ಚಿಕ್ಕಮಗಳೂರು: ಶವದ ಎದುರು ಭೋಜನ ವ್ಯವಸ್ಥೆ, ಅರೆ ಇದು ಅಘೋರಿಗಳ ಲೋಕವಲ್ಲ ಬದಲಿಗೆ ಚಿಕ್ಕಮಗಳೂರು ಜಿಲ್ಲಾ ಕೋವಿಡ್ ಆಸ್ಪತ್ರೆಯ ಚಿತ್ರಣ.

ಈ ಭಯಾನಕತೆಯು ಇದೀಗ ಬೆಳಕಿಗೆ ಬಂದಿದ್ದು, ಇದನ್ನು ನೋಡಿದ ಜನರು ಸಹ ಭಯಭೀತರಾಗುತ್ತಿದ್ದಾರೆ. ಸೋಂಕಿನಿಂದ ಮೃತಪಟ್ಟವರ ಶವದ ಪಕ್ಕದಲ್ಲಿಯೇ ಸೋಂಕಿತರು ಮಲಗುವಂತಾಗಿದ್ದು, ಊಟವೂ ಮಾಡುತ್ತಿದ್ದಾರೆ. ಅವರ ಸಂಬಂಧಿಕರು ಸಹ ಅಲ್ಲಿಯೇ ಇರುವಂತಹ ಪರಿಸ್ಥಿತಿ.

ಕೊರೋನಾ ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ಬೆಡ್ ಗಳ ನಡುವಿನ ಬೆಡ್ ಒಂದರಲ್ಲಿ ಮೃತ ದೇಹವನ್ನು ಪ್ಯಾಕ್ ಮಾಡುತ್ತಿರುವ ವೀಡಿಯೋ ಒಂದು ವೈರಲ್ ಆಗುತ್ತಿದೆ. ಆಚೆ ಈಚೆಯ ಬೆಡ್ ಗಳಲ್ಲಿ ರೋಗಿಗಳು ಮಲಗಿದ್ದು, ಊಟ ಸಹ ಮಾಡುತ್ತಿದ್ದಾರೆ. ಸಂಬಂಧಿಕರು ಸಹ ಜೊತೆಗೇ ಇದ್ದಾರೆ. ಮಧ್ಯದ ಬೆಡ್ ನಲ್ಲಿ ಶವವನ್ನು ಪ್ಯಾಕ್ ಮಾಡಲಾಗುತ್ತಿದೆ. ಇದನ್ನು ನೋಡಿದ ರೋಗಿಗಳ ಆತ್ಮಸ್ಥೈರ್ಯದ ಗತಿ ಏನಾಗಬಹುದು ಎಂಬ ಪರಿಕಲ್ಪನೆ ಸಹ ಆಳುವವರಿಗೆ ಇದ್ದಂತಿಲ್ಲ.

ಆಸ್ಪತ್ರೆಯೇ ಕೊರೊನಾ ಹಾಟ್‌ಸ್ಪಾಟ್‌ ಆಗಿ ಪರಿವರ್ತನೆ ಆಗುತ್ತಿರುವುದಾಗಿ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಶವ ಪಕ್ಕದಲ್ಲಿಯೇ ಇದ್ದರೂ ಅಲ್ಲಿಯೇ ಸೋಂಕಿತರು ಹಾಗೂ ಸಂಬಂಧಿಕರು ಊಟ ಮಾಡುವ ಅನಿವಾರ್ಯತೆ ನಿಜಕ್ಕೂ ಕಳಪೆ ವ್ಯವಸ್ಥೆಯ ಪ್ರತಿಬಿಂಬ.

ಆರೋಗ್ಯ ಸಿಬ್ಬಂಧಿಗಳು ಹಗಲಿರುಳು ಕಾರ್ಯ ನಿರ್ವಹಿಸುತ್ತಿದ್ದು ಅವರ ಕುರಿತು ಅಪಾರ ಗೌರವವಿದೆ. ಆದರೆ ಇಂತಹ ಬೇಜವಾಬ್ದಾರಿ ವ್ಯವಸ್ಥೆಯನ್ನು ಖಂಡಿತಾ ಒಪ್ಪುಲಾಗುವುದಿಲ್ಲ. ಜನಪ್ರತಿನಿಧಿಗಳು, ಜಿಲ್ಲಾಡಳಿತ ಈ ಕುರಿತು ಸೂಕ್ತ ಕ್ರಮ ಕೈಗೊಂಡು ಅವ್ಯವಸ್ಥೆಯನ್ನು ಸರಿದೂಗಿಸಬೇಕಿದೆ. ಹಾಗೆಯೇ ಸಂಬಂಧಿಕರು ಸಹ ಪಿಪಿಇ ಕಿಟ್ ಧರಿಸಿ ಮಾತ್ರ ರೋಗಿಗಳನ್ನು ಭೇಟಿ ಮಾಡುವ ಮೂಲಕ ಪ್ರಜ್ಞಾವಂತಿಕೆ ಮೆರೆಯಬೇಕಿದೆ.