
ಜನಪ್ರತಿನಿಧಿಗಳ ಒತ್ತಡದ ಮೇರೆಗೆ ಶೃಂಗೇರಿಯ ತಾಲೂಕು ಆಸ್ಪತ್ರೆಯನ್ನು ಕೋವಿಡ್ ಕೇರ್ ಕೇಂದ್ರವನ್ನಾಗಿ ಪರಿವರ್ತಿಸಲು ತಯಾರಿ ನಡೆಸಲಾಗುತ್ತಿದೆ. ಆದರೆ ಇದು ಆದಲ್ಲಿ ಈ ಎಡವಟ್ಟು ನಿರ್ಧಾರದಿಂದ ಶೃಂಗೇರಿ ಜನರ ನೆಮ್ಮದಿ ಕೆಡುವುದು ಖಂಡಿತಾ.
ಮೂವತ್ತು ಬೆಡ್ ಆಸ್ಪತ್ರೆಯನ್ನು ನೂರು ಬೆಡ್ ಆಸ್ಪತ್ರೆ ಯನ್ನಾಗಿಸಿ 14 ವರ್ಷದ ಹಿಂದೆಯೇ ಆದೇಶ ಹೊರಡಿಸಿದ್ದರೂ ಸಹ ಇದುವರೆಗೂ ಮೇಲ್ದರ್ಜೆಗೆ ಏರಿಸದೆ ಬೇಜವಾಬ್ದಾರಿ ಪ್ರದರ್ಶಿಸಿದ್ದ ಜನನಾಯಕರು ಈಗ ದಿಢೀರನೇ ತಾಲೂಕು ಆರೋಗ್ಯ ಕೇಂದ್ರವನ್ನು ಕೋವಿಡ್ ಕೇಂದ್ರವನ್ನಾಗಿ ಮಾಡಲು ಹೊರಟಿರುವುದು ಕಾಳಜಿಯೋ ಅಥವಾ ಪ್ರಚಾರದ ಹಪಾಹಪಿಯೋ ಎಂಬ ಅನುಮಾನ ಜನರಲ್ಲಿ ಮೂಡುತ್ತಿದೆ.
ಏಕೆಂದರೆ ಈಗಿರುವ ಸಾರ್ವಜನಿಕ ಆಸ್ಪತ್ರೆ ಅತಿ ಇಕ್ಕಟ್ಟಾದ ಜಾಗದಲ್ಲಿದ್ದು ಕೋವಿಡ್ ಕೇರ್ ಮಾಡಲು ಆಸ್ಪತ್ರೆಯನ್ನು ಎರಡು ವಿಭಾಗಗಳನ್ನಾಗಿ ಮಾಡಲು ಸ್ಥಳಾವಕಾಶವೇ ಇಲ್ಲವಾಗಿದೆ. ಒಂದು ವಿಭಾಗದಲ್ಲಿ ಸಾಮಾನ್ಯ ವಾರ್ಡ್, ಶೌಚಾಲಯ, ಹೆರಿಗೆ ವಾರ್ಡ್, ಔಷಧ ಕೊಠಡಿ ಇದ್ದರೆ ಮತ್ತೊಂದು ವಿಭಾಗದಲ್ಲಿ ವೈದ್ಯಕೀಯ ಚಿಕಿತ್ಸೆ, ಲ್ಯಾಬೋರೇಟರಿ, ಪ್ರಾಥಮಿಕ ಚಿಕಿತ್ಸೆ, ಚಿಕಿತ್ಸಾ ಕೊಠಡಿ ಇದೆ.
ಎರಡೂ ವಿಭಾಗದ ಮಧ್ಯದಲ್ಲಿ ಮೇಲಿನ ಮಹಡಿಗೆ ತೆರಳುವ ಅವಕಾಶ ಇದ್ದು ಅದರಲ್ಲಿ ಪ್ರಕೃತಿ ಚಿಕಿತ್ಸೆ ವಿಭಾಗವಿದೆ. ಇದರಲ್ಲಿ ಒಂದು ವಿಭಾಗವನ್ನು ಮತ್ತೊಂದು ವಿಭಾಗದಿಂದ ಬೇರ್ಪಡಿಸುವುದು ಸಾಧ್ಯವಿಲ್ಲ. ಹಾಗೆ ಕೋವಿಡ್ ವಾರ್ಡ್ ಮಾಡಿದಲ್ಲಿ ಕೋವಿಡೇತರ ರೋಗಿಗಳಿಗೆ ಆಸ್ಪತ್ರೆಗೆ ಪ್ರವೇಶ ನಿಷೇದಿಸಬೇಕಾಗುತ್ತದೆ. ಹಾಗೆ ನಿಷೇದಿಸಿದಲ್ಲಿ ಸಾಮಾನ್ಯ ರೋಗಗಳಿಗೆ ಚಿಕಿತ್ಸೆಗೆ ಬರುವ ರೋಗಿಗಳು ಹಣ ಪಾವತಿಸಿ ಖಾಸಗಿ ಆಸ್ಪತ್ರೆಗೆ ತೆರಳಬೇಕಾಗುತ್ತದೆ.
ಆಸ್ಪತ್ರೆಯಲ್ಲಿ ಹಲವು ವರ್ಷಗಳಿಂದ ಸಿಬ್ಬಂದಿ ಕೊರತೆ ಇದ್ದರೂ ಸಹ ಈ ಕುರಿತು ಯಾರೂ ಸಹ ಮುತುವರ್ಜಿ ವಹಿಸದ ಪರಿಣಾಮ ಈಗಿರುವ ವೈದ್ಯರು ಹಗಲು ಹಾಗೂ ರಾತ್ರಿ ಪಾಳಿ ಎರಡರಲ್ಲೂ ಕೆಲಸ ಮಾಡಬೇಕಾಗಿದ್ದು ಅತಿಯಾದ ಕೆಲಸದ ಒತ್ತಡದಿಂದ ಬಳಲುವಂತಾಗಿದೆ. ಕೊರೋನಾ ಬಂದ ನಂತರವಂತೂ ಕೋವಿಡ್ ಟೆಸ್ಟ್, ವ್ಯಾಕ್ಸಿನೇಷನ್, ಕೋವಿಡ್ ಮಾರ್ಗಸೂಚಿಗಳನ್ನು ಸಹ ಈಗಿರುವ ಸಿಬ್ಬಂದಿಯಿಂದಲೇ ಮಾಡಿಸಲಾಗುತ್ತಿದೆ.
ಹೀಗಿರುವಾಗ ಕೋವಿಡ್ ನಿರ್ವಹಣೆಯನ್ನು ನೋಡಿಕೊಳ್ಳುವ ವೈದ್ಯರಾರು? ಸಿಬ್ಬಂದಿಗಳಾರು ಎಂಬುದು ಪ್ರಶ್ನೆಯಾಗಿ ಉಳಿದಿದೆ. ಹಾಗೆಯೇ ಶೃಂಗೇರಿ ತಾಲೂಕು ಆಸ್ಪತ್ರೆಗಿಂತ ಅಧಿಕ ವಾರ್ಡ್ ಸೌಲಭ್ಯ ಹೊಂದಿರುವ ಖಾಸಗಿ ಆಸ್ಪತ್ರೆ ಶೃಂಗೇರಿಯಲ್ಲಿ ಇದ್ದರೂ ಅದನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಮಾಡದೇ ಹೆಚ್ಚಿನ ಸೌಲಭ್ಯ ಇಲ್ಲದ ಏಕೈಕ ಸಾರ್ವಜನಿಕ ಆಸ್ಪತ್ರೆಯನ್ನು ಕೋವಿಡ್ ಕೇಂದ್ರವನ್ನಾಗಿ ಮಾಡಲು ಹೊರಟಿರುವುದು ಹಲವು ಅನುಮಾನಗಳಿಗೆ ಸಹ ಎಡೆಮಾಡಿಕೊಟ್ಟಿದೆ
ಆಸ್ಪತ್ರೆಯ ಬಹುತೇಕ ವಿಭಾಗಗಳಲ್ಲಿ ಸಿಬ್ಬಂದಿಯ ಕೊರತೆ ಇರುವುದನ್ನು ಕಳೆದ ಎರಡು ತಿಂಗಳ ಹಿಂದೆ ಆರೋಗ್ಯ ಸಚಿವರಾದ ಡಾ. ಕೆ ಸುಧಾಕರ್ ಅವರಿಗೆ ಸ್ಥಳೀಯರು ಹಾಗೂ ತಾಲೂಕು ಪಂಚಾಯತ್ ಅಧ್ಯಕ್ಷರು ಮನವಿ ಸಲ್ಲಿಸಿದ್ದಾಗ ಕೇವಲ ಹತ್ತು ದಿನಗಳ ಒಳಗೆ ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಭರವಸೆ ನೀಡಿ ಹೋಗಿದ್ದರು, ಆದರೆ ಭರವಸೆ ಭರವಸೆಯಾಗಿಯೇ ಉಳಿದಿದೆ.
ಹೀಗಿರುವಾಗ ಈಗಿರುವ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿಸಿದಲ್ಲಿ ಕೊರೋನಾ ಡಿಸ್ಟ್ರಿಬ್ಯೂಶನ್ ಸೆಂಟರ್ ಆಗಲಿದೆಯೇ ಹೊರತು ಕೇರ್ ಸೆಂಟರ್ ಆಗಿ ಉಳಿಯುವುದಿಲ್ಲ. ಹಾಗಾಗಿ ಶೃಂಗೇರಿ ಯ ಜನತೆ ಈ ಕುರಿತು ಎಚ್ಚೆತ್ತುಕೊಳ್ಳಬೇಕಾಗಿದೆ.


0 Comments