ಬಿಜೆಪಿ ನೇತೃತ್ವದ ಕೇಂದ್ರದ ಒಕ್ಕೂಟ ಸರ್ಕಾರ ಜಾರಿಗೊಳಿಸಿರುವ ಮೂರು ಕೃಷಿ ಕಾನೂನುಗಳ ವಿರುದ್ದ ಹೋರಾಟಕ್ಕೆ ನೆನ್ನೆಗೆ 6 ತಿಂಗಳು ತುಂಬಿರುವ ಹಿನ್ನಲೆಯಲ್ಲಿ ದೇಶಾದ್ಯಂತ ಕರಾಳ ದಿನ ಆಚರಿಸಿ, ರೈತ ಕಾರ್ಯಕರ್ತರ ಮನೆ ವಾಹನಗಳ ಮೇಲೆ ಕಪ್ಪು ಬಾವುಟ ಹಾರಿಸುವ ಮೂಲಕ ಕೇಂದ್ರ ಹಾಗು ರಾಜ್ಯ ಸರ್ಕಾರದ ವಿರುದ್ದ ರೈತ ಕಾರ್ಯಕರ್ತರು, ಸಂಘಟನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರೈತ ಕಾರ್ಮಿಕರಿಗೆ ಮಾರಕವಾಗಿರುವ ವಿವಾದಿತ ಮೂರು ಕೃಷಿ ಕಾನೂನನ್ನು ರದ್ದುಗೊಳಿಸಬೇಕು, ರೈತರ ಉತ್ಪನ್ನಗಳಿಗೆ ಬೆಂಬಲ ಬೆಲೆ (MSP) ಕಾನೂನಾತ್ಮಕ ರಕ್ಷಣೆ ಹಾಗೂ ಡಾಕ್ಟರ್ ಸ್ವಾಮಿನಾಥನ್ ವರದಿ ಜಾರಿಗೊಳಿಸುವಂತೆ ಆಗ್ರಹಿಸಿ ಜಿಲ್ಲೆಯ ಮೂಡಿಗೆರೆ, ಕಳಸ, ತರೀಕೆರೆ, ಕಡೂರು, ಕೊಪ್ಪದ ಕೌಳಿ ಹಾಗೂ ಹಾಗಲಗಂಚಿಯಲ್ಲಿ ರೈತ ಕಾರ್ಯಕರ್ತರು ವಾಹನಗಳಿಗೆ ಕಪ್ಪು ಬಾವುಟ ಹಾರಿಸುವುದರ ಮೂಲಕ ಪ್ರತಿಭಟನೆ ನಡೆಸಿದ್ದಾರೆ.

ಈ ಕುರಿತು ನ್ಯೂಸ್ ಮಲ್ನಾಡ್ ನೊಂದಿಗೆ ಮಾತನಾಡಿದ ಸಂಯುಕ್ತ ಕಿಸಾನ್ ಮೋರ್ಚಾದ ಜಿಲ್ಲಾಧ್ಯಕ್ಷರಾದ ಡಿ ಆರ್ ದುಗ್ಗಪ್ಪಗೌಡ, ಈಗಾಗಲೇ ನಮ್ಮ ರೈತ ಕಾರ್ಯಕರ್ತರ ಹೋರಾಟಕ್ಕೆ ಇಂದಿಗೆ ಆರು ತಿಂಗಳು ತುಂಬಿದೆ, ರಾಜ್ಯಾದ್ಯಂತ ಲಾಕ್ ಡೌನ್ ಇರುವುದರಿಂದ ರೈತರು ತಮ್ಮ ವಾಹನದ ಮೇಲೆ ಕಪ್ಪು ಬಾವುಟ ಹಾರಿಸುವ ಮೂಲಕ ಶಾಂತಿಯುತ ಪ್ರತಿಭಟನೆ ಮಾಡಲು ತೀರ್ಮಾನಿಸಲಾಗಿತ್ತು, ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗು ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ಕಪ್ಪು ಬಾವುಟ ಹಾರಿಸುವ ಮೂಲಕ ಪ್ರತಿಭಟಿಸಿದ್ದೇವೆ ಮುಂದಿನ ದಿನಗಳಲ್ಲಿ ಸರ್ಕಾರ ಕೃಷಿ ಕಾನೂನು ರದ್ದುಗೊಳಿಸದಿದ್ದಲ್ಲಿ ರಾಜ್ಯದ ವಿವಿದೆಡೆ ಪ್ರತಿಭಟನೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.