ಕೊರೋನಾ ಸೋಂಕು ಜಿಲ್ಲೆಯಲ್ಲೂ ವ್ಯಾಪಕವಾಗಿ ಹರಡುತ್ತಿದ್ದು, ಲಸಿಕೆ ತೆಗೆದುಕೊಳ್ಳಲು ಲಸಿಕಾ ಕೇಂದ್ರಕ್ಕೆ ತೆರಳಿದವರಿಗೆ ಸರಬರಾಜು ಇಲ್ಲದ ಕಾರಣ "ನಾಳೆ ಬಾ" ಎಂದು ಹೇಳಿ ಕಳಿಸಲಾಗುತ್ತಿದೆ.

ರಾಜ್ಯ ಸರ್ಕಾರದ ನೇತೃತ್ವದಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತದ ಮುಂದಾಳತ್ವದಲ್ಲಿ, ಹಾಗೂ ಆರೋಗ್ಯ ಇಲಾಖೆಯ ಸಹಯೋಗದೊಂದಿಗೆ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಕೋವಿಡ್ ಲಸಿಕೆಗೆ ಬಂದವರಿಗೆ "ನಾಳೆ ಬಾ" ಎಂದು ಹೇಳುವ ಮೂಲಕ ನೂತನ ಅಭಿಯಾನ ನಡೆಸುತ್ತಿದ್ದಂತೆ ಕಾಣುತ್ತಿದೆ.

ಎರಡನೇ ಡೋಸ್ ಸಹ ಖಾಲಿ: 

ಸಧ್ಯ ಮೊದಲನೇ ಡೋಸ್ ವ್ಯಾಕ್ಸಿನ್ ಕೊರತೆ ಎಲ್ಲೆಡೆ ಇದೆ ಆದರೆ 45 ವರ್ಷ ಮೇಲ್ಪಟ್ಟು ಮೊದಲ ಡೋಸ್ ತೆಗೆದುಕೊಂಡಿದ್ದವರಿಗೂ ಸಹ ಎರಡನೇ ಡೋಸ್ ಸಿಗುತ್ತಿಲ್ಲ. ಸಧ್ಯ ಕೆಲವೆಡೆ ಕೋವ್ಯಾಕ್ಸಿನ್ ಮಾತ್ರ ಇದ್ದು ಕೋವಿಶೀಲ್ಡ್ ಲಭ್ಯವಿರುವುದಿಲ್ಲ ಎಂದು ಆಸ್ಪತ್ರೆಗಳ ಮುಂಬಾಗ ನಾಮಫಲಕ ಅಳವಡಿಸಲಾಗಿದೆ.

ಯಾವಾಗ ಲಸಿಕೆ ಬರುತ್ತದೆ ಎಂಬ ಸ್ಪಷ್ಟ ನಿರ್ದೇಶನ ಸಹ ಇಲ್ಲದಿರುವುದು ಪ್ರತಿ ದಿನ ಆಸ್ಪತ್ರೆಗೆ ತೆರಳಿದವರಿಗೆ ನಾಳೆ ಬಾ ಎಂದು ಹೇಳಿ ಕಳಿಸುವಂತೆ ಆಗಿದೆ. 60 ವರ್ಷ ಮೇಲ್ಪಟ್ಟವರಿಗೆ ಸಹ ಲಸಿಕೆ ಲಭ್ಯ ಇಲ್ಲದಿರುವಾಗ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಪೂರೈಸುವ ಭರವಸೆ ಸಧ್ಯಕ್ಕೆ ಸರ್ಕಾರ ನಿರ್ಮಿಸಿದ ಸುಳ್ಳಿನ ಅರಮನೆಯಾಗಿದೆ.

ಹಳ್ಳಿ ಪ್ರದೇಶಗಳೆಂದು ಕಡೆಗಣನೆ:

ಮಲೆನಾಡಿನಲ್ಲಿ ಸರಿಯಾದ ಸುಸಜ್ಜಿತ ಆಸ್ಪತ್ರೆಗಳು ಸಹ ಇಲ್ಲ, ಕೊರೋನಾ ಸೋಂಕು ಸಹ ವ್ಯಾಪಕವಾಗಿ ಹರಡುತ್ತಿದೆ ಹೀಗಿರುವಾಗ ವ್ಯಾಕ್ಸಿನ್ ಸಹ ಸರಿಯಾಗಿ ಸರಬರಾಜು ಮಾಡದೇ ಇರುವುದು ಹಾಗೂ ಟೆಸ್ಟಿಂಗ್ ಗೆ ರ್ಯಾಪಿಡ್ ಕಿಟ್ ಪೂರೈಕೆಯ ವ್ಯತ್ಯಯ ಜಿಲ್ಲೆಯಲ್ಲಿ ಸೊಂಕು ಹೆಚ್ಚು ಹರಡಲು ಕಾರಣವಾಗಿದೆ.

ಆರ್ಟಿಪಿಸಿಆರ್ ಟೆಸ್ಟ್ ಮಾಡಿಸಿದಲ್ಲಿ ರಿಪೋರ್ಟ್ ಬರಲು ಎರಡು ಅಥವಾ ಮೂರು ದಿನಗಳಾಗುತ್ತದೆ, ಆ ನಡುವೆ ಸೋಂಕು ಹರಡುವ ಸಾಧ್ಯತೆ ಸಹ ಹೆಚ್ಚಿದೆ. ಹಳ್ಳಿ ಪ್ರದೇಶಗಳೆಂದು ನಮ್ಮ ಭಾಗವನ್ನು ಕಡೆಗಣನೆ ಮಾಡಲಾಗುತ್ತಿದೆ ಎಂಬ ಆರೋಪ ಸಹ ಕೇಳಿ ಬರುತ್ತಿದೆ.