ರಾಜ್ಯಾದ್ಯಂತ ಎರಡನೇ ಹಂತದ ಲಾಕ್ ಡೌನ್ ಘೋಷಣೆ ಮಾಡಿದ್ದು ಶೃಂಗೇರಿ, ಕೊಪ್ಪ, ಜಯಪುರ ಸೇರಿದಂತೆ ಮಲೆನಾಡಿನ ಹಲವು ಭಾಗಗಳಲ್ಲಿ ಪೊಲೀಸರು ಚೆಕ್ ಪೋಸ್ಟ್ ನಿರ್ಮಿಸಿ ಅನಗತ್ಯವಾಗಿ ಓಡಾಡುವ ವಾಹನಗಳಿಗೆ ಬ್ರೇಕ್ ಹಾಕಿದ್ದಾರೆ. ಈವರೆಗೆ ಅನೇಕ ವಾಹನಗಳನ್ನು ವಶಪಡಿಸಿಕೊಂಡಿದ್ದು, ದಂಡ ಕಟ್ಟಿಸಿಕೊಂಡು ಖಡಕ್ ವಾರ್ನಿಂಗ್ ಕೊಟ್ಟು ಕಳುಹಿಸಿದ್ದಾರೆ.

ಈಗಾಗಲೇ ರಾಜ್ಯ ಸರ್ಕಾರ ಹೊರಡಿಸಿರುವ ನಿಯಮದಂತೆ ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6 ರಿಂದ 10ರ ತನಕ ಸಮಯ ಸೂಚಿಸಲಾಗಿದ್ದು ಆ ನಂತರ ಅನಗತ್ಯವಾಗಿ ಯಾರೇ ತಿರುಗಾಡಿದರೂ ಅವರ ವಿರುದ್ದ ಕ್ರಮ ತೆಗೆದುಕೊಂಡು ವಾಹನವನ್ನು ವಶಪಡಿಸಿಕೊಳ್ಳಲಾಗುತ್ತಿದೆ. ನಿಯಮ ಉಲ್ಲಂಘಿಸಿದ ಶೃಂಗೇರಿಯ ಮಹಾಲಕ್ಷ್ಮಿ ಶೋರೂಂ ನ ಶರಮಣ್, ವಿಷ್ಣುಸಿಂಗ್, ಜಿತೇಂದ್ರ ಹಾಗೂ ಹದ್ಮಾನ್ ನ ವಿರುದ್ದ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಈ ವರೆಗೂ ಶೃಂಗೇರಿಯಲ್ಲಿ ಒಟ್ಟು 23 ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ, ಪಟ್ಟಣದ ವೆಲ್ ಕಮ್ ಗೇಟ್ ಹಾಗೂ ಬಸ್ ನಿಲ್ದಾಣದ ಬಳಿ ಚೆಕ್ ಪೋಸ್ಟ್ ತೆರೆಯಲಾಗಿದೆ. ಪಟ್ಟಣದ ಹೊರತಾಗಿ ತಾಲೂಕಿನ ಹೊರಭಾಗದ ತನಿಕೋಡು ಹಾಗೂ ಬೇಗಾರು ಬಳಿ ಕೂಡ ಚೆಕ್ ಪೋಸ್ಟ್ ತೆರೆದಿದ್ದು ಪೊಲೀಸರು ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಶೃಂಗೇರಿ ಪೊಲೀಸ್ ಇನ್ಸ್ಪೆಕ್ಟರ್ ಬಗ್ಗೆ ಮೆಚ್ಚುಗೆ.

ಕಳೆದ ಒಂದು ವಾರದಿಂದ ಶೃಂಗೇರಿಯಲ್ಲಿ ಪಾಸಿಟಿವ್ ಪ್ರಕರಣಗಳ ಸಂಖ್ಯೆ ಕಮ್ಮಿಯಾಗುತ್ತಿದೆ ಇದಕ್ಕೆ ಕಾರಣ ಆರೋಗ್ಯ ಇಲಾಖೆಯವರ ಶ್ರಮ ಹಾಗೂ ಶೃಂಗೇರಿಯ ಪೊಲೀಸ್ ಇನ್ಸ್ಪೆಕ್ಟರ್ ರವಿ ಸರ್ ಅವರ ಖಡಕ್ ನಿರ್ಧಾರಗಳು ಎಂದು ಸಾಮಾಜಿಕ ಜಾಲತಾಣದಲ್ಲಿ ಜನರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಈ ಕುರಿತು ಪ್ರತಿಕ್ರಿಯಿಸಿರುವ ಇನ್ಸ್ಪೆಕ್ಟರ್ ರವಿ ಅವರು, ನಮ್ಮ ಠಾಣೆಯ 5 ಮಂದಿ ಸಿಬ್ಬಂದಿಗಳಿಗೂ ಸಹ ಕೊರೋನಾ ಪಾಸಿಟಿವ್ ಬಂದಿದ್ದು ಇಬ್ಬರು ಗುಣಮುಖರಾಗಿದ್ದಾರೆ ಇನ್ನೂ ಮೂವರು ಹೋಮ್ ಐಸೋಲೇಷನ್ ನಲ್ಲಿದ್ದಾರೆ, ನಾವು ಜನರ ಆರೋಗ್ಯದ ದೃಷ್ಟಿಯಿಂದ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ. ಹಾವೊಂದು ಸುಡುವ ಬಿಸಿಲಿನಿಂದ ಗರ್ಭಿಣಿ ಕಪ್ಪೆಯನ್ನು ರಕ್ಷಿಸಲು ತನ್ನ ಹೆಡೆಯನ್ನೇ ಅಡ್ಡವಾಗಿ ಹಿಡಿದಂತ ಪವಿತ್ರ ಭೂಮಿ ಶೃಂಗೇರಿ ಇಂತಹ ನೆಲದಲ್ಲಿ ಹುಟ್ಟಿದ ಜನ ಸೌಮ್ಯ ಸ್ವಭಾವದವರಾಗಿದ್ದರಿಂದ ಲಾಟಿ ಪ್ರಯೋಗವಾಗಿಲ್ಲ. ಜನರ ಕಷ್ಟಗಳು ನಮಗೆ ಅರ್ಥವಾಗುತ್ತವೆ ಪೊಲೀಸರು ಕೂಡ ಸಾರ್ವಜನಿಕರೊಂದಿಗೆ ಮಾನವೀಯತೆಯಿಂದ ವರ್ತಿಸುತ್ತಿದ್ದಾರೆ. ಹಾಗೊಂದು ವೇಳೆ ನಿಯಮ ಮೀರಿದರೆ ಅಂತವರಿಗೆ ಕಾನೂನಿನ ಅಡಿಯಲ್ಲಿ ಕಠಿಣ ಶಿಕ್ಷೆಗೆ ಒಳಪಡಿಸಲಾಗುತ್ತದೆ. ಅಂತಹದ್ದಕ್ಕೆ ಅವಕಾಶ ಮಾಡಿಕೊಡದೆ ಜನರೇ ಪರಿಸ್ಥಿತಿ ಅರ್ಥಮಾಡಿಕೊಂಡು ನಮ್ಮೊಂದಿಗೆ ಸಹಕರಿಸಿದರೆ ಕೊರೋನ ಮುಕ್ತ ಶೃಂಗೇರಿ ಸಾಧ್ಯ ಎಂದಿದ್ದಾರೆ.

ವ್ಯಾಕ್ಸಿನ್, ಕೃಷಿ ಸಂಬಂಧಿತ ಚಟುವಟಿಕೆಗಳಿಗೆ ಅವಕಾಶ

ಇನ್ನು ವ್ಯಾಕ್ಸಿನ್ ತೆಗೆದುಕೊಳ್ಳಲು ಆಸ್ಪತ್ರೆಗೆ ತೆರಳುವವರು ತಾವು ರಿಜಿಸ್ಟರ್ ಆದ ಮೆಸೇಜ್ (ನಿಮಗೆ ನಿಗದಿಯಾದ ದಿನಾಂಕದಂದು) ತೋರಿಸಿ ತೆರಳಬಹುದು ಅಲ್ಲದೇ ಕೃಷಿಗೆ ಸಂಬಂಧಿಸಿದ ಚಟುವಟಿಕೆಗೆ ಅವಕಾಶ ಕಲ್ಪಿಸಲಾಗಿದ್ದು ಸೂಕ್ತ ದಾಖಲೆಗಳನ್ನು ತೋರಿಸಿ ತೆರಳಬಹುದು.

ಶೃಂಗೇರಿ ಠಾಣಾ ವ್ಯಾಪ್ತಿಯ ಚೆಕ್ ಪೋಸ್ಟ್ ಗಳ ಚಿತ್ರಣ


ಜಯಪುರ ಬಳಿ ವಾಹನಗಳ ಮಾಹಿತಿ ಪಡೆಯುತ್ತಿರುವ ಪೊಲೀಸರು



ಕೊಪ್ಪದ ದ್ಯಾವೇಗೌಡ ವೃತ್ತದ ಚೆಕ್ ಪೋಸ್ಟ್ ನ ಒಂದು ದೃಶ್ಯ