ಲಸಿಕೆ ಹೆಸರಿಗಷ್ಟೇ ಉಚಿತ, ಲಸಿಕೆ ತೆಗೆದುಕೊಳ್ಳಲು ಹಳ್ಳಿಗರ ಜೇಬಿಗೆ ಬೀಳುತ್ತಿದೆ ಕತ್ತರಿ, ಅರೆ ಇದೇನು ಹೀಗೆ ಅಂತೀರಾ ಈ ವರದಿ ಪೂರ್ತಿ ನೋಡಿ:-
ಶೃಂಗೇರಿಯಲ್ಲಿ ಲಸಿಕೆ ತೆಗೆದುಕೊಳ್ಳಲು ಬಂದು ಹಲವು ಬಾರಿ ವಾಪಾಸು ತೆರಳಿದ ವೃದ್ಧ ದಂಪತಿಗಳ ಮೊಮ್ಮಗನೊಬ್ಬ ನೀಡಿದ ಮಾಹಿತಿಯಂತೆ ವಾಸ್ತವ ಸಂಗತಿ ಹುಡುಕನೋಡಿದಾಗ ನಮ್ಮ ಗಮನಕ್ಕೂ ಇದು ಬಂದಿತು.
ಸಧ್ಯಕ್ಕೆ ಲಾಕ್ಡೌನ್ ಕಾರಣದಿಂದ ಬಸ್ ವ್ಯವಸ್ಥೆ ಎಲ್ಲಿಯೂ ಇಲ್ಲ, ಹಳ್ಳಿ ಭಾಗದ ಜನರು ಪಟ್ಟಣಕ್ಕೆ ಬರಬೇಕಾದರೆ ಕನಿಷ್ಠ 200 ರೂಪಾಯಿ ಆಟೋಗೆ ಖರ್ಚಾಗುತ್ತದೆ, ಆದರೆ ಎರಡು ಮೂರು ದಿನ ಆಟೋ ಮಾಡಿಕೊಂಡು ಬಂದರೂ ಇಲ್ಲಿ ಲಸಿಕೆ ಸಿಗುತ್ತಿಲ್ಲ, ಮೊದಲ ದಿನ 10 ಗಂಟೆಯಿಂದ ಲಸಿಕೆ ನೀಡಲಾಗುತ್ತದೆ ಎಂದು ಘೋಷಿಸಲಾಗಿತ್ತು, ಆದರೆ ಸ್ಥಳಕ್ಕೆ ಬಂದಾಗ ಆದಾಗಲೇ ನೂರು ಜನರು ಆಗಿದ್ದಾರೆ ಮಾರನೆಯ ದಿನ ಬರುವಂತೆ ತಿಳಿಸಲಾಯಿತು.
ಮಾರನೆಯ ದಿನವೂ ಆಟೋದಲ್ಲಿ ಬೆಳಿಗ್ಗೆ ಒಂಬತ್ತು ಗಂಟೆಯ ಒಳಗೇ ತಲುಪಿದರೂ ಸಹ ಪುನಃ ಲಸಿಕೆಗೆ ನೂರು ಜನ ಭರ್ತಿ ಆಗಿರುವುದಾಗಿ ತಿಳಿಸಿದರು. ಮತ್ತೊಂದು ದಿನ ಬೆಳಿಗ್ಗೆ 8 ಗಂಟೆಗೆ ಬಂದರೆ, ಆದಾಗಲೇ 7 ಗಂಟೆಗೇ ನೂರು ಜನ ಭರ್ತಿ ಆಗಿರುವುದಾಗಿ ತಿಳಿಸಿರುತ್ತಾರೆ. ಹಾಗಂತ ಅಲ್ಲಿನ ಸಿಬ್ಬಂದಿ ಸಹ ಸುಳ್ಳು ಹೇಳುತ್ತಿಲ್ಲ. ಹಳ್ಳಿಗರು ಹಳ್ಳಿಗಳಿಂದ ನಡೆದುಕೊಂಡು, ಆಟೋ ಹುಡುಕಿಕೊಂಡು ಬರುವುದರ ಒಳಗೆ ಪಟ್ಟಣದ ನಿವಾಸಿಗಳೇ ಲಸಿಕೆಗೆ ನೂರು ಜನ ತುಂಬಿರುತ್ತಾರೆ. ಇನ್ನು 70, 80 ವರ್ಷ ವಯಸ್ಸಾದವರು, ಫ್ರಂಟ್ ಲೈನ್ ವಾರಿಯರ್ಸ್ ಗಳು ಸಹ ದಿನವೂ ಲಸಿಕೆಗಾಗಿ ಅಲೆಯುವಂತಾಗಿದೆ.
ಹಾಗೆಯೇ ಬೆಳಿಗ್ಗೆ ಮುಂಚೆ ಬಂದು ಟೋಕನ್ ತೆಗೆದುಕೊಂಡು ಕುಳಿತವರದ್ದು ಸಹ ಒಂದು ಸಮಸ್ಯೆ, ಅದೇನೆಂದರೆ ಬೆಳಿಗ್ಗೆ 7 ಗಂಟೆಗೆ ವೃದ್ಧರು ಲಸಿಕೆ ಕೂಪನ್ ಗೆ ಎಂದು ಒಳಗೆ ಬಂದರೂ ಸಹ ಅವರು 10 ಗಂಟೆಯ ತನಕ ಲಸಿಕೆ ಪಡೆಯಲು ಕಾಯಬೇಕಾಗಿದೆ ಇದು ಅನಾರೋಗ್ಯಪೀಡಿತರು ಹಾಗೂ ವೃದ್ಧರಿಗೆ ಅತಿದೊಡ್ಡ ಸಮಸ್ಯೆಯಾಗಿದೆ.
ದಿಢೀರ್ ಲಸಿಕಾ ಕೇಂದ್ರ ಬದಲಾವಣೆ, ಸಾರ್ವಜನಿಕರು ಗಲಿಬಿಲಿ:
ಇನ್ನು ಇದೇ ಬುಧವಾರದಿಂದ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಲಸಿಕೆ ನೀಡುವ ಯೋಜನೆ ಕೈಗೊಂಡಿರುವುದಾಗಿ ಘೋಷಿಸಿ ಸ್ಥಳ ಬದಲಾವಣೆ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು, ಹಿಂದಿನ ದಿನ ರಾತ್ರಿ ಪುನಃ ಸ್ಥಳ ಬದಲಾಯಿಸಿ ಮೊದಲಿಗಿದ್ದ ಸ್ಥಳಕ್ಕೇ ಸ್ಥಳಾಂತರಿಸಿದ ಪರಿಣಾಮ ಮಾರನೆಯ ದಿನ ಲಸಿಕೆಗೆ ಬರಬೇಕಾದವರು ಗೊಂದಲಕ್ಕೆ ಈಡಾದರು.
ಶೃಂಗೇರಿ ಯಂತಹ ಊರಲ್ಲಿ ಹಳ್ಳಿಗಳಿಗೆ ಒಂದು ವಿಚಾರ ತಲುಪಿಸೋದೆ ಕಷ್ಟ ಅಂತಹದರಲ್ಲಿ ರಾತ್ರೋರಾತ್ರಿ ಸ್ಥಳ ಬದಲಾವಣೆ ಮಾಡಿದರೆ ಜನರಿಗೆ ಗೊಂದಲ ಆಗದೇ ಇರಲಾರದು.
ಲಸಿಕೆ ವಿಚಾರದಲ್ಲಿ ಗೊಂದಲ ಯಾಕಾಯಿತು? ಎಂದು ಶೃಂಗೇರಿ ದಂಡಾಧಿಕಾರಿಗಳನ್ನು ಪ್ರಶ್ನಿಸಿದಾಗ ಅವರು ನೀಡಿದ ಉತ್ತರ ಹೀಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಶೃಂಗೇರಿ ತಹಶಿಲ್ದಾರ್ ಅಂಬುಜಾ, ಈ ಹಿಂದೆ ದಿನಕ್ಕೆ 2 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 50 ಜನರಿಗೆ ಲಸಿಕೆ ನೀಡುವುದಾಗಿ ಪ್ರಕಟಣೆ ಹೊರಡಿಸಲಾಗಿತ್ತು ಈಗ ಅದನ್ನು ರದ್ದು ಮಾಡಿ ಯಥಾ ಪ್ರಕಾರ ಶೃಂಗೇರಿಯ ಗೌರಿಶಂಕರ ಸಭಾಂಗಣದಲ್ಲಿ 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗುತ್ತದೆ. ಲಸಿಕೆ ತೆಗೆದುಕೊಳ್ಳಲು ಟೋಕನ್ ವ್ಯವಸ್ಥೆ ಮಾಡಲಾಗಿದ್ದು ಲಸಿಕೆ ಪಡೆದುಕೊಳ್ಳಲು ಬರುವವರು ತಮ್ಮ ದಾಖಲೆಗಳನ್ನು ತೋರಿಸಿ ಬರಬಹುದು ಎಂದು ಹೇಳಿದ್ದಾರೆ. ಫ್ರಂಟ್ ಲೈನ್ ವಾರಿಯರ್ಸ್ ಗೆ ಮೊದಲ ಆದ್ಯತೆ ನೀಡಿ ಅವರಿಗೆ ಲಸಿಕೆ ನೀಡಲಾಗುವುದು, ಈ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ ಎಂದಿದ್ದಾರೆ.
ಈ ಅವ್ಯವಸ್ಥೆಗಳನ್ನು ಸರಿಪಡಿಸಲು ಅಧಿಕಾರಿ ವರ್ಗ ಬೇರೆ ಉಪಾಯ ಕಂಡುಕೊಳ್ಳುವ ಅನಿವಾರ್ಯತೆ ಖಂಡಿತಾ ಇದೆ.
ಈ ಬಗ್ಗೆ ನ್ಯೂಸ್ ಮಲ್ನಾಡ್ ಕಳಕಳಿ ಹಾಗೂ ಸಲಹೆ ಎಂದರೆ:
ಮೊದಲು 60 ವರ್ಷ ಮೇಲ್ಪಟ್ಟವರಿಗೆ ಮಾತ್ರ ಮೊದಲನೇ ಡೋಸ್ ಲಸಿಕೆ ನೀಡಬೇಕು, ನೀಡುವಾಗ ಆಧಾರ್ ಕಾರ್ಡ್ ಅಡ್ರೆಸ್ ಆಧಾರದ ಮೇಲೆ ಐವತ್ತು ಜನ ಹಳ್ಳಿಗರು ಹಾಗೂ ಉಳಿದ ಐವತ್ತು ಜನ ಪಟ್ಟಣದ ನಿವಾಸಿಗಳಿಗೆ ನೀಡಬೇಕು.
ಒಂದು ವಾರಗಳ ಕಾಲ ಜನರು ಬರುತ್ತಿರುವ ಸಂಖ್ಯೆ ನೋಡಿ ಆ ನಂತರ 50 ವರ್ಷ ಮೇಲ್ಪಟ್ಟವರಿಗೆ ಅಥವಾ 45 ವರ್ಷ ಮೇಲ್ಪಟ್ಟವರಿಗೆ ಎಂದು ವಿಭಾಗಿಸಿ ಮೊದಲ ಡೋಸ್ ಲಸಿಕೆ ನೀಡುವುದು ಸೂಕ್ತ. ಇದರಿಂದ ಲಸಿಕೆಗೆ ನೂಕುನುಗ್ಗಲಾಗುವುದು, ಲಸಿಕೆ ಸಿಗದೇ ವಾಪಾಸು ತೆರಳುವವರ ಸಂಖ್ಯೆ ಕಡಿಮೆಯಾಗುತ್ತದೆ


0 Comments