ಕೊಪ್ಪ: ಸುಮಾರು 250ಕ್ಕೂ ಅಧಿಕ ಕನ್ನಡ ಚಲನಚಿತ್ರಗಳಲ್ಲಿ ನಟಿಸಿದ್ದ ಸ್ಯಾಂಡಲ್ವುಡ್ನ ಹಿರಿಯ ನಟ ಶಂಖನಾದ ಅರವಿಂದ್(70) ಅವರು ಕೊರೊನಾ ಸೋಂಕಿನಿಂದ ಇಂದು ಸಾವನ್ನಪ್ಪಿದ್ದಾರೆ. ಅರವಿಂದ್ ಅವರಿಗೆ ಕಳೆದ ಹತ್ತು ದಿನಗಳ ಹಿಂದೆ ಕೊರೊನಾ ಸೋಂಕು ದೃಢಪಟ್ಟಿತ್ತು. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕ್ಸಿತ್ಸೆ ಪಡೆಯುತ್ತಿದ್ದ ಅವರು ಇಂದು ಉಸಿರಾಟ ಸಮಸ್ಯೆಯಿಂದ ಕೊನೆಯುಸಿರೆಳೆದಿದ್ದಾರೆ. ಕಾಶಿನಾಥ್ ಸಿನಿಮಾದ ಮೂಲಕ ಕನ್ನಡ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡಿದ್ದ ಅರವಿಂದ್ ತಮ್ಮ ಹಾಸ್ಯ ನಟನೆಯ ಮೂಲಕ ಕನ್ನಡಿಗರ ಮನೆ ಮಾತಾಗಿದ್ದದು ಕನ್ನಡದ ಬಹುತೇಕ ದಿಗ್ಗಜ ನಟರ ಜೊತೆ ನಟಿಸಿದ್ದರು. ಬೆಟ್ಟದ ಹೂ, ಶಂಕನಾದ, ಉಂಡುಹೋದ ಕೊಂಡುಹೋದ ಸಿನಿಮಾ ಸೇರಿದಂತೆ ಅನೇಕ ಚಿತ್ರಗಳಲ್ಲಿ ಹಾಸ್ಯ ನಟನಾಗಿ ತೆರೆ ಮೇಲೆ ಮಿಂಚಿದ್ದರು.
ಇವರು ಮೂಲತಃ ಮಲೆನಾಡಿನ ಕೊಪ್ಪದ ಮಾಚಿಕೊಪ್ಪದವರಾಗಿದ್ದು ಕಲೆಯಿಂದಲೇ ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಂಡಿದ್ದರು. ಸಿನಿಮಾ ಕನಸುಹೊತ್ತು ಬೆಂಗಳೂರು ಸೇರುವ ಯುವಕರಿಗೆ ಆಶ್ರಯದಾತರಾಗಿದ್ದರು ಸಹ. ಸಹಜ ಅಭಿನಯಕ್ಕೆ ಹೆಸರಾಗಿದ್ದ ಅರವಿಂದ್ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಸರಳ ಸೌಮ್ಯ ಸ್ವಭಾವದ ಅರವಿಂದ್ ಅವರಿಗೆ ಮೂವರು ಮಕ್ಕಳಿದ್ದು, ಪತ್ನಿಯು ಸೇರಿ ಕಲೆಯ ದೊಡ್ಡ ಕುಟುಂಬವಾಗಿತ್ತು.
ಪೋಷಕ ಪಾತ್ರಗಳಿಗೆ ಜೀವ ತುಂಬಿದ್ದ ಶಂಖನಾದ ಅರವಿಂದ್ ಇಬ್ಬರು ಹೆಣ್ಣು ಮಕ್ಕಳು ಹಾಗು ಒಬ್ಬ ಪುತ್ರನನ್ನ ಅಗಲಿದ್ದಾರೆ


0 Comments