ಕೋವಿಡ್‌ ಬಾಧಿತರಿಗೆ ಸಕಾಲದಲ್ಲಿ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಅಮೃತ್‌ನೋನಿ ಸೋಶಿಯಲ್‌ ವೆಲ್ಫೇರ್‌ ಟ್ರಸ್ಟ್‌ ಶಿವಮೊಗ್ಗ ಜನತೆಗೆ ಉಚಿತವಾಗಿ ಆಂಬ್ಯುಲೆನ್ಸ್‌ ಸೇವೆ ಒದಗಿಸಿಕೊಡುವ ಮೂಲಕ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಶನಿವಾರ ನಗರದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಆಂಬ್ಯುಲೆನ್ಸ್‌ ಸೇವೆಗೆ ಹಸಿರು ನಿಶಾನೆ ತೋರಿಸಿದರು. ಅಗತ್ಯವಿದ್ದವರಿಗೆ ಉಚಿತ ಸೇವೆ ನೀಡಲು ಸುಸಜ್ಜಿತ ಆಂಬ್ಯುಲೆನ್ಸ್‌ ಅನ್ನು ಸೇವಾ ಭಾರತಿ ಮತ್ತು ಕೋವಿಡ್‌ ಸುರಕ್ಷಾ ಪಡೆಯ ಸೇವಾ ಕೇಂದ್ರಕ್ಕೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಕೆ.ಎಸ್‌.ಈಶ್ವರಪ್ಪ ಕೋವಿಡ್‌-19 ಹಲವಾರು ರೀತಿಯಲ್ಲಿ ಸಂಕಷ್ಟತಂದೊಡ್ಡಿದೆ. ಸೋಂಕು ತಡೆಗೆ ಸರ್ಕಾರ ಶತ ಪ್ರಯತ್ನ ನಡೆಸುತ್ತಿದ್ದು, ಈ ಸಂದರ್ಭದಲ್ಲಿ ಸಂಘ ಸಂಸ್ಥೆಗಳು ಸಹಕಾರ ನೀಡಬೇಕು, ಸೇವಾ ಕಾರ್ಯದಲ್ಲಿ ಕೈಜೋಡಿಸಬೇಕು ಎಂದು ಕೋರಿದರು.

ಬಳಿಕ ಮಾತನಾಡಿದ ಆರ್‌ಎಸ್‌ಎಸ್‌ ಪ್ರಮುಖ ಪಟ್ಟಾಭಿರಾಮ್‌, ಕೋವಿಡ್‌ ಸಂಕಷ್ಟಸಂದರ್ಭದಲ್ಲಿ ರೋಗಿಗಳಿಗೆ ಸೇವೆ ನೀಡುವ ಉದ್ದೇಶದಿಂದ ಉಚಿತವಾಗಿ ಆಂಬ್ಯುಲೆನ್ಸ್‌ ನೀಡಿರುವುದು ಪುಣ್ಯದ ಕಾರ್ಯ. ಅಮೃತ್‌ ನೋನಿ ತಯಾರಿಕಾ ಸಂಸ್ಥೆಯವರ ಸೇವಾ ಕಾರ್ಯ ಸಂಜೀವಿನಿ ರೂಪದಲ್ಲಿ ರೋಗಿಗಳಿಗೆ ಅಮೃತವಾಗಲಿ ಎಂದು ಆಶಿಸಿದರು. ಮಲೆನಾಡಿನ ಭಾಗದಲ್ಲಿ ಹುಟ್ಟಿದ ಸಂಸ್ಥೆಯೊಂದು ಇಂದು ದೇಶದಾದ್ಯಂತ ಹೆಸರಾಗಿದ್ದಲ್ಲದೆ ಕಷ್ಟದ ಸಂದರ್ಭದಲ್ಲಿ ಮಲೆನಾಡಿಗರ ಕಷ್ಟಕ್ಕೆ ಸ್ಪಂದಿಸಿದ್ದನ್ನು ಸ್ಮರಿಸಬೇಕಾಗಿದೆ.

ಅಗತ್ಯವಿದ್ದವರು 8073649340, 7411863538, 7411095973 ಗೆ ಕರೆ ಮಾಡಿ ಆಂಬ್ಯುಲೆನ್ಸ್‌ ಸೇವೆ ಪಡೆದುಕೊಳ್ಳಬಹುದಾಗಿದೆ.