ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ಶ್ರೇಣಿಯ ಕವಿಕಲ್ ಗಂಡಿ ಕೆಳ ಭಾಗದಲ್ಲಿ ಅತ್ತಿಗುಂಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶೋಲಾ ಕಾಡು ಹುಲ್ಲು ಗಾವಲಿನ ಸರ್ಕಾರಿ ಭೂಮಿ ಯಲ್ಲಿ ಬೆಂಗಳೂರು ಮೂಲದ ಕೆಲವರು ಅಕ್ರಮ ರೆಸಾರ್ಟ್, ಹೋಂ ಸ್ಟೇ ಪ್ರವಾಸಿ ಕಟ್ಟಡ ಕಟ್ಟಲು ಭೂಮಿ ಪರಿವರ್ತಿಸಿದೆ ಭೂಮಿ ಬಗೆದು ಕಾಂಕ್ರೀಟ್ ಪಿಲ್ಲರ್ ಹಾಕಲು ಕಾಮಗಾರಿ ಪ್ರಾರಂಭಿಸಿರುವುದು ಬೆಳಕಿಗೆ ಬಂದಿದೆ.

ಇಲ್ಲಿ ಸಂಬಂಧ ಪಟ್ಟ ಇಲಾಖೆಗಳ ಅನುಮತಿ ಪಡೆದಿಲ್ಲ. ಅರಣ್ಯ ಇಲಾಖೆ, ಮಾಲಿನ್ಯ ಮಂಡಳಿ, ಜಿಲ್ಲಾಡಳಿತದಿಂದ ಯಾವುದೇ ಅನುಮತಿ ಪಡೆಯದೆ ಕೆಲಸ ನಡೆಯುತ್ತಿದ್ದು, ಈಗಾಗಲೇ ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ಎಂದು ಘೋಷಣೆ ಆಗಿದ್ದು, ಇಂತಹ ಸೂಕ್ಷ್ಮ ಪ್ರದೇಶದಲ್ಲಿ ರೆಸಾರ್ಟ್ ನಿರ್ಮಾಣಕ್ಕೆ ಅವಕಾಶ ಕೊಡಬಾರದು, ಲಾಕ್ ಡೌನ್ ಲಾಭ ಪಡೆದ ಕೆಲವರು ಯಾವುದೇ ಅಗತ್ಯ ಅನುಮತಿ ಇಲ್ಲದೆ ಪ್ರವಾಸೋದ್ಯಮ ಕಟ್ಟಡ ಕಟ್ಟಲು ಮುಂದಾಗಿರುವುದು ಸರಿಯಲ್ಲ ಎಂದು ಅತ್ತಿಗುಂಡಿ ಗ್ರಾಮಸ್ಥರು ಪಂಚಾಯತಿ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಆದರೆ ಸಂಬಂಧಪಟ್ಟ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆಂಬ ಆರೋಪ ಕೇಳಿಬರುತ್ತಿವೆ. ಸರ್ವೇ ನಂಬರ್ 44 ಸರ್ಕಾರಿ ಭೂಮಿ, ಹುಲ್ಲು ಗಾವಲು ಪ್ರದೇಶವಾಗಿದೆ, ಇಲ್ಲಿನ ಭೂಮಿ ಇನಾಂ ಪ್ರದೇಶವಾಗಿದ್ದು ಇಲ್ಲಿ ಅನ್ಯಕ್ರಾಂತ ನೀಡಲು ಬರುವುದಿಲ್ಲ, ಇಲ್ಲಿ ಹೋಂ ಸ್ಟೇ ಹೆಸರಿನಲ್ಲಿ ಕಟ್ಟಡಗಳು ಏರುತ್ತಿದ್ದು, ಎಲ್ಲವೂ ಕಾಂಕ್ರೀಟ್ ಕಾಡು ಆಗುವ ಆತಂಕ ಎದುರಾಗಿದೆ. ಇಲ್ಲಿ ವನ್ಯಜೀವಿಗಳ ಮುಕ್ತ ಸಂಚಾರಕ್ಕೆ ಹಾಗು ಅವುಗಳ ಆವಾಸಸ್ಥಾನ ಕೂಡ ಹಾಳಾಗುತ್ತಿದೆ. ಈ ಕೂಡಲೇ ಸಂಬಂದ ಪಟ್ಟ ಇಲಾಖೆ ಮತ್ತು ಜಿಲ್ಲಾಡಳಿತ ಕೂಡಲೇ ಕಾನೂನು ಕ್ರಮ ಕೈಗೊಂಡು ಗಿರಿ ಪ್ರದೇಶದಲ್ಲಿ ನಡೆಯುತ್ತಿರುವ ಪ್ರವಾಸೋದ್ಯಮ ಹೆಸರಿನ ಅಕ್ರಮ ಕಟ್ಟಡಗಳನ್ನು ತೆರವು ಗೊಳಿಸುವ ಮುಖಾಂತರ ಗಿರಿ ಶ್ರೇಣಿ ರಕ್ಷಿಸಬೇಕು ಎಂದು ಗೌರವ ವನ್ಯಜೀವಿ ಪರಿಪಾಲಕ ಜಿ. ವೀರೇಶ್ ಒತ್ತಾಯಿಸಿದ್ದಾರೆ.