗೆಟಿವ್ ಎಂದು ಬಂದಿತ್ತು. ಆದರೆ ನಿನ್ನೆ ಪೃಥ್ವಿರಾಜ್ ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ.

ರ್ಯಾಪಿಡ್ ಟೆಸ್ಟ್ ನಲ್ಲಿ ಪಾಸಿಟಿವ್ ಇದ್ದರೂ ಕೆಲವೊಮ್ಮೆ ನೆಗೆಟಿವ್ ಎಂದು ಬರುತ್ತದೆ. ಅವರಿಗೆ ಆಕ್ಸಿಜನ್ ಪ್ರಮಾಣ ಕಡಿಮೆಯಿತ್ತು ಎಂದು ವೈದ್ಯರು ಹೇಳಿದರೆಂದು ಮೃತ ಪೃಥ್ವಿರಾಜ್ ಅವರ ಸಂಬಂಧಿಯೊಬ್ಬರು ತಿಳಿಸಿದ್ದಾರೆ.

ರ್ಯಾಪಿಡ್ ಟೆಸ್ಟ್ ನಲ್ಲಿ ಕೆಲವೊಮ್ಮೆ ನೆಗೆಟಿವ್ ಇದ್ದಾಗ ಪಾಸಿಟಿವ್ ಎಂದೂ, ಇನ್ನೂ ಕೆಲವೊಮ್ಮೆ ಪಾಸಿಟಿವ್ ಇದ್ದಾಗ ನೆಗೆಟಿವ್ ಎಂದು ರಿಪೋರ್ಟ್ ಬರುವ ಸಾಧ್ಯತೆಗಳು ಇರುತ್ತವೆ. ಆದ್ದರಿಂದ ಯಾವುದೇ ರೋಗ ಗುಣಲಕ್ಷಣಗಳಿದ್ದರೂ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಿ RTPCR & CT Scan ಟೆಸ್ಟ್ ಮೂಲಕ ಪರೀಕ್ಷಿಸಿಕೊಳ್ಳುವುದು ಉತ್ತಮ. ನಿಮ್ಮ ಸಣ್ಣ ನಿರ್ಲಕ್ಷ್ಯದಿಂದ ದೊಡ್ಡ ಅನಾಹುತ ಆಗದಿರಲಿ. ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಬನ್ನಿ. ಹೊರಬರುವಾಗ ಖಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ನಿಮ್ಮ ಸುರಕ್ಷತೆಯಲ್ಲಿ ನೀವಿರಿ ಇದು ನಿಮ್ಮ ನ್ಯೂಸ್ ಮಲ್ನಾಡ್ ಕಳಕಳಿ.