ರಾಜ್ಯಾದ್ಯಂತ ಲಾಲ್ ಡೌನ್ ಜಾರಿಯಾಗಿದೆ. ಬಡವರು ಹಾಗೂ ಕೂಲಿ ಕಾರ್ಮಿಕರು ದಿನನಿತ್ಯದ ದಿನಸಿ ತರಕಾರಿ ಕೊಂಡುಕೊಳ್ಳಲೂ ಪರದಾಡುವ ಸ್ಥಿತಿ ಕೆಲ ಊರುಗಳಲ್ಲಿ ಎದುರಾಗಿದೆ. ಹೀಗಿರುವಾಗ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ನವೀನ್ ಹಾವಳಿ ಅವರು ಬಡವರಿಗೆ ಉಚಿತವಾಗಿ ತರಕಾರಿ ಹಂಚುವ ಮೂಲಕ ತಮ್ಮ ಗ್ರಾಮದ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಚುನಾವಣೆ ಗೆದ್ದ ನಂತರ ವೈಟ್ ಕಾಲರ್ ರಾಜಕಾರಣ ಮಾಡುವವರ ನಡುವೆ ಇಂತವರು ಮಾದರಿಯಾಗಿದ್ದಾರೆ.

ಈ ಕುರಿತು ನಮ್ಮೊಂದಿಗೆ ಮಾತನಾಡಿರುವ ಅವರು ಲಾಕ್ ಡೌನ್ ನಿಂದ ಬಡ ಹಾಗು ಕೂಲಿ ಕಾರ್ಮಿಕರಿಗೆ ಅತೀವ ಕಷ್ಟ ಎದುರಾಗಿರುವಾಗ, ಸ್ವಂತ ಖರ್ಚಿನಿಂದ ತರಕಾರಿಗಳನ್ನು ಉಚಿತವಾಗಿ ನೀಡಿದ್ದೇವೆ, ಕಳೆದ ಬಾರಿ ಲಾಕ್ ಡೌನ್ ಆದಾಗ ಕೂಡ ಉಚಿತವಾಗಿ ನೀಡಿದ್ದೇವು. ಬಡವರಿಗೆ ಹಂಚಿದ ತೃಪ್ತಿ ಇದೆ ಆದರೆ ಈ ಕೊರೋನಾ ಆದಷ್ಟು ಬೇಗ ತೊಲಗಿ ಜನರಿಗೆ ಇಂತಹ ಪರಿಸ್ಥಿತಿ ಇನ್ನೆಂದೂ ಬಾರದಿರಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇವೆ ಎಂದಿದ್ದಾರೆ.

ಈ ಹಿಂದೆ ಗ್ರಾಮ ಪಂಚಾಯತಿ ಚುನಾವಣೆ ವೇಳೆಯಲ್ಲೂ ಭಾರೀ ಸುದ್ದಿಯಲ್ಲಿದ್ದ ನವೀನ್ ಹಾವಳಿ ಅವರು ಚುನಾವಣೆ ವೇಳೆ ಯಾರಿಗೂ ಒಂದು ರೂ. ಹಣ ಹಾಗೂ ಹೆಂಡ ಹಂಚದೆ ಚುನಾವಣೆ ಗೆಲ್ಲುತ್ತೇನೆ ಎಂದು ಜೋಳಿಗೆ ಹಿಡಿದು ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದ್ದರು. ಚುನಾವಣೆ ಗೆದ್ದ ಬಳಿಕವೂ ಬಡ ಜನರ ಕಷ್ಟಕ್ಕೆ ಸ್ಪಂದಿಸುತ್ತಿರುವ ನವೀನ್ ಅವರ ಕಾರ್ಯಕ್ಕೆ ಶುಭವಾಗಲಿ ನಿಮ್ಮಂತ ಅನೇಕ ಯುವಕರು ರಾಜಕೀಯಕ್ಕೆ ಬರಲಿ ಎಂದು ನ್ಯೂಸ್ ಮಲ್ನಾಡ್ ತಂಡ ಹಾರೈಸುತ್ತದೆ.