ತೌಕ್ತೇ ಚಂಡಮಾರುತದ ಎಫೆಕ್ಟ್ ಮಲೆನಾಡು ಹಾಗೂ ಸಮುದ್ರ ತೀರದ ಸ್ಥಳಗಳ ಮೇಲೆ ತೀವ್ರ ಪರಿಣಾಮ ಬೀರಿದ್ದು, ಇಂದು ಬೆಳಿಗ್ಗೆಯಿಂದಲೇ ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದ್ದು ಅತಿಯಾದ ಗಾಳಿ ಸಹ ಬೀಸುತ್ತಿದೆ.

ಮೂಡಿಗೆರೆ ತಾಲ್ಲೂಕಿನ ಬಿದರಹಳ್ಳಿ ರಾಷ್ಟ್ರೀಯ ಹೆದ್ದಾರಿ ಬಳಿ ಸಾಲುಗಟ್ಟಿ ವಿದ್ಯುತ್ ಕಂಬಗಳು ಧರೆಗುರುಳಿದ್ದು, ಹಲವೆಡೆ ವಿದ್ಯುತ್ ಕಡಿತ ಉಂಟಾಗಿದೆ. ವಿದ್ಯುತ್ ಕಂಬಗಳು ಸಾಲಾಗಿ ಬೀಳಲು ಚಂಡಮಾರುತ ಕಾರಣವಾಗಬಹುದಾದರೂ, ರಸ್ತೆ ಅಗಲೀಕರಣಕ್ಕೆ ಮಣ್ಣು ಅಗೆದಿದ್ದರಿಂದ ಹೀಗಾಗಿದೆ. ಇದು ಕಳಪೆ ಕಾಮಗಾರಿ ಎಂಬ ಅಭಿಪ್ರಾಯ ಗ್ರಾಮಸ್ಥರಿಂದ ವ್ಯಕ್ತವಾಗಿದೆ.

ಜಿಲ್ಲಾಡಳಿತದ ವತಿಯಿಂದ ಎರಡು ದಿನಗಳ ಕಾಲ ರೆಡ್ ಅಲರ್ಟ್ ಘೋಷಣೆ ಮಾಡಿದ್ದು ಇಂದು ಮತ್ತು ನಾಳೆ ಗಾಳಿ ಸಹಿತ ಭಾರೀ ಮಳೆಯಾಗುವ ಸಂಭವವಿದೆ. ಜನರು ತಗ್ಗು ಪ್ರದೇಶ, ಹಳ್ಳ ಹೊಳೆಗೆ ಇಳಿಯದೆ ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಜಿಲ್ಲಾಡಳಿತ ಸಹ ಎಚ್ಚರಿಕೆ ನೀಡಿದ್ದು, ಭಾರೀ ಗಾಳಿ ಬೀಸುತ್ತಿರುವುದರಿಂದ ಮರಗಳು, ವಿದ್ಯುತ್ ಕಂಬಗಳು ಹಾಗೂ ಅಪಾಯಕಾರಿ ಕಟ್ಟಡಗಳ ಕೆಳಗೆ ನಿಲ್ಲದಂತೆ ಸೂಚನೆ ನೀಡಲಾಗಿದೆ