ಯಾವುದೇ ಮುಂಗಡ ನೋಟಿಸ್ ನೀಡದೇ ರಾಜ್ಯಾದ್ಯಂತ ಸುಮಾರು 350ಕ್ಕೂ ಅಧಿಕ ಉದ್ಯೋಗಿಗಳನ್ನು ರಾತ್ರೋರಾತ್ರಿ ಆದೇಶ ಹೊರಡಿಸಿ ಕೆಲಸದಿಂದ ತೆಗೆದು ಹಾಕಿದ್ದು ತಾಲೂಕು ಆಸ್ಪತ್ರೆಗಳಲ್ಲಿನ ಇ-ಆಸ್ಪತ್ರೆ ವಿಭಾಗದಲ್ಲಿ ಡಾಟಾ ಎಂಟ್ರಿ ಆಪರೇಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಕೆಲಸಗಾರರನ್ನು ತಕ್ಷಣಕ್ಕೆ ಜಾರಿಯಾಗುವಂತೆ ಕರ್ತವ್ಯದಿಂದ ಬಿಡುಗಡೆಗೊಳಿಸುವಂತೆ  ಆದೇಶಿಸಲಾಗಿದೆ.

ಈ ಆದೇಶದ ಅನ್ವಯ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ಮೂಡಿಗೆರೆ, ತರೀಕೆರೆ ತಾಲೂಕಿನ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದ ಉದ್ಯೋಗಿಗಳನ್ನು ಸಹ ತೆಗೆದು ಹಾಕಲಾಗಿದೆ.

ಈ ಕುರಿತು ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ದೂರು ಸಲ್ಲಿಸಲಾಗಿದ್ದು ಪಿಐಎಲ್(ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಅರ್ಜಿಯನ್ನಾಗಿ ಪರಿಗಣಿಸಿ ಕ್ರಮ ಕೈಗೊಳ್ಳುವಂತೆ ಶೃಂಗೇರಿಯ ಸಾಮಾಜಿಕ ಕಾರ್ಯಕರ್ತರೊಬ್ಬರು ದೂರು ನೀಡಿದ್ದಾರೆ.

ದೂರಿನಲ್ಲಿ ಏನಿದೆ?: 

ಕರ್ನಾಟಕ ರಾಜ್ಯ ಆರೋಗ್ಯ ಇಲಾಖೆಯ ಅಡಿಯಲ್ಲಿ ಬರುವ, ತಾಲೂಕು ಆಸ್ಪತ್ರೆಗಳಲ್ಲಿ ಇರುವ ಇ-ಆಸ್ಪತ್ರೆ ವಿಭಾಗದಲ್ಲಿ ಕಳೆದ ಕೆಲವು ತಿಂಗಳು/ವರ್ಷಗಳಿಂದ ಡಾಟಾ ಎಂಟ್ರಿ ಆಪರೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ, ಸುಮಾರು 350ಕ್ಕೂ ಅಧಿಕ ಆಪರೇಟರ್ ಗಳನ್ನು ಯಾವುದೇ ಮುಂಗಡ ನೋಟಿಸ್ ನೀಡದೇ ಹಣಕಾಸಿನ ಕೊರತೆ ಕಾರಣ ಹೇಳಿ ದಿನಾಂಕ 25/05/2021ರಂದು ಏಕಾಏಕಿ ಕೆಲಸದಿಂದ ತೆಗೆದುಹಾಕಿ ಆದೇಶ ಹೊರಡಿಸಲಾಗಿದೆ.

ನೂತನ ಆದೇಶದ ಪ್ರಕಾರ ಇದೇ ತಿಂಗಳ 31/05/2021ರಂದು ಕೊನೆಯ ಕೆಲಸದ ದಿನವಾಗಿದ್ದು  ಅಂದಿನಿಂದ ಜಾರಿಗೆ ಬರುವಂತೆ ಕೆಲಸದಿಂದ ತೆಗೆದು ಹಾಕಲಾಗಿದೆ. ಇದು ಸ್ಪಷ್ಟವಾಗಿ ಕಾನೂನಿನ ಉಲ್ಲಂಘನೆ ಆಗಿದ್ದು ಹಾಗೆಯೇ ಇಂತಹ ಕೊರೋನಾ ಪೀಡಿತ ಸಂಧರ್ಭದಲ್ಲಿ ಆರೋಗ್ಯ ಇಲಾಖೆಯಲ್ಲಿ ನಿಷ್ಠೆಯಿಂದ ದುಡಿಯುತ್ತಿದ್ದ ಉದ್ಯೋಗಿಗಳನ್ನು ಕೋರ್ಟ್ ಕಲಾಪಗಳು ಇರದ ಸಂಧರ್ಭ ನೋಡಿ ಏಕಾಏಕಿ ತೆಗೆದುಹಾಕಿ ಬೀದಿಗೆ ತಳ್ಳಿರುವುದು ಸರ್ಕಾರ ಹಾಗೂ ಆರೋಗ್ಯ ಇಲಾಖೆಯ ಅಮಾನವೀಯ, ಅಸಂವಿಧಾನಿಕ ನಿಲುವಾಗಿದೆ. ಹಾಗೆಯೇ ಈ ಎಲ್ಲಾ ಆಪರೇಟರ್ ಗಳಿಗೆ ಯಾವುದೇ ಪಿಎಫ್, ಇಎಸ್ಐ ಸೌಲಭ್ಯಗಳನ್ನು ಸಹ ನೀಡಿರುವುದಿಲ್ಲ. ಹಾಗೂ ಕೆಲವು ತಿಂಗಳುಗಳ ಸಂಬಳವನ್ನು ಸಹ ಬಾಕಿ ಇಡಲಾಗಿರುತ್ತದೆ.

ನೇಮಕಾತಿ ಸಂಧರ್ಭದಲ್ಲಿ ಸಹ ಆದೇಶ ಪ್ರತಿ ನೀಡದೆ ಕಾನೂನು ಉಲ್ಲಂಘನೆ ಮಾಡಲಾಗಿದೆ. ದಯವಿಟ್ಟು ಈ ತುರ್ತು ದೂರನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ಗಣನೆಗೆ ತೆಗೆದುಕೊಂಡು ಸುಮಾರು 350ಕ್ಕೂ ಅಧಿಕ ಉದ್ಯೋಗಿಗಳ ಭವಿಷ್ಯವನ್ನು ಕಾಪಾಡಬೇಕೆಂದು ಕೇಳಿಕೊಳ್ಳುತ್ತೇವೆ. ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ನ್ಯೂಸ್ ಮಲ್ನಾಡ್ ಗೆ ಪ್ರತಿಕ್ರಿಯಿಸಿದ ದೂರುದಾರರು ಇದೊಂದು ಅಸಂವಿಧಾನಿಕ ಆದೇಶವಾಗಿದ್ದು ಈ ಕುರಿತು ಸಂಬಂಧಪಟ್ಟ ಇಲಾಖೆಗಳಿಗೆ ದೂರು ನೀಡಲಾಗಿದೆ. ಹೈಕೋರ್ಟ್ನಲ್ಲಿ ಪಿಐಎಲ್ ಮನವಿ ಮಾಡಿದ್ದು ನ್ಯಾಯ ದೊರಕುವ ಭರವಸೆಯಿದೆ. ಕಾರ್ಮಿಕ ಸಂಘಟನೆಯಾದ ಭಾರತೀಯ ಮಜ್ದೂರ್ ಸಂಘದ ರಾಜ್ಯಾದ್ಯಕ್ಷರು ನಿರಂತರ ಸಂಪರ್ಕದಲ್ಲಿದ್ದು ಇದೊಂದು ಅಸಂಬದ್ಧ ಆದೇಶವಾಗಿದ್ದು ಈ ಕುರಿತು ಸರ್ಕಾರದ ಹಂತದಲ್ಲಿ ಮಾತುಕತೆ ನಡೆಸುತ್ತಿರುವುದಾಗಿ ತಿಳಿಸಿರುತ್ತಾರೆ. ಆರೋಗ್ಯ ಸಚಿವರ ಗಮನಕ್ಕೂ ಇದನ್ನು ತರಲಾಗಿದೆ. ಎಂದರು