ಕಠಿಣ ಲಾಕ್ ಡೌನ್ ನಿಂದಾಗಿ ಕೃಷಿ ಚಟುವಟಿಕೆಗಳಿಗೆ ಬಹಳಷ್ಟು ತೊಂದರೆಯಾಗುತ್ತಿದೆ. ಇಂದು ಮಾಡುವ ಕೆಲಸವನ್ನು ಇಂದೇ ಮಾಡಿದರೆ ಮಾತ್ರ ವರ್ಷದ ಊಟಕ್ಕೆ ತೊಂದರೆ ಇಲ್ಲ. ಇಲ್ಲದಿದ್ದರೆ ಊಟಕ್ಕೂ ತೊಂದರೆಯಾಗುತ್ತದೆ. ಜೊತೆಗೆ ಮಾಡಿದ ಸಾಲ ತೀರಿಸಲು ಕಷ್ಟವಾಗುತ್ತದೆ. ಇನ್ನಷ್ಟು ಸಾಲಕ್ಕೆ ಬಲಿಯಾಗಬೇಕಾಗುತ್ತದೆ. ಕೃಷಿಯಲ್ಲಿ ಆಯಾ ಕಾಲಮಾನದಲ್ಲಿ ಮಾಡುವ ಕೆಲಸವನ್ನು ಆಗಲೇ ಮಾಡಲೇಬೇಕು. ಇಲ್ಲವಾದಲ್ಲಿ ಮುಂದೆ ಮತ್ತೊಂದು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಮಳೆ ಬರುತ್ತಿದ್ದು ಬೇಸಾಯ ಮಾಡಿ ಗೊಬ್ಬರ ಕೊಡಬೇಕು, ಔಷಧ ಸಿಂಪಡಣೆ ಮಾಡಬೇಕು, ಬೇಸಾಯ ಮಾಡದೆ ಉಳಿದಿರುವ ಕೃಷಿ ತೋಟಗಳಿಗೆ ಮುಂಗಾರಿಗೂ ಮೊದಲು ಬೇಸಾಯ ಕೆಲಸ ಪೂರ್ಣಗೊಳಿಸಬೇಕು. ಇನ್ನು ಆಲೂಗಡ್ಡೆ ನೆಡಲೇಬೇಕಾದ ಸಮಯ ಇದು. ಹಾಗೂ ನರ್ಸರಿ ಕೆಲಸ ಮಾಡಿಕೊಳ್ಳುವ ಸಮಯ ಇದು. 

ಕಾಫಿ ಗಿಡಗಳಿಗೆ ರಸಗೊಬ್ಬರ ನೀಡಲು ಈಗ ಸೂಕ್ತ ಸಮಯವಾಗಿದೆ ಇಂತಹ ಸಮಯದಲ್ಲಿ ಲಾಕ್ ಡೌನ್ ಇರುವುದರಿಂದ ರಸಗೊಬ್ಬರ ಖರೀದಿ ಮಾಡಿ ತೋಟಗಳಿಗೆ ಸಾಗಾಣಿಕೆ ಮಾಡಲು ತೊಂದರೆಯಾಗಿದೆ ಎಲ್ಲಾ ರಸಗೊಬ್ಬರ ಅಂಗಡಿಗಳು ಮುಚ್ಚಿರುವುದರಿಂದ ರೈತರಿಗೆ ತೊಂದರೆಯಾಗಿದೆ ಮಳೆಗಾಲ ಆರಂಭವಾಗಿದ್ದು ಕಾಫಿ ಗಿಡಗಳಿಗೆ ಗೊಬ್ಬರ ಹಾಕಲು ಸಕಾಲವಾಗಿದೆ ಈ ಸಮಯದಲ್ಲಿ ರಸಗೊಬ್ಬರ ನೀಡದಿದ್ದಲ್ಲಿ ಮುಂದಿನ ವರ್ಷದ ಫಸಲಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಮಳೆಗಾಲ ಆರಂಭದಲ್ಲಿ 2ರಿಂದ 3 ಸುತ್ತಿನವರೆಗೆ ರಸಗೊಬ್ಬರ ನೀಡುವ ಅವಶ್ಯಕತೆ ಇದೆ ಆದ್ದರಿಂದ ರೈತರಿಗೆ ಜಿಲ್ಲಾಧಿಕಾರಿಗಳು ರಸಗೊಬ್ಬರ ಖರೀದಿಸಿ ಸಾಗಾಣಿಕೆ ಮಾಡಲು ಅವಕಾಶ ಮಾಡಿಕೊಡಬೇಕು. ಈ ಎಲ್ಲಾ ರೈತರ ಕಷ್ಟಗಳನ್ನು ಅರ್ಥಮಾಡಿಕೊಂಡು ಜಿಲ್ಲಾಡಳಿತ ಕೃಷಿ ಕ್ಷೇತ್ರಕ್ಕೆ ವಿನಾಯಿತಿ ನೀಡಬೇಕೆಂದು ರೈತರು ಒತ್ತಾಯಿಸಿದ್ದಾರೆ.

ಮಲೆನಾಡನಲ್ಲಿ ಹೋಂ ಡೆಲಿವರಿ ಎಂಬುದು ಅವೈಜ್ಞಾನಿಕ ಆದೇಶ

ಮಲೆನಾಡಿನಲ್ಲಿ ಬೆಂಗಳೂರಿನಂತಹ ಮೆಟ್ರೋ ನಗರದ ಮಾದರಿಯಲ್ಲಿ ಹೋಂ ಡೆಲಿವರಿಗೆ ಮಾತ್ರ ಅವಕಾಶ ನೀಡಿ ಆದೇಶ ಹೊರಡಿಸಿರುವುದು ಜಿಲ್ಲಾಡಳಿತದ ಅವೈಜ್ಞಾನಿಕ ಆದೇಶಕ್ಕೆ ಹಿಡಿದ ಕೈಗನ್ನಡಿಯಾಗಿದೆ.

ಮೂರು, ನಾಲ್ಕು ಇನ್ನೂ ಕೆಲವೆಡೆಗಳಲ್ಲಿ ಹತ್ತು ಕಿಲೋಮೀಟರ್ ಗಳಿಗೆ ಒಂದು ಊರು ಇರುತ್ತದೆ, ಕಿಲೋಮೀಟರ್ ದೂರಕ್ಕೆ ಒಂದೊಂದು ಮನೆ ಇರುತ್ತದೆ. ಇನ್ನೂ ಕೆಲವೆಡೆ ಮನೆಗಳಿಗೆ ರಸ್ತೆ ಸಂಪರ್ಕವೂ ಇರುವುದಿಲ್ಲ. ಅಂತಹ ಊರುಗಳಿಗೆ ಹೋಗಿ ಬರಲೇ ಅರ್ಧ ದಿನ ಬೇಕಾಗುತ್ತದೆ, ಹೋದರೂ ಅರ್ಧ ದಿನದ ಸಂಬಳವಾಗಿ ಡೆಲಿವರಿ ಖರ್ಚು ನೀಡಬೇಕಾಗುತ್ತದೆ. ಇದೆಲ್ಲಾ ಆಗಿ ಹೋಗದ ಅಸಂಬದ್ಧ ಆದೇಶವಾಗಿದ್ದು ಸಂಪೂರ್ಣ ಲಾಕ್ಡೌನ್ ಆದೇಶ ಮುಂದುವರೆಸುವ ಮುನ್ನ ಒಂದು ದಿನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡುವುದು ನ್ಯಾಯೋಚಿತವಾಗಿದೆ. ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಈಗಿನ ಆದೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.