ಚಾಮರಾಜನಗರದ ಕೋವಿಡ್ ಆಸ್ಪತ್ರೆಯಲ್ಲಿ ನಡೆದಿರುವ ದುರಂತ ಕ್ಷಮೆಗೇ ಅರ್ಹವಲ್ಲದ ಘಟನೆ. ಈ ಘಟನೆಗೆ ಸಚಿವರೇ ಹೊಣೆ ಆಗಿದ್ದರೆ ಅವರೇ ಹೊಣೆ ಹೊತ್ತುಕೊಳ್ಳಬೇಕು, ಅಕಸ್ಮಾತ್ ಆಕ್ಸಿಜನ್ ಸಮಸ್ಯೆಯಿಂದ ಈ ಘಟನೆಯಾಗಿದ್ದರೆ ಈ ಸಾವುಗಳಿಗೆ ಸರ್ಕಾರವೇ ಹೊಣೆ ಹೊರಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿಕೆ ನೀಡಿದರು.
ಇದೊಂದು ಘನ ಘೋರ ಅನ್ಯಾಯ. ಒಂದು ವೇಳೆ ನಾನು ಸಚಿವನಾಗಿದ್ದು ಇಂತಹ ಘಟನೆ ನನ್ನ ಗಮನಕ್ಕೆ ಬಂದು, ನಾನು ಕ್ರಮ ತೆಗೆದುಕೊಳ್ಳದಿದ್ದರೆ ನಾನೇ ಹೊಣೆ ಹೊರಬೇಕಾಗುತ್ತದೆ ಹಾಗೆಯೇ ಇದಕ್ಕೆ ಯಾರೇ ಹೊಣೆಯಾಗಿದ್ದರು ಅವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಇಲ್ಲವಾದಲ್ಲಿ ಆರೋಗ್ಯ ಸಚಿವರೇ ಇದಕ್ಕೆ ಹೊಣೆಯಾಗುತ್ತಾರೆ ಎಂದರು.
ಎರಡನೇ ಅಲೆಯ ಸಂದರ್ಭದಲ್ಲಿ ಏಕಾಏಕಿ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದರಿಂದ ಈ ಪರಿಸ್ಥಿತಿ ನಿರ್ಮಾಣವಾಗಿದೆ. ನಿಧಾನವಾಗಿ ಪ್ರಕರಣ ಹೆಚ್ಚಾಗಿದ್ದರೆ ವ್ಯವಸ್ಥೆ ಮಾಡಬಹುದಿತ್ತು. ಇಂತಹ ಸಂದರ್ಭದಲ್ಲಿ ದೂರಿಕೊಂಡು ಕೂರುವುದು ಸರಿಯಲ್ಲ ಎಂದರು.
ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಮುಖ್ಯ ಮಂತ್ರಿಗಳಿಗೆ ಮನವಿ ಮಾಡಿದ್ದೇನೆ. ಇಂತಹ ಘಟನೆ ಬೇರೆ ಎಲ್ಲೂ ಮರುಕಳಿಸದಂತೆ ಜಾಗೃತೆ ವಹಿಸುವಂತೆ ಒತ್ತಾಯಿಸುತ್ತೇನೆ. ಈ ಹಿಂದೆ ಬೇರೆ ಬೇರೆ ರಾಜ್ಯಗಳಲ್ಲಿ ನಡೆದ ಘಟನೆ ನಮಗೆ ಪಾಠ ಆಗಬೇಕಿತ್ತು, ಆದರೆ ಅದು ಆಗಿಲ್ಲ ಎಂದರು.



0 Comments