ಶೃಂಗೇರಿಯಲ್ಲಿ  ಸಂಘ ಪರಿವಾರದ ಮುಖಂಡರ ರಾಜಕೀಯ ಒತ್ತಡದ ಪರಿಣಾಮ ಸಂಘ ಪರಿವಾರದ ಕಾರ್ಯಕರ್ತರಿಗೆ ವ್ಯಾಕ್ಸಿನ್ ನೀಡಲಾಗಿದೆ ಎಂದು ಆರೋಪ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಈ ಮೇಲಿನ ಪೋಸ್ಟ್ ಒಂದು ವೈರಲ್ ಆಗಿತ್ತು, ಇದರ ಸತ್ಯಾಸತ್ಯತೆ ಕುರಿತು ಹಲವು ಪರ ವಿರೋಧ ಚರ್ಚೆಗಳು ನಡೆದ ಕಾರಣ ನ್ಯೂಸ್ ಮಲ್ನಾಡ್ ಇದರ ಕುರಿತು ಫ್ಯಾಕ್ಟ್ ಚೆಕ್ ನಡೆಸಿತು.

ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ವ್ಯಾಕ್ಸಿನ್ ಪಡೆದ ವ್ಯಕ್ತಿಗಳ ಸಂಪರ್ಕ ಮಾಡಿದಾಗ ಹೊರಬಂದ ಮಾಹಿತಿ ಎಂದರೆ ಇದೊಂದು ತಪ್ಪು ಮಾಹಿತಿಯನ್ನು ಒಳಗೊಂಡ ಸಂದೇಶವಾಗಿದೆ.

ಶೃಂಗೇರಿ ತಾಲೂಕಿನಲ್ಲಿ ಕೋವಿಡ್ ಕಾರಣದಿಂದ ಸಾವನ್ನಪ್ಪಿದ ರೋಗಿಗಳ ಶವ ಸಂಸ್ಕಾರ ಕಾರ್ಯವನ್ನು ಕಳೆದ ಕೆಲವು ತಿಂಗಳುಗಳಿಂದ ಸೇವಾ ಭಾರತಿ ಟ್ರಸ್ಟ್ ನ ವತಿಯಿಂದ ಮಾಡಲಾಗುತ್ತಿದ್ದು, ಎರಡರಿಂದ ಮೂರು ತಂಡಗಳನ್ನು ಮಾಡಿಕೊಂಡು ಇದುವರೆಗೂ 9 ಶವಗಳ ಸಂಸ್ಕಾರ ಮಾಡಿರುತ್ತಾರೆ. ಶವಸಂಸ್ಕಾರ ಮಾಡುವ ತಂಡದಲ್ಲಿ ಇರುವ ಸೇವಕರೊಬ್ಬರು ಸಹ ಕೊರೋನಾ ಪಾಸಿಟಿವ್ ಗೆ ಒಳಗಾಗಿದ್ದರು ಆ ಕಾರಣದಿಂದ ತಂಡದ ಸದಸ್ಯರ ಆರೋಗ್ಯದ ರಕ್ಷಣೆಯ ಉದ್ದೇಶಕ್ಕಾಗಿ ತಂಡದ ಎಲ್ಲಾ ಸದಸ್ಯರಿಗೂ ವ್ಯಾಕ್ಸಿನ್ ನೀಡುವಂತೆ ಸಂಘವು ತಾಲೂಕು ದಂಡಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿತ್ತು.

ಸರ್ಕಾರದ ನಿಯಮಾನುಸಾರ ಶವಸಂಸ್ಕಾರ ಮಾಡುವವರು ಸಹ ಫ್ರಂಟ್ ಲೈನ್ ವಾರಿಯರ್ಸ್ ಗೆ ಸೇರುವ ಕಾರಣ ಶವಸಂಸ್ಕಾರ ಕಾರ್ಯದಲ್ಲಿ ಭಾಗವಹಿಸುತ್ತಿರುವ ಸದಸ್ಯರಿಗೆ ವ್ಯಾಕ್ಸಿನ್ ನೀಡಲು ಅನುಮತಿ ನೀಡಲಾಗಿತ್ತು ಅದರಂತೆ ಇಂದು ಎಲ್ಲಾ ಸದಸ್ಯರಿಗೆ ವ್ಯಾಕ್ಸಿನ್ ನೀಡಲಾಗಿದೆ ಎಂದು ತಾಲೂಕು ಮಟ್ಟದ ಅಧಿಕಾರಿಗಳು ನ್ಯೂಸ್ ಮಲ್ನಾಡ್ ಗೆ ಸ್ಪಷ್ಟನೆ ನೀಡಿದ್ದಾರೆ.

“ಚಿತಾಗಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಹಾಗೂ ಶವಸಂಸ್ಕಾರ ಕಾರ್ಯದಲ್ಲಿ ಭಾಗಿಯಾಗುವವರಿಗೆ ವ್ಯಾಕ್ಸಿನ್ ನೀಡುವಾಗ ಆದ್ಯತೆ ನೀಡುವಂತೆ ಸರ್ಕಾರದ ನಿಯಮವಿದೆ. ಅದರಂತೆ ಬಂದ ಮನವಿಯನ್ನು ಮೇಲಾಧಿಕಾರಿಗಳಿಗೆ ಕಳಿಸಿ ಅನುಮತಿ ಪಡೆದ ನಂತರವಷ್ಟೇ ವ್ಯಾಕ್ಸಿನ್ ನೀಡಿದ್ದೇವೆ.”

- ಡಾ. ಮಂಜುನಾಥ್, ವೈದ್ಯಾಧಿಕಾರಿಗಳು ಶೃಂಗೇರಿ ತಾಲೂಕು ಆಸ್ಪತ್ರೆ