ಶೃಂಗೇರಿ : ಶೃಂಗೇರಿ ಶಾರದಾ ಪೀಠದಲ್ಲಿ ಜಗದ್ಗುರು ಶ್ರೀ ಶ್ರೀ ಭಾರತೀ ತೀರ್ಥ ಮಹಾಸ್ವಾಮೀಜಿಗಳವರ 71 ನೇ ವರ್ಧಂತಿ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ಏರ್ಪಡಿಸಿರುವ ಆಯುತ ಚಂಡೀ ಮಹಾಯಾಗದಲ್ಲಿ ಪಾಲ್ಗೊಂಡ ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಉಭಯ ಗುರುಗಳ ಆಶೀರ್ವಾದ ಪಡೆದರು
ಈ ಸಮಯದಲ್ಲಿ ಶೃಂಗೇರಿಗೆ ನೂರು ಬೆಡ್ ಆಸ್ಪತ್ರೆಯ ಕುರಿತು ಹೋರಾಟ ಸಮಿತಿ ಸದಸ್ಯರು ಪ್ರಶ್ನೆ ಎತ್ತಿದರು, ಕಳೆದ ಹತ್ತು ತಿಂಗಳಿನಿಂದ ನಿರಂತರವಾಗಿ ಬೆಂಬಿದ್ದಿದ್ದರೂ ಸಹ ಆಸ್ಪತ್ರೆಯ ಮಂಜೂರಾತಿ ಕುರಿತು ಮಂದಗತಿಯಲ್ಲಿ ಪ್ರಕ್ರಿಯೆಗಳು ಸಾಗಿವೆ. ಆದ ಕಾರಣ ಸರ್ಕಾರದ ಮಟ್ಟದಲ್ಲಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಕೇಳಿಕೊಂಡರು.
ಕಳೆದ 13 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಈ ಕೆಲಸ ಕಳೆದ 10 ತಿಂಗಳಿನಿಂದ ಜಾಗ ಗುರುತು ಮಾಡಿ, ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆಯ ಜಂಟಿ ಸರ್ವೇ ಕಾರ್ಯದವರೆಗೂ ಬಂದಿದ್ದು. ಸಧ್ಯ ಅರಣ್ಯ ಇಲಾಖೆಯ ಅನುಮತಿಗಾಗಿ ಕಾಯಲಾಗುತ್ತಿದೆ. ಜಂಟಿ ಸರ್ವೆಯ ಪ್ರಕಾರ ಶೃಂಗೇರಿ ತಾಲೂಕು ಕಸಬಾ ಹೋಬಳಿ ವೈಕುಂಠಪುರ ಗ್ರಾಮದ ಸರ್ವೇ ನಂಬರ್ 61ರಲ್ಲಿ ಸುಮಾರು 5 ಎಕರೆ ಜಾಗವನ್ನು ಆಸ್ಪತ್ರೆಗೆ ಎಂದು ಗುರುತಿಸಿದ್ದು, ಅದು ಡೀಮ್ಡ್ ಫಾರೆಸ್ಟ್ ಗೆ ಸೇರಿರುವುದಾಗಿ ಉಲ್ಲೇಖಿಸಲಾಗಿದೆ.
ಊರಿನ ಜನರ ಅನಿವಾರ್ಯತೆ ಮನಗಂಡು, ಕೂಡಲೇ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಕೇಳಿಕೊಂಡರು.
ಸಮಸ್ಯೆಗೆ ಪ್ರತಿಕ್ರಿಯಿದ ಆರೋಗ್ಯ ಸಚಿವ ಡಾ. ಸುಧಾಕರ್ ಈ ಹಿಂದೆ ಮನವಿ ನೀಡಿದಾಗಲೂ ನಾನು ಮಾತು ನೀಡಿದ್ದೆ, ಆಸ್ಪತ್ರೆಗೆ ಜಾಗ ಮಂಜೂರಾದ ಕೂಡಲೇ ನೂರು ಬೆಡ್ ಆಸ್ಪತ್ರೆ ಮಾಡಿಯೇ ಮಾಡುತ್ತೇವೆ ಎಂದರು. ಹಾಗೆಯೇ ಸ್ಥಳದಲ್ಲೇ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾತನಾಡಿ ಕೂಡಲೇ ಕಡತದ ಪ್ರಕ್ರಿಯೆ ಪೂರ್ಣಗೊಳಿಸುವಂತೆ ತಿಳಿಸಿ, ಮುಂದಿನ ಹಂತದಲ್ಲಿ ಸರ್ಕಾರದ ಹಂತದಲ್ಲಿ ಮಾತನಾಡುವುದಾಗಿ ತಿಳಿಸಿದರು.
ಸಮಸ್ಯೆಗೆ ಸ್ಪಂದಿಸಿದ ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಗಳಾದ ಡಿ.ಎನ್ ಜೀವರಾಜ್ ಜಾಗದ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸುತ್ತೇವೆ, ತಡವಾದಲ್ಲಿ ಸಿಎಂ ಸಮ್ಮುಖದಲ್ಲಿ ವಿಷಯವನ್ನು ಪ್ರಸ್ತಾಪಿಸಿ ಬಗೆಹರಿಸುವುದಾಗಿ ತಿಳಿಸಿದರು. ಹಾಗೆಯೇ ಶೃಂಗೇರಿ ತಹಸೀಲ್ದಾರ್ ಅಂಬುಜಾ ಅವರು ಸಹ ಸಮಸ್ಯೆಯನ್ನು ಸಚಿವರಿಗೆ ಮನದಟ್ಟು ಮಾಡುವಲ್ಲಿ ಸಕಾರಾತ್ಮಕವಾಗಿ ಸ್ಪಂದಿಸಿದರು.


0 Comments