ಚಿಕ್ಕಮಗಳೂರು/ಕೊಪ್ಪ : ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಮಾರಾಟ ಹಾಗೂ ಪಡೆದುಕೊಂಡ ಸಂಬಂಧ ಆರು ಜನರ ವಿರುದ್ದ ಪ್ರಕರಣ ದಾಖಲಾಗಿದೆ.
ಒಂದನೇ ಪ್ರಕರಣದಲ್ಲಿ ಬನ್ನೂರು ಮೂಲದ ಯೋಗೀಶ್ ಹಾಗೂ ಕವಿತ ದಂಪತಿಗಳಿಗೆ ಜನಿಸಿದ ಮಗುವನ್ನು ವನಜ ಮತ್ತು ಕೀನ್ಯಾ ನಾಯಕ್ ಪಡೆದುಕೊಂಡಿದ್ದಾರೆ. ಇನ್ನು ಎರಡನೇ ಪ್ರಕರಣದಲ್ಲಿ ಹರಿಹರಪುರ ಮೂಲದ ಜಾಹಿರ ಮತ್ತು ಶುಕುರ್ ಅಹಮ್ಮದ್ ದಂಪತಿಗಳು ಮಗುವನ್ನು ಅಪರಿಚಿತ ದಂಪತಿಗಳಿಂದ ಪಡೆದುಕೊಂಡಿದ್ದು ದೂರಿನಲ್ಲೂ ಕೂಡ ತಂದೆ ತಾಯಿ ಹೆಸರು ತಿಳಿದಿಲ್ಲ ಎಂದು ದಾಖಲಾಗಿದೆ. ಮೂರನೇ ಪ್ರಕರಣದಲ್ಲಿ ಶಾಹಿಸ್ತಾ ಮತ್ತು ಫಯಾಝ್, ಉಡುಪಿ ಜಿಲ್ಲೆಯ ದಂಪತಿಗಳ ಮಗು ಪಡೆದುಕೊಂಡವರ ಹೆಸರು ಉಲ್ಲೇಖಿಸಲಾಗಿದ್ದು ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ.
ಈ ಮೂರು ಪ್ರಕರಣದಲ್ಲಿ ಮಹಿಳೆಯರಾದ ವನಜ, ಶಾಹಿಸ್ತಾ, ಕೆ. ಎಂ ಜಾಹಿರ ಎನ್ನುವವರು ಗರ್ಭಿಣಿಯಾಗಿರದೆ ಆಸ್ಪತ್ರೆಯಲ್ಲಿ ಹೊರರೋಗಿ ಹಾಗು ಒಳರೋಗಿ ಚೀಟಿಯನ್ನು ಮಾಡಿಸದೇ ನೇರವಾಗಿ ಹೆರಿಗೆ ಮಾಡಿಸಿಕೊಂಡು ಹೋಗಿರುವಂತೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಜನನ ಪ್ರಮಾಣ ಪತ್ರ ಪಡೆದಿರುತ್ತಾರೆ. ಯಾವುದೇ ಕಾನೂನು ರೀತಿಯಲ್ಲಿ ಮಗು ಪಡೆದುಕೊಳ್ಳದೆ ಅಕ್ರಮವಾಗಿ ಸಾಕುತ್ತಿರುವವರ ಹಾಗೂ ಮಾರಿದವರ ವಿರುದ್ದ ಬಾಲನ್ಯಾಯ ಕಾಯ್ದೆ ಅಡಿಯಲ್ಲಿ ಕಾನೂನು ಕ್ರಮ ಜರುಗಿಸಲು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಂಗನಾಥ್ ದೂರಿನಲ್ಲಿ ಕೂರಿದ್ದಾರೆ.
ವನಜ, ಜಾಹಿರಾ, ಕವಿತಾ, ಯೋಗೇಶ್, ಶುಕುರ್ ಅಹಮದ್, ಕೀನ್ಯಾ ವಿರುದ್ದ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಘಟನೆ ನಡೆದ ವೇಳೆ ಪ್ರಸೂತಿ ತಜ್ಞರಾಗಿ ಡಾ. ಬಾಲಕೃಷ್ಣ ಇದ್ದರು ಎಂದು ತಿಳಿಸಲಾಗಿದೆ.
ಅಧಿಕಾರಿಗಳು ಸ್ವಲ್ಪ ಮುತುವರ್ಜಿ ವಹಿಸಿ ಎಲ್ಲಾ ದಾಖಲೆಗಳನ್ನು ಕೂಲಂಕುಷವಾಗಿ ಪರಾಮರ್ಶಿಸಿದರೆ ಇನ್ನೂ ಒಂದಷ್ಟು ಪ್ರಕರಣಗಳು ಹೊರಗೆ ಬರಬಹುದು. ಹಾಗೆಯೇ ಇತರೆ ಸರ್ಕಾರಿ ಆಸ್ಪತ್ರೆಯಲ್ಲಿ ಸಹ ಈ ಕುರಿತು ಪರಿಶೀಲನೆ ನಡೆಸುವ ಅವಶ್ಯಕತೆ ಖಂಡಿತಾ ಇದೆ.


0 Comments