ನೂತನವಾಗಿ ಜಿಲ್ಲಾ ಉಸ್ತುವಾರಿ ಸ್ಥಾನ ಅಲಂಕರಿಸಿರುವ ಎಸ್. ಅಂಗಾರ ಇಂದು ಜಿಲ್ಲಾ ಪ್ರವಾಸ ಕೈಗೊಂಡು ನ.ರಾ ಪುರ, ಕೊಪ್ಪ ಹಾಗೂ ಶೃಂಗೇರಿಗೆ ಭೇಟಿ ನೀಡಿದರು. ಮೊದಲಿಗೆ ನ.ರಾ ಪುರ ಹಾಗೂ ಕೊಪ್ಪ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಪ್ರಸ್ತುತ ಪರಿಸ್ಥಿತಿಯ ಕುರಿತು ಮಾಹಿತಿ ಸಂಗ್ರಹಿಸಿ ಅವಲೋಕನ ಮಾಡಿದರು.

ಶೃಂಗೇರಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ

ತಾಲ್ಲೂಕಿನಲ್ಲಿ ಒಟ್ಟು 5 ತಂಡ ಗಳು ಕೊರೋನಾ ನಿಯಂತ್ರಿಸುವಲ್ಲಿ ಕಾರ್ಯನಿರ್ವಹಿಸುತ್ತಿದೆ. ವ್ಯಾಕ್ಸಿನೇಷನ್ ಗೆ 16 ತಂಡ ಗಳನ್ನು ರಚಿಸಲಾಗಿದೆ. ಸಧ್ಯ ಔಷಧಿಗೆ ಯಾವುದೇ ಕೊರತೆ ಯಿಲ್ಲ. 63 ಜನ ಹೊರ ರಾಜ್ಯದಿಂದ ಬಂದ್ದಿದ್ದು 63 ಜನರನ್ನು ಸುರಕ್ಷಿತವಾಗಿ ಹೋಂ ಕ್ವಾರಂಟೈನ್ ಮಾಡಲಾಗಿದೆ. ನಿಯಮ ಉಲ್ಲಂಘನೆ ಆರೋಪದ ಮೇಲೆ ಒಂದು FIR ದಾಖಲಾಗಿದೆ ಎಂದು ಮಾಹಿತಿ ನೀಡಿದರು.

ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಕೋರೋನಾ ನಿಯಂತ್ರಿಸುವಲ್ಲಿ  ಸ್ವತಃ ನಿರ್ಧಾರಗಳನ್ನು ಕೈಗೊಳ್ಳಬಹುದು ಎಂದು ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಜನರ ಸಹಕಾರದಿಂದ ಮಾತ್ರ ನಾವು ಈ ಪರಿಸ್ಥಿತಿ ಯನ್ನು ಎದುರಿಸಲು ಸಾಧ್ಯ, ಅಧಿಕಾರಿಗಳು ಪ್ರಾಮಾಣಿಕ ರೀತಿಯಲ್ಲಿ ಕೆಲಸ ಮಾಡಬೇಕು, ಜನರಿಗೆ ತಪ್ಪು ಮಾಹಿತಿ ನೀಡಿದ್ದಲ್ಲಿ ಸರಿಯಾದ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಉಸ್ತುವಾರಿ ಸಚಿವರು ಸೂಚಿಸಿದರು.

ಶೃಂಗೇರಿ ತಾಲೂಕು ಪಂಚಾಯಿತಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ನಂತರ ಸುದ್ಧಿಗಾರರೊಂದಿಗೆ ಮಾತನಾಡಿದ ಉಸ್ತುವಾರಿ ಸಚಿವ ಎಸ್ ಅಂಗಾರ ತಾನು ವಾಸ್ತವಿಕ ಪರಿಸ್ಥಿತಿಯನ್ನು ಮನಗಾಣುವ ಉದ್ಧೇಶದಿಂದ ಬಂದಿದ್ದೇನೆ, ಈ ಸಮಯದಲ್ಲಿ ಹಲವು ವಿಷಯಗಳು ನನ್ನ ಗಮನಕ್ಕೆ ಬಂದಿರುತ್ತದೆ. ಇಂತಹ ಸಂಧರ್ಭದಲ್ಲಿ ನಿಯಮಗಳನ್ನು ನೋಡಿಕೊಂಡು ಕೂರಲಾಗುವುದಿಲ್ಲ. ಆರೋಗ್ಯ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಗಳು ಇದ್ದು ಅದರ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಸರ್ಕಾರ ಆಯಾ ಜಿಲ್ಲಾಡಳಿತಕ್ಕೆ ಅನುಮತಿ ನೀಡಿದೆ, ಅದರ ಅನುಸಾರ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಹೋಂ ಕ್ವಾರಂಟೈನ್ ಕುರಿತು ಕೆಲವು ಬಿಗಿ ಕ್ರಮಗಳನ್ನು ಕೈಗೊಳ್ಳುವ ಕುರಿತೂ ಅವರು ಸೂಚನೆ ನೀಡಿದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಡಿ.ಎನ್ ಜೀವರಾಜ್, ವಿಧಾನ ಪರಿಷತ್ ಉಪಸಭಾಪತಿಗಳಾದ ಎಂ.ಕೆ. ಪ್ರಾಣೇಶ್, ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ.ಡಿ. ರಾಜೇಗೌಡ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಹರೀಶ್ ಶೆಟ್ಟಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಶೃಂಗೇರಿ ಶಿವಣ್ಣ ಇದ್ದರು.

ಸಭೆಗೂ ಮೊದಲು ಶೃಂಗೇರಿ ನೂರು ಬೆಡ್ ಆಸ್ಪತ್ರೆ ಕುರಿತು ಹೋರಾಟ ಸಮಿತಿ ಸದಸ್ಯರು ಸಚಿವರನ್ನು ಭೇಟಿಯಾಗಿ ಪ್ರಕ್ರಿಯೆಯ ಮಾಹಿತಿ ನೀಡಿ, ಮಂಜೂರಾತಿಯಲ್ಲಿರುವ ತೊಡಕನ್ನು ನಿವಾರಿಸುವಂತೆ ಕೇಳಿಕೊಂಡರು. ಉಪನೋಂದಣಾ ಅಧಿಕಾರಿ ನಾಗರಾಜ್ ಅವರು ಪ್ರಕ್ರಿಯೆಯ ಈಗಿನ ಹಂತದ ಕುರಿತು ಜನಪ್ರತಿನಿಧಿಗಳ ಗಮನಕ್ಕೆ ತಂದರು.