ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್ ಡೌನ್ ಇರುವ ಸಮಯದಲ್ಲೇ ಜಿಲ್ಲಾಡಳಿತ ಹೊರಡಿಸಿರುವ ನಿಯಮಗಳನ್ನು ಉಲ್ಲಂಘಿಸಿ ಚಿತ್ರೀಕರಣ ಮಾಡುತ್ತಿದ್ದ ಘಟನೆ ಕಳಸ ತಾಲೂಕಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಕಳಸ ತಾಲೂಕಿನ ಹೊರನಾಡು ಬಲಿಗೆ ಕ್ಯಾತನಮಕ್ಕಿ ಲಿಂಗಪ್ಪ ಎಂಬುವವರ ಮನೆಯಲ್ಲಿ ಸುಮಾರು ಒಂದೂವರೆ ತಿಂಗಳಿನಿಂದ ಬೆಂಗಳೂರಿನ ಸುಮಾರು 8 ಜನರು ವಾಸವಿದ್ದು, ನಿನ್ನೆ ದಿನಾಂಕ 23.5.2021 ರಂದು ಬೆಂಗಳೂರಿಗೆ ತೆರಳಲು ಜಿಲ್ಲಾಧಿಕಾರಿಗಳ ಅನುಮತಿಗೆ ಕಳಸಕ್ಕೆ ಬೇಟಿ ನೀಡಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.

ತಕ್ಷಣ ಜಿಲ್ಲಾಧಿಕಾರಿಗಳು ತಾಲೂಕು ತಹಸೀಲ್ದಾರ್ ರನ್ನು ಸಂಪರ್ಕಿಸಿ ಮಾಹಿತಿ ಪಡೆದಾಗ ಲಾಕ್ ಡೌನ್ ಸಮಯದಲ್ಲಿ ಸರ್ಕಾರದ ಆದೇಶ ಉಲ್ಲಂಘಸಿ ಅಕ್ರಮವಾಗಿ ಚಿತ್ರೀಕರಣ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ, ನಕ್ಸಲ್ ನಿಗ್ರಹ ಪಡೆಯ (ANF) ಕಳಸ ತಾಲೂಕಿನ ಮುಖ್ಯಸ್ಥ ಎನ್ನಲಾದ ಗಿರೀಶ್ ಎಂಬುವವರು ಚಿತ್ರೀಕರಣಕ್ಕೆ ಸಂಪೂರ್ಣ ಸಹಕಾರ ನೀಡಿದ್ದಾರೆಂದು ಆರೋಪಿಸಿ ವಲಯ ಅರಣ್ಯಾಧಿಕಾರಿ ವಿಜಯ ಕುಮಾರ್ ಮಾಹಿತಿ ನೀಡಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೊರೋನಾ ಹೆಚ್ಚುತ್ತಿದ್ದು ಪ್ರವಾಸಿ ತಾಣಗಳನ್ನು ಸಂಪೂರ್ಣವಾಗಿ ಮುಚ್ಚಿದ್ದರೂ ಸಹ ಪೊಲೀಸರ, ಅರಣ್ಯಾಧಿಕಾರಿಗಳ ಸಹಕಾರದಿಂದ ಅಕ್ರಮವಾಗಿ ಚಿತ್ರೀಕರಣ ನಡೆದಿರುವುದು ಬೆಳಕಿಗೆ ಬಂದಿದೆ. ಚಿತ್ರೀಕರಣ ನಡೆಸುತ್ತಿದ್ದ 8 ಜನರಲ್ಲಿ ಓರ್ವನಿಗೆ ಕೋವಿಡ್ ಪಾಸಿಟಿವ್ ಬಂದಿದ್ದು, ಬಲಿಗೆ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ. ಕ್ಯಾತನಮಕ್ಕಿ ಪ್ರವೇಶಕ್ಕೆ ಅರಣ್ಯ ಇಲಾಖೆ ಗೇಟ್ ಅಳವಡಿಸಿದ್ದು ಲಕ್ಡೌನ್ ಸಮಯದಲ್ಲಿ ಪ್ರವೇಶ ನಿಷೇಧಿಸಿದ್ದರೂ ಸಹ ಚಿತ್ರೀಕರಣಕ್ಕೆ ಅಕ್ರಮವಾಗಿ ಅವಕಾಶ ನೀಡಿದ್ದಾರೆ, ಅಕ್ರಮವಾಗಿ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.