ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ಚಿಕ್ಕಮಗಳೂರು ಬಿಜೆಪಿ ಶಾಸಕ ಸಿ‌.ಟಿ ರವಿ ವಿರುದ್ಧ ಸರಣಿ ದೂರು ದಾಖಲಾಗಿದೆ.

ಮೊದಲನೇ ದೂರಿನಲ್ಲಿ. ಇತ್ತೀಚೆಗೆ ಆಕ್ಸಿಜನ್ ಕೊರತೆ ನೀಗಿಸಲು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದ್ದು, ಇದಕ್ಕೆ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ನ್ಯಾಯಾಧೀಶರು ಸರ್ವಜ್ಞರಲ್ಲ ಎಂಬ ಹೇಳಿಕೆ ಖಂಡಿಸಿ ಅಥಣಿಯಿಂದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ದೂರು ಸಲ್ಲಿಸಲಾಗಿದೆ.

ಉಚ್ಚ ನ್ಯಾಯಾಲಯ, ಕೊರೊನಾ ಸಂದಿಗ್ಧ ಸಂದರ್ಭದಲ್ಲಿ ಕೇಂದ್ರ ಸರ್ಕಾರಕ್ಕೆ ಕೆಲವು ವಿಷಯಗಳಲ್ಲಿ ಸೂಚನೆ ನೀಡಿತ್ತು. ಈ ಸೂಚನೆ ಸೂಕ್ತವೆಂದು ಸರ್ವೋನ್ನತ ನ್ಯಾಯಾಲಯ ಎತ್ತಿ ಹಿಡಿದಿತ್ತು. ಆದರೆ, ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಉದ್ದೇಶ ಪೂರ್ವಕವಾಗಿ ದುರುದ್ದೇಶದಿಂದ ನ್ಯಾಯಾಧೀಶರ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದರು. ಸಿ.ಟಿ. ರವಿ ಹಾಗೂ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಇಬ್ಬರು ಚುನಾವಣೆ ಪ್ರತಿನಿಧಿಗಳ ಮೇಲೆ ನ್ಯಾಯಾಂಗ ನಿಂದನೆ ಆರೋಪದಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಹೈಕೋರ್ಟ್‌ ಮುಖ್ಯ ನ್ಯಾಯಾಧೀಶರಿಗೆ ಇಮೇಲ್ ಮೂಲಕ ವೃತ್ತಿಯಲ್ಲಿ ವಕೀಲನಾಗಿರುವ ಭೀಮನಗೌಡ ಪರಗೊಂಡ ಎಂಬುವರು ದೂರು ಸಲ್ಲಿಸಿದ್ದಾರೆ.

ಎರಡನೇ ದೂರಿನಲ್ಲಿ ಕಾಂಗ್ರೆಸ್ ಸಾಮಾಜಿಕ ಜಾಲತಾಣ ವಿಭಾಗದ ಅಧ್ಯಕ್ಷರಾದ ವಿನಾಯಕ ಅವರ ನೇತೃತ್ವದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರ ವಿರುದ್ಧ ಸಿ ಇ ಎನ್ ಪೊಲೀಸ್ ಠಾಣೆ ಚಿಕ್ಕಮಗಳೂರಿನಲ್ಲಿ ದೂರು ಸಲ್ಲಿಸಲಾಗಿದೆ. ಕಾಂಗ್ರೆಸ್ ಪಕ್ಷ ಮತ್ತು ಯುವ ಕಾಂಗ್ರೆಸ್ ವಿಭಾಗ ಕರೋನಾ ಎರಡನೇ ಅಲೆಯಿಂದ ಸಂಕಷ್ಟಕ್ಕೆ ಸಿಲುಕಿದ ಸೋಂಕಿತರಿಗೆ ನೆರವಾಗುತ್ತಿದ್ದು. ಆಸ್ಪತ್ರೆಗೆ ಸೋಂಕಿತರನ್ನು ಸೇರಿಸುವುದು, ಜೀವರಕ್ಷಕ ಔಷಧಿ ಮತ್ತು ಆಮ್ಲಜನಕದ ಪೂರೈಕೆಯ ಜೊತೆಗೆ ಸೋಂಕಿತರು ಮೃತಪಟ್ಟಾಗ ಅವರ ಅಂತಿಮ ಸಂಸ್ಕಾರವನ್ನು ಮಾಡುವ ಮೂಲಕ ಸರ್ಕಾರವು ಈ ಸಂದಿಗ್ಧ ಕಾಲವನ್ನು ಎದುರಿಸಲು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಶಕ್ತಿ ನೀಡಿದ್ದಾರೆ. ಈ ಸಂಕಷ್ಟದ ಸಮಯದಲ್ಲಿ ಜನರಿಗೆ ನೆರವು ನೀಡುತ್ತಿರುವ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ತೇಜೋವಧೆ ಮಾಡುವ ಮತ್ತು ಆತ್ಮಸ್ಥೈರ್ಯ ಕುಗ್ಗಿಸುವ ಮೂಲಕ ಸಾರ್ವಜನಿಕರಿಗೆ ನೆರವು ನೀಡದಂತೆ ತಡೆಯಲು ದುರುದ್ದೇಶಪೂರಿತ ಟ್ವೀಟ್‌ಗಳನ್ನು ಬಿಜೆಪಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹಾಗೂ ಇತರೆ ನಾಯಕರು ಸಂಚು ರೂಪಿಸಿ ಪೋಸ್ಟ್ ಮಾಡಿರುತ್ತಾರೆ. ಕಾಂಗ್ರೆಸ್ ಪಕ್ಷದ ಚಿಹ್ನೆಯನ್ನು ಮತ್ತು ಸಂಶೋಧನಾ ವಿಭಾಗದ ದಾಖಲೆಗಳನ್ನು ನಕಲು ಮಾಡಿ ಕಾಂಗ್ರೆಸ್ ಪಕ್ಷದ ಟೂಲ್ ಕಿಟ್ ಎಂದು ಬಿಂಬಿಸಿ ಟ್ವೀಟ್ ಮಾಡಿರುತ್ತಾರೆ. 

ಸೃಷ್ಟಿ ದಾಖಲೆಗಳ ಮೂಲಕ  ಕಾಂಗ್ರೆಸ್ ಪಕ್ಷದ ಮೇಲೆ ಜನರಲ್ಲಿ ತಪ್ಪು ಭಾವನೆಯನ್ನು ಮೂಡಿಸಲು ತನ್ಮೂಲಕ ಆಡಳಿತದ ವೈಫಲ್ಯವನ್ನು ಮತ್ತು ಬಹು ವಿಶೇಷವಾಗಿ ಕೋವಿಡ್‌ನಿಂದಾದ ದಾರುಣ ಸಾವುಗಳನ್ನು ತನ್ಮೂಲಕ ಸಾವಿನ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳಲು ಅನುವಾಗುವಂತೆ ಈ  ನಕಲಿ ದಾಖಲೆಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇಂತಹ ಸಾಂಕ್ರಾಮಿಕ ರೋಗ ಹಬ್ಬುತ್ತಿರುವ ಸಂದರ್ಭದಲ್ಲಿ ಆಡಳಿತ ಪಕ್ಷಕ್ಕೆ ಚಾಟಿ ಬೀಸುವುದು, ಆಡಳಿತದಲ್ಲಿನ ವೈಫಲ್ಯವನ್ನು ಎತ್ತಿ ತೋರುವುದು ವಿರೋಧ ಪಕ್ಷದ ಆದ್ಯ ಸಾಂವಿಧಾನಿಕ ಕರ್ತವ್ಯವಾಗಿದೆ ಆದ್ದರಿಂದ ಉಲ್ಲೇಖಿತ ವ್ಯಕ್ತಿಗಳು ಕಾಂಗ್ರೆಸ್ ಪಕ್ಷದ 12 ಕೋಟಿ ಮತದಾರರಿಗೆ ಮತ್ತು ಸಂವಿಧಾನಾತ್ಮಕತೆಗೆ ದಕ್ಕೆ ತಂದಿರುವುದರಿಂದ ಮತ್ತು ಸಮಾಜವನ್ನು ಒಡೆದು ಗುಂಪುಗಳಾಗಿ ಪರಿವರ್ತಿಸಿ ಕಾಂಗ್ರೆಸ್ ಪಕ್ಷದ ಮೇಲೆ ಎತ್ತಿ ಕಟ್ಟುವ ಹುನ್ನಾರ ನಡೆಸಿರುವುದರಿಂದ ಈ ಕೂಡಲೇ ಇವರನ್ನು ಬಂಧಿಸಬೇಕು ಮತ್ತು

ಸಾಂಕ್ರಾಮಿಕ ರೋಗ ತಡೆಗಟ್ಟಲು ಪ್ರಯತ್ನ ಮಾಡುವವರ ತೇಜೋವಧೆ ಮಾಡುವ ಮತ್ತು ಆತ್ಮಸ್ಥೈರ್ಯ ಕುಗ್ಗಿಸುವ ದುರುದ್ದೇಶದಿಂದ ನಕಲಿ ದಾಖಲೆ ಸೃಷ್ಟಿಸಿ ಟ್ವೀಟ್ ಮಾಡಿರುವ  ಸಿ ಟಿ ರವಿ, ಸಂಬೀತ್ ಪಾತ್ರ, ಅಭಿನವ್ ಸೆಖ್ರಿ ಮತ್ತು ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದೂರು ನೀಡಿದ್ದಾರೆ.

ಈ ಸಂದರ್ಭದಲ್ಲಿ ವಿನಾಯಕ ಜೆ. ಅಧ್ಯಕ್ಷರು , ಸಾಮಾಜಿಕ ಜಾಲತಾಣ, ಚಿಕ್ಕಮಗಳೂರು ಜಿಲ್ಲೆ. ಹಿರೇಮಗಳೂರು ಜಗದೀಶ್, ರಸೂಲ್ ಖಾನ್, ತನೋಜ್ ಕುಮಾರ್ ಉಪಸ್ಥಿತರಿದ್ದರು.