ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ಕೊರೋನಾ ರೋಗಿಗಳ ಆರೈಕೆಗಾಗಿ ಕೋವಿಡ್ ಕೇರ್ ಸೆಂಟರ್ ಪ್ರಾರಂಭ ಮಾಡಿದ್ದು ಕಳಸ ಭಾಗದ ಜನತೆ ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ. ಕಳಸ ಭಾಗದಲ್ಲಿ ಸೋಂಕು ಬಹಳಷ್ಟು ವ್ಯಾಪಿಸಿದ್ದು ಚಿಕಿತ್ಸೆಗೆ ಹಾಗೂ ಆರೈಕೆಗೆ ದೂರದ ಮೂಡಿಗೆರೆಗೆ ತೆರಳಬೇಕಾಗಿತ್ತು.
ಈ ಹಿಂದೆ ಮೂಡಿಗೆರೆ ತಲುಪುವ ವೇಳೆ ರೋಗಿಗಳು ಮೃತರಾದ ಘಟನೆ ಸಹ ನಡೆದಿತ್ತು. ಕಳಸದಲ್ಲಿ ಕೋವಿಡ್ ಕೇರ್ ಪ್ರಾರಂಭ ಮಾಡುವಂತೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಒತ್ತಾಯ ಸಹ ಕೇಳಿಬಂದಿತ್ತು. ಈ ಕಾರಣ ದಿನಾಂಕ 04 ಮೇ 2021ರಂದು ಮೂಡಿಗೆರೆಯಲ್ಲಿ ನಡೆದ ಕೋವಿಡ್ ನಿಯಂತ್ರಣ ಸಭೆಯಲ್ಲಿ ಕಳಸ ಭಾಗದ ಜನರಿಗೆ ತೊಂದರೆ ಆಗುತ್ತಿರುವುದರ ಕುರಿತು ಚರ್ಚಿಸಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಅಲ್ಲಿನ ಸರ್ಕಾರಿ ಆಸ್ಪತ್ರೆಯನ್ನು ಕೋವಿಡ್ ಸೆಂಟರ್ ಆಗಿ ಮಾರ್ಪಾಡು ಮಾಡುವುದಾಗಿ ತಿಳಿಸಲಾಗಿತ್ತು.
ಅದರಂತೆ ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಅಂಗಾರ ಅವರು ನೂತನ ಕೋವಿಡ್ ಕೇರ್ ಸೆಂಟರ್ ಗೆ ಚಾಲನೆ ನೀಡಿದರು. ಈ ಸಮಯದಲ್ಲಿ ವಿ.ಪ ಉಪ ಸಭಾಪತಿ ಪ್ರಾಣೇಶ್, ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ, ಸಿಎಂ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್, ಎಸಿ ನಾಗರಾಜ್ ಉಪಸ್ಥಿತರಿದ್ದರು



0 Comments