ಈಗಾಗಲೇ ರಾಜ್ಯ ಸರ್ಕಾರ ಜೂನ್ 7 ರ ವರೆಗೆ ಲಾಕ್ ಡೌನ್ ಘೋಷಣೆ ಮಾಡಿದೆ ಇದರ ಬೆನ್ನಲ್ಲೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ಈಗಾಗಲೇ ಮೇ 28 ರ ವರೆಗೆ ಇದ್ದ ಸಂಪೂರ್ಣ ಲಾಕ್ ಡೌನ್ ಅನ್ನು ಜೂನ್ 1ರ ಬೆಳಗ್ಗೆ 6 ಗಂಟೆವರೆಗೂ ಮುಂದೂಡಿ ಆದೇಶ ಹೊರಡಿಸಲಾಗಿದೆ.

ಈ ಆದೇಶದ ಅನ್ವಯ ಈಗ ಜಿಲ್ಲೆಯಲ್ಲಿ ಜಾರಿಯಲ್ಲಿದ್ದ ಮಾದರಿಯಲ್ಲೇ ಜೂನ್ 1ರ ತನಕವೂ ಮುಂದುವರೆಯಲಿದ್ದು, ಈ ಹಿಂದೆ ಬೆಳಿಗ್ಗೆ 6 ರಿಂದ 10ಗಂಟೆಯ ವರೆಗೆ ಅಗತ್ಯವಸ್ತುಗಳ ಹೋಂ ಡೆಲಿವರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು, ಆದರೆ ಈಗ ಕೊಂಚ ಬದಲಾವಣೆ ಮಾಡುವುದರ ಮೂಲಕ ಗ್ರಾಮೀಣ ಪ್ರದೇಶದಲ್ಲಿ 6 ರಿಂದ 10ರ ವರೆಗೆ ದಿನಸಿ, ಗೊಬ್ಬರ ಹಾಗೂ ಕೃಷಿ ಸಂಬಂಧಿತ ಖರೀದಿಗೆ ಅವಕಾಶ ನೀಡಲಾಗಿದೆ. ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಲಾಕ್ ಡೌನ್ ಯಥಾ ಪ್ರಕಾರ ಮುಂದುವರೆಯಲಿದೆ. ನಗರ ಪ್ರದೇಶದಲ್ಲಿ ಹೋಂ ಡೆಲಿವರಿ ಜೊತೆಗೆ ಹೋಟೆಲ್ ನಿಂದ ಪಾರ್ಸೆಲ್ ಗೆ ಅವಕಾಶ ಕಲ್ಪಿಸಲಾಗಿದೆ. ಇನ್ನುಳಿದಂತೆ ತುರ್ತು ಮೆಡಿಕಲ್ ಸೇವೆ ಹೊರತುಪಡಿಸಿ ವಾಹನ ಸಂಚಾರ ಸಂಪೂರ್ಣ ಬಂದ್ ಆಗಿರಲಿದೆ. ಮದುವೆ ಸಮಾರಂಭಗಳಿಗೆ 10 ಜನರಿಗೆ ಅವಕಾಶ, ಬ್ಯಾಂಕಿನಲ್ಲಿ ಸಾರ್ವಜನಿಕ ಸೇವೆ ಇಲ್ಲ - ಕೇವಲ ಸಿಬ್ಬಂದಿಗಷ್ಟೇ ಅನುಮತಿ, ಹೊರ ಜಿಲ್ಲೆಯಿಂದ ಬಂದವರಿಗೆ 14 ದಿನ ಕ್ವಾರಂಟೈನ್ ಸೇರಿದಂತೆ ಈ ಹಿಂದೆ ನೀಡಲಾಗಿದ್ದ ಎಲ್ಲಾ ಸೂಚನೆಗಳು ಯಥಾ ಪ್ರಕಾರ ಜಾರಿಯಲ್ಲಿರಲಿದೆ.

ಈ ಹಿಂದಿನ ಲಾಕ್ಡೌನ್ ಸಂಪೂರ್ಣ ಯಶಸ್ವಿಯಾಗಿದ್ದು, ಇನ್ನೂ ನಾಲ್ಕು ದಿನಗಳ ಕಾಲ ಲಾಕ್ಡೌನ್ ಮುಂದುವರಿಸಿದ್ದೇವೆ ಸಾರ್ವಜನಿಕರು ಸಹಕರಿಸಬೇಕಾಗಿ ಜಿಲ್ಲಾಧಿಕಾರಿ ಕೆ.ಎನ್‌ ರಮೇಶ್ ಮನವಿ ಮಾಡಿದ್ದಾರೆ.