ಕಳೆದ ಒಂದು ವರ್ಷಗಳಿಂದ ಶೃಂಗೇರಿ ಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರೀಯುತ ಡಾ। ನಾಗರಾಜ್ ಅವರು ಹಾಗೂ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಶೃಂಗೇರಿ ಯ ಮೊದಲ ಶಾಸಕ ವೀರಪ್ಪಗೌಡರ ಮಗ ಕೆ.ವಿ.ಆರ್. ಟ್ಯಾಗೋರ್ ಕೊರೋನಾಗೆ ಬಲಿಯಾಗಿ ಇಹಲೋಕ ತ್ಯಜಿಸಿದ್ದಾರೆ.
ಶೃಂಗೇರಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿದ್ದ ಶಿವಮೊಗ್ಗ ಮೂಲದ ನಾಗರಾಜ್ ಅವರು ಕಳೆದ ಒಂದು ವಾರದಿಂದ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ದಾವಣಗೆರೆಯ ಆಸ್ಪತ್ರೆಯಲ್ಲಿ ಇಂದು ಸಾವನ್ನಪ್ಪಿದ್ದಾರೆ.
ಶೃಂಗೇರಿಯ ಮೊದಲ ಶಾಸಕರಾಗಿದ್ದ ಕೆ.ಎನ್.ವೀರಪ್ಪಗೌಡರ ಪುತ್ರ ಹಾಗೂ ಮಾಜಿ ಐಪಿಎಸ್ ಅಧಿಕಾರಿಯಾಗಿದ್ದ, ಶೃಂಗೇರಿಯ ಜೆ.ಸಿ.ಬಿ.ಎಂ ಕಾಲೇಜಿನ ಹಳೇ ವಿದ್ಯಾರ್ಥಿ ಸಂಘದ ಸಂಸ್ಥಾಪಕ ಅಧ್ಯಕ್ಷರೂ ಆಗಿದ್ದ ಕೆ.ವಿ.ಆರ್. ಟ್ಯಾಗೂರ್ ರವರು ಸಹ ಕೊರೋನಾ ಗೆ ಬಲಿಯಾಗಿ ವಿಧಿವಶರಾಗಿದ್ದಾರೆ. ಸದಾ ಕ್ರಿಯಾಶೀಲ ವ್ಯಕ್ತಿತ್ವ ಉಳ್ಳ ಅವರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಉತ್ಸಾಹಿಗಳು. ಜೀವನವನ್ನು ಬಹಳ ವರ್ಣಮಯವಾಗಿ ಕಾಣಲು ,ಜನಾನುರಾಗಿ ವ್ಯಕ್ತಿತ್ವ ರೂಪಿಸಿಕೊಳ್ಳಲು ಬಯಸುವವರಾಗಿದ್ದರು.
ಟ್ಯಾಗೂರ್ ಅವರ ತಂದೆ ಶೃಂಗೇರಿ ಕ್ಷೇತ್ರದ ಮೊದಲ ಶಾಸಕರು ಹಾಗೂ ಉಳುವವನೆ ಭೂಮಿ ಒಡೆಯ ಕಾನೂನು ಜಾರಿಗೆ ತರಲು ಶ್ರಮಿಸಿದ ಶಾಸಕರಾಗಿದ್ದರು. ಬದುಕು ಕಟ್ಟಿಕೊಳ್ಳಲು ಮಲೆನಾಡಿನಿಂದ ಬೆಂಗಳೂರು ತೆರಳುವವರಿಗೆ ಬದುಕು ಕಟ್ಟಿಕೊಳ್ಳಲು ಬೆಂಬಲವಾಗಿ ನಿಲ್ಲುತ್ತಿದ್ದವರಾಗಿದ್ದರು ಟ್ಯಾಗೂರ್.
ಮೊದಲು ಉಪನ್ಯಾಸಕ ವೃತ್ತಿ ಜೀವನದಿಂದ ಆರಂಭಿಸಿ ನಂತರ ಪೊಲೀಸ್ ಇಲಾಖೆಯ ವೃತ್ತಿಗೆ ಸೇರಿ ಇಲಾಖೆಯ ಉನ್ನತ ಹುದ್ದೆಯೊಂದಿಗೆ ಹಲವು ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸಿದ್ದರು. ಸಾಕಷ್ಟು ಸಾಮಾಜಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದ ಇವರು ತಾನು ಓದಿದ್ದ ಶೃಂಗೇರಿಯ ಜೆಸಿಬಿಎಂ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘ ಕಟ್ಟಿದ್ದರು. ಬೆಂಗಳೂರಿನಲ್ಲಿ ಸಹ್ಯಾದ್ರಿ ಸಂಘ ವನ್ನೂ ಯಶಸ್ವಿಯಾಗಿ ನಡೆಸಿಕೊಂಡು ಬಂದು ಬೆಂಗಳೂರಿನಲ್ಲಿರುವ ಮಲೆನಾಡಿಗರ ಸಮಾಗಮಕ್ಕೆ ನಾಂದಿ ಹಾಡಿದ್ದರು.
ಪೊಲೀಸ್ ಹುದ್ದೆಯ ನಿವೃತ್ತಿ ನಂತರ ಮತ್ತೆ ಅವರು ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದರು. ಪೊಲೀಸ್ ಅಧಿಕಾರಿಯಾಗಿದ್ದರೂ ಸಾಹಿತ್ಯಾಸಕ್ತರಾಗಿದ್ದ ಇವರು ಹಲವು ಸಾಹಿತ್ಯ ಚಟುವಟಿಕೆ ಗಳಲ್ಲಿ ಭಾಗವಹಿಸುತಿದ್ದರು. ಮೃತರ ಆತ್ಮಕ್ಕೆ ದೇವರು ಶಾಂತಿ ನೀಡಲಿ, ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ


0 Comments