ಚಿಕ್ಕಮಗಳೂರು: ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಮೆಲೆನಾಡಿನಲ್ಲಿ ಮನೆಮಾತಾಗಿದ್ದ, ಏಷ್ಯಾದ ಖಂಡದಲ್ಲೇ ಮೊದಲ ಸಹಕಾರ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಸಹಕಾರ ಸಾರಿಗೆ ಸಂಸ್ಥೆಗೆ (TCS) ಬೀಗ ಬಿದ್ದಿದೆ.
ಸಹಕಾರ ಸಾರಿಗೆ ಸಂಸ್ಥೆಯ ಆಡಳಿತ ವರ್ಗ ಸಾಲವನ್ನು ಮರು ಪಾವತಿ ಮಾಡದ ಹಿನ್ನಲೆಯಲ್ಲಿ ಸೋಮವಾರ ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ ಶ್ರೀರಾಮ್ ಟ್ರಾನ್ಸ್ಪೋರ್ಟ್ ಕಂಪನಿಯೂ 1 ಎಕರೆ 10 ಗುಂಟೆ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಸಂಸ್ಥೆಯ ಅಧ್ಯಕ್ಷರಾದ ಈ.ಎಸ್ ಧರ್ಮಪ್ಪ ಹಾಗೂ ಆಡಳಿತ ನಿರ್ದೆಶಕರಾಗಿದ್ದ ಗಾಡ್ವಿನ್ ಜಯಪ್ರಕಾಶ್ ಅವರು ಶ್ರೀರಾಮ್ ಟ್ರಾನ್ಸ್ಪೋರ್ಟ್ ಕಂಪನಿಯಲ್ಲಿ ಕೆಸವೆ ರಸ್ತೆಯಲ್ಲಿರುವ ಸಂಸ್ಥೆಯ ಆಸ್ತಿಯನ್ನು ಆಧಾರವಾಗಿ ನೀಡಿ 1 ಕೋಟಿಯ 20 ಲಕ್ಷ ಸಾಲವನ್ನು ಪಡೆದಿದ್ದರು.
2019ರ ನಂತರ ಸಾಲವನ್ನು ಮರು ಪಾವತಿ ಮಾಡಿರಲಿಲ್ಲ. ಕಂಪನಿಯೂ ಅವರಿಗೆ ನೋಟಿಸ್ ನೀಡಿದ್ದರು ಸಹ ಬಡ್ಡಿ ಸಹಿತ 1,31,41,210 ರೂ.ಮೊತ್ತವನ್ನು ಮರು ಪಾವತಿ ಮಾಡಲು ಹಿಂದೇಟು ಹಾಕಿದ್ದ ಕಾರಣ, ಜಿಲ್ಲಾಧಿಕಾರಿಗಳ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಅವರ ಆದೇಶದ್ವಯ ಸೋಮವಾರ ತಾಲೂಕು ದಂಡಾಧಿಕಾರಿ ಹೆಚ್.ಎಸ್ ಪರಮೇಶ್ ಸಮ್ಮುಖದಲ್ಲಿ ಕೆಸವೆ ರಸ್ತೆಯ ಸರ್ವೆ ನಂ 97ರಲ್ಲಿರುವ 1 ಎಕರೆ 10 ಗುಂಟೆ ಟಿಸಿಎಸ್ ಸಂಸ್ಥೆಯ ಆಸ್ತಿತಿಯನ್ನು ಶ್ರೀರಾಮ್ ಟ್ರಾನ್ಸ್ಪೋರ್ಟ್ ಕಂಪನಿ ವಶಕ್ಕೆ ತೆಗೆದುಕೊಂಡಿದೆ. ಯಾರೂ ಕಛೇರಿಗೆ ಪ್ರವೇಶಿಸದಂತೆ ಬೀಗಮುದ್ರೆ ಹಾಕಲಾಗಿದೆ. 2019ರ ನಂತರ ಸಂಸ್ಥೆಯೂ ಸಾಲವನ್ನು ಪಾವತಿ ಮಾಡಿಲ್ಲ. ಶ್ರೀರಾಮ್ ಟ್ರಾನ್ಸ್ ಪೋರ್ಟ್ ಹಲವು ಭಾರಿ ನೋಟಿಸ್ ನೀಡಿದ್ದು, ನಂತರ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟ್ ಮೊರೆ ಹೋಗಿದ್ದರು. ಈಗ ಜಿಲ್ಲಾಧಿಕಾರಿ ಸಂಸ್ಥೆಗೆ ಸೇರಿದ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುಲು ಆದೇಶ ಮಾಡಿದ್ದಾರೆ.
1990 ರಲ್ಲಿ ಶಂಕರ್ ಟ್ರಾನ್ಸ್ ಪೋರ್ಟ್ ಮುಚ್ಚಿದ ಬಳಿಕ ತಮೆಗೆ ಬಂದ ಪರಿಹಾರದ ಹಣದಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರೇ ಸಹಕಾರ ಸಾರಿಗೆ ಸಂಸ್ಥೆ ಹುಟ್ಟು ಹಾಕಿದ್ದರು. ಹಿರಿಯರಿಗೆ 50% ರಿಯಾಯಿತಿ, ವಿಧ್ಯಾರ್ಥಿಗಳಿಗೆ ಪಾಸ್ ನೀಡುವ ಮೂಲಕ ಮಲೆನಾಡಿನ ಲಾಕ್ಷಾಂತರ ಮಕ್ಕಳ ಭವಿಷ್ಯ ರೂಪಿಸಿದ ಹೆಗ್ಗಳಿಕೆ ಇದರದ್ದು. ಕಳೆದ ಒಂದು ವರ್ಷದಿಂದ ಟಿಸಿಎಸ್ ತನ್ನ ಸಂಚಾರ ನಿಲ್ಲಿಸಿತ್ತು. ವರ್ಷಕ್ಕೆ ಒಂದೂವರೆ ಕೋಟಿ ಟ್ಯಾಕ್ಸ್, ಜೊತೆ ರಿಯಾಯಿತಿ ಪಾಸ್ ಗಳ ಹೊರೆ ಹೊತ್ತ ಸಂಸ್ಥೆ ಟ್ಯಾಕ್ಸ್ ಕಡಿತ, ಡೀಸೆಲ್ ಸಬ್ಸಿಡಿ ನೀಡುವಂತೆ ಸರ್ಕಾರದ ಮೊರೆ ಹೋಗಿತ್ತು ಆದರೆ ಸರ್ಕಾರದಿಂದ ಯಾವುದೇ ರೀತಿಯ ನೆರವು ಸಿಗದ ಕಾರಣ ಸಂಸ್ಥೆ ಈಗ ದುರಂತ ಅಂತ್ಯ ಕಂಡಿದೆ. ಮೊದಲು 6 ಬಸ್ ಗಳ ಮೂಲಕ ಪ್ರಾರಂಭವಾಗಿದ್ದ ಸಂಸ್ಥೆಯಲ್ಲಿ ಈಗ 76 ಬಸ್ ಗಳಿದ್ದವು. ಏಷ್ಯಾ ಕಂಡದಲ್ಲೇ ಮೊದಲ ಸಹಕಾರ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು, ಸಂಸ್ಥೆಯನ್ನೇ ನಂಬಿಕೊಂಡಿದ್ದ 200ಕ್ಕೂ ಹೆಚ್ಚು ಕಾರ್ಮಿಕರು ಬೀದಿಗೆ ಬಿದ್ದಂತಾಗಿದೆ.
ಕಾರ್ಮಿಕ ಮುಖಂಡರು ಹೇಳೋದೇನು?
ಫೈನಾನ್ಸ್ ನವರು ಜಿಲ್ಲಾಧಿಕಾರಿ ನ್ಯಾಯಾಲಯದಿಂದ ಆದೇಶ ತಂದಿದ್ದಾರೆ. ಆಡಳಿತ ನಿರ್ಲಕ್ಷದಿಂದಾಗಿ ಈ ಘಟನೆ ಸಂಭವಿಸಿದೆ. ಈಗಾಗಲೆ ನೂರಾರು ಮಂದಿ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಕಾರ್ಮಿಕರಿಗೆ ಅನ್ಯಾಯವಾಗಿದೆ. ಸರಕಾರ ಸ್ವ-ಇಚ್ಛೆ ಯಿಂದ ಮುಂದೆ ನಿಂತು ಕಾರ್ಮಿಕರಿಗೆ ನ್ಯಾಯ ಒದಗಿಸಿಕೊಡಬೇಕು. ಕಾರ್ಮಿಕರ ಭವಿಷ್ಯ ನಿಧಿ ಮತ್ತಿತರ ವಿಷಯದ ಕುರಿತು ನಿರ್ಧಾರ ಆಗಿಲ್ಲ. ಫೈನಾನ್ಸ್ ಗೆ ಕೇವಲ 1.10 ಎಕರೆ ಜಾಗ ಮಾತ್ರ ಅಡವಿಡಲಾಗಿತ್ತು. ಉಳಿದ 10 ಗುಂಟೆ ಮತ್ತು ಕಟ್ಟಡ ಆಕ್ರಮಿಸಲು ಅವರಿಗೆ ಹಕ್ಕಿಲ್ಲ. ಮುಂದಿನ ನಡೆಯನ್ನು ಕಾನೂನು ಸಲಹೆಗಾರರೊಂದಿಗೆ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಕೊಪ್ಪ ಸಹಕಾರ ಸಾರಿಗೆ ಕಾರ್ಮಿಕ ಮುಖಂಡ ಎಚ್. ಆರ್. ಸಂಜೀವ ಹೇಳಿದ್ದಾರೆ.



0 Comments