ಶೃಂಗೇರಿಯಲ್ಲಿ ಕೋವಿಡ್ ನಿಂದ ಮೃತಪಟ್ಟ ಬ್ರಾಹ್ಮಣ ಸಮುದಾಯದ ವ್ಯಕ್ತಿಯ ಮೃತದೇಹವನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ವತಿಯಿಂದ ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದ್ದಾರೆ ಎಂದು ವೈರಲ್ ಆಗಿದ್ದ ಸುದ್ದಿಯೊಂದು ಹಲವು ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಈಗ ಘಟನೆಯ ಇನ್ನೊಂದು ಆಯಾಮ ಹೊರ ಬಂದಿದೆ.
ಘಟನೆಯ ಹಿನ್ನಲೆ ಏನು?
ಶೃಂಗೇರಿಯ ವಿದ್ಯಾರಣ್ಯಪುರದ ಅಗ್ರಹಾರದ ಪ್ರಕಾಶ ದೀಕ್ಷಿತ್ ಎಂಬುವವರು ಕೊರೋನದಿಂದ ಮೃತಪಟ್ಟಿದ್ದಾರೆ. ಬಳಿಕ ಅವರನ್ನು ತೀರ್ಥಹಳ್ಳಿಯ ಆಸ್ಪತ್ರೆಯಿಂದ ಆಂಬುಲೆನ್ಸ್ ಮೂಲಕ ಶೃಂಗೇರಿಗೆ ರಾತ್ರಿ ಸುಮಾರು 11 ಗಂಟೆಯ ಸಮಯಕ್ಕೆ ತರಲಾಯಿತು. ಅವರ ಅಂತ್ಯಕ್ರಿಯೆ ಮಾಡಲು ಮೃತರ ಮಗನಾದ ನಾರಾಯಣ ದೀಕ್ಷಿತ್ ನಿರ್ಧರಿಸಿದ್ದಾರೆ, ಬಳಿಕ ಕುಟುಂಬವರೂ ಸೇರಿ ಅಂತ್ಯಕ್ರಿಯೆ ನೆರವೇರಿಸುವ ವೇಳೆಯಲ್ಲಿ ಪಿಪಿಇ ಕಿಟ್ ಧರಿಸಿ ನಾಲ್ಕೈದು ಯುವಕರು ಬಂದಿದ್ದಾರೆ. ಅಂತ್ಯಕ್ರಿಯೆಗೆ ಒಂದಿಷ್ಟು ಸಹಾಯ ಮಾಡಿದ ಬಳಿಕ ಮೃತ ಪ್ರಕಾಶ್ ದೀಕ್ಷಿತ್ ಅವರ ಮಗ ನಾರಾಯಣ ದೀಕ್ಷಿತ್ ಅವರು ‘ಅಂತ್ಯಕ್ರಿಯೆ ವೇಳೆ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಕಾರ್ಯಕರ್ತರು ನಮಗೆ ಸಹಾಯ ಮಾಡಿದ್ದಾರೆ, ಅವರಿಗೆ ನಾನು ಧನ್ಯವಾದ ತಿಳಿಸುತ್ತೇನೆ’ ಎಂದು ಹೇಳಿದ ವೀಡಿಯೋ ಒಂದು ಸಾಕಷ್ಟು ವೈರಲ್ ಆಗತೊಡಗಿದೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳು ಹುಟ್ಟಿಕೊಂಡಿತ್ತು.
ಅಸಲಿಗೆ ನಡೆದಿದ್ದೇನು?
ಶೃಂಗೇರಿಯಲ್ಲಿ ಒಟ್ಟು ಮೂರು ಸ್ಮಶಾನಗಳಿದ್ದು ಒಂದು ಕಡೆಯಲ್ಲಿ ಕಟ್ಟಿಗೆಯ ವ್ಯವಸ್ಥೆ ಇರಲಿಲ್ಲ, ಇನ್ನೊಂದು ಕಡೆ ಈಗಾಗಲೇ ಒಂದು ಮೃತದೇಹವನ್ನು ದಹನ ಮಾಡುತ್ತಿದ್ದರಿಂದ ಇನ್ನೂ 2 ಗಂಟೆ ಕಾಯಬೇಕಾಗಿದ್ದ ಕಾರಣ ಹಾಗೂ ಆಂಬುಲೆನ್ಸ್ ಚಾಲಕ ತಡವಾಗುತ್ತದೆ ಎಂದ ಕಾರಣಕ್ಕೆ ಮೃತ ಪ್ರಕಾಶ್ ದೀಕ್ಷಿತರ ಮೃತದೇಹವನ್ನು ತಕ್ಷಣಕ್ಕೆ ಆನೆಗುಂದ ಸ್ಮಶಾನಕ್ಕೆ ಸಾಗಿಸಲಾಗಿದೆ. ಅಲ್ಲದೇ ಅವರ ಕುಟುಂಬಕ್ಕೆ ಸೇರಿದ ಮೂವರು ಕೂಡ ಅಲ್ಲಿದ್ದರು ಆದರೆ ಶವ ಸುಡಲು ಇಂಧನ ಬೇಕಾಗಿದ್ದರಿಂದ ಆಂಬುಲೆನ್ಸ್ ಚಾಲಕನ ಸಹಾಯ ಕೇಳಿದ್ದಾರೆ, ಆಗ ಆತ ಸ್ಥಳೀಯ ಸ್ನೇಹಿತರಾದ ಯುವಕರಿಗೆ ಸಹಾಯಕ್ಕಾಗಿ ಸ್ಥಳಕ್ಕೆ ಬರುವಂತೆ ತಿಳಿಸಿದ್ದಾನೆ. ಬಳಿಕ ಅಂತ್ಯಕ್ರಿಯೆ ನಡೆದಿದ್ದು ನಾರಾಯಣ ದೀಕ್ಷಿತ್ ಅವರು ಸ್ಥಳದಲ್ಲಿದ್ದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.
www.newsmalnad.com
ಆ ಸಮಯದಲ್ಲಿ ಅಲ್ಲಿಗೆ ಬಂದಿದ್ದ ಯುವಕರು "ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ" ಯುವಕರು ನಮಗೆ ಅಂತ್ಯಕ್ರಿಯೆ ವೇಳೆ ಸಹಾಯ ಮಾಡಿದ್ದಾರೆ ಎಂದು ಹೇಳುವಂತೆ ಕೇಳಿಕೊಂಡು ಅದನ್ನು ವೀಡಿಯೋ ಮಾಡಿದ್ದಾರೆ ಎಂದು ಆನೆಗುಂದದ ಚಿತಾಗಾರದ ಅಧ್ಯಕ್ಷ ನಾಗೇಂದ್ರ ಅವರಿಗೆ ನಾರಾಯಣ ದೀಕ್ಷಿತ್ ಅವರು ಹೇಳಿರುವುದಾಗಿ ಶೃಂಗೇರಿ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರೊಂದಿಗೆ ಮಾತನಾಡಿರುವ ಆಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಈ ಕುರಿತು ಸ್ವತಃ ನಾರಾಯಣ ದೀಕ್ಷಿತ್ ಅವರು ಪ್ರತಿಕ್ರಿಯಿಸಿದ್ದು, ನಾನು ಶೃಂಗೇರಿಯ ವಿದ್ಯಾರಣ್ಯಪುರದಲ್ಲಿ ಇತ್ತಿಚಿಗೆ ಬಂದು ನೆಲೆಸಿದ್ದು ನನಗೆ ಊರಿನವರ ಸಂಪರ್ಕ ಇರಲಿಲ್ಲ. ಆಗ ಆ್ಯಂಬುಲೆನ್ಸ್ ಚಾಲಕನ ಬಳಿ ವಿಚಾರ ಹೇಳಿದಾಗ ಆತ ಒಂದಿಷ್ಟು ಯುವಕರಿಗೆ ಕರೆ ಮಾಡಿದ್ದಾನೆ. ನಂತರ ಆ ಯುವಕರು ಸಣ್ಣ ಪುಟ್ಟ ಸಹಾಯ ಮಾಡಿದ ಬಳಿಕ ತಾವು PFI ಸಂಘಟನೆಗೆ ಸೇರಿದವರಾಗಿದ್ದು ಸಂಘಟನೆಗೆ ಧನ್ಯವಾದ ಹೇಳಿ ಎಂದು ಕೇಳಿಕೊಂಡರು, ಅವರಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ನಾನು ಧನ್ಯವಾದ ಹೇಳಿದ್ದೇನೆ ಆದರೆ ಸಾಮಾಜಿಕ ಜಾಲತಾಣದಲ್ಲಿ ನನ್ನ ಹೇಳಿಕೆಯನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಇದನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ.
ಶವದ ಬೆಂಕಿ ಆರುವ ಮೊದಲು ವೀಡಿಯೋ ಮಾಡಿಸಿ ಪ್ರಚಾರ ತೆಗೆದುಕೊಳ್ಳುವುದು ಮಾನವೀಯತೆ ಲಕ್ಷಣ ಅಲ್ಲ:
ಶೃಂಗೇರಿಯಲ್ಲಿ ಇದುವರೆಗೂ ನಮ್ಮ ಸಮುದಾಯದ ಹಲವು ಕೊರೋನಾ ರೋಗಿಗಳ ಶವ ಸಂಸ್ಕಾರ ಮಾಡಿದ್ದು ಬಹುತೇಕ ಎಲ್ಲದಕ್ಕೂ ನಾವು ಸಹಾಯ ಹಸ್ತ ಚಾಚಿದ್ದೇವೆ. ನೆನ್ನೆಯ ಘಟನೆ ನಮ್ಮ ಗಮನಕ್ಕೇ ಬಂದಿರಲಿಲ್ಲ. ಮೃತ ಪ್ರಕಾಶ್ ದೀಕ್ಷಿತರ ಅಂತ್ಯಸಂಸ್ಕಾರವನ್ನು ಅವರ ಮಗನಾದ ನಾರಾಯಣ ದೀಕ್ಷಿತ್ ಅವರೇ ಮಾಡಿದ್ದಾರೆ, ಆದರೆ ಕೆಲ ಸಂಘಟನೆಯ ಕಾರ್ಯಕರ್ತರು ಪ್ರಚಾರ ಪಡೆಯುತ್ತಿದ್ದಾರೆ. ಶವದ ಬೆಂಕಿ ಆರುವ ಮೊದಲು ವೀಡಿಯೋ ಮಾಡಿಸಿ ಪ್ರಚಾರ ತೆಗೆದುಕೊಳ್ಳುವುದು ಮಾನವೀಯತೆ ಲಕ್ಷಣ ಅಲ್ಲ ಎಂದು ಶೃಂಗೇರಿ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಸತೀಶ್ ಜಿ ಎಂ ಕಟುವಾಗಿ ಟೀಕಿಸಿದ್ದಾರೆ.
www.newsmalnad.com
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಶೃಂಗೇರಿ ಘಟಕವೇ ಇಲ್ಲವೇ?
ಶೃಂಗೇರಿಯಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಘಟಕವೇ ಇಲ್ಲ ಎಂಬ ಆರೋಪ ಸಹ ಕೇಳಿ ಬರುತ್ತಿದೆ. ಅದಕ್ಕೆ ಕಾರಣ ಕೆಲವು ತಿಂಗಳ ಹಿಂದೆ ಶೃಂಗೇರಿ ಶಂಕರಾಚಾರ್ಯರರ ಪ್ರತಿಮೆಗೆ ಅವಮಾನ ಪ್ರಕರಣದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಹಾಗೂ ಎಸ್ಡಿಪಿಐ ಮೇಲೆ ಆರೋಪ ಹೊರಿಸಲಾಗಿತ್ತು. ಅದಕ್ಕೆ ಸ್ಪಷ್ಟನೆ ನೀಡಿದ್ದ ಜಿಲ್ಲಾ ಮುಖಂಡರು ಶೃಂಗೇರಿಯಲ್ಲಿ ನಮ್ಮ ಘಟಕವೇ ಇಲ್ಲ ಎಂದು ಹೇಳಿಕೆ ನೀಡಿದ್ದರು. ಅದಾದ ನಂತರ ನೂತನವಾಗಿ ಘಟಕದ ಆರಂಭದ ಕುರಿತು ಸಹ ಯಾವುದೇ ಪ್ರಕಟಣೆ ಹೊರಡಿಸಿರುವುದಿಲ್ಲ.


0 Comments