ಜಯಪುರ: ಆಶಾ ಕಾರ್ಯಕರ್ತೆಯರನ್ನು ಕರೋನಾ ವಾರಿಯರ್ಸ್ ಎಂದು ಘೋಷಿಸದರೆ ಸಾಲದು, ವಾರಿಯರ್ಸ್ ಗಳಿಗೆ ನೀಡಬೇಕಾದ ಸೌಲಭ್ಯಗಳು ಹಾಗೂ ಸುರಕ್ಷತಾ ಸಾಧನಗಳನ್ನು ಸರಕಾರ ನೀಡಬೇಕು ಎಂದು ಪ್ರಶಮನಿ ಚಾರಿಟೇಬಲ್ ಟ್ರಸ್ಟ್ ಅದ್ಯಕ್ಷ ಡಾ. ಉದಯಶಂಕರ್ ಹೇಳಿದರು.

ಸೋಮವಾರ ಸ್ಪಂದನ ಸೇವಾ ಬಳಗ ಜಯಪುರದಲ್ಲಿ ಆಯೋಜಿಸಿದ್ದ ಆಶಾ ಕಾರ್ಯಕರ್ತೆಯರ ಗೌರವ ಸಮರ್ಪಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಆಶಾ ಕಾರ್ಯಕರ್ತೆಯರನ್ನು ಸರ್ಕಾರ ಕರೋನಾ ವಾರಿಯರ್ಸ್ ಎಂದು ಘೋಷಿಸಿರುವುದು ಸಂತೋಷದ ವಿಷಯ. ಆದರೆ ಅವರಿಗೆ ನೀಡಬೇಕಾಗಿದ್ದ ಕನಿಷ್ಠ ಸುರಕ್ಷತಾ ಸಾಧನಗಳಾದ N95 ಮಾಸ್ಕ್, ಸ್ಯಾನಿಟೈಜರ್‌ಗಳನ್ನು ನೀಡದೆ ಕೆಲಸ ಮಾಡಿಸುತ್ತಿದೆ. ಇದು ಯುದ್ದಕ್ಕೆ ಹೊರಟು ನಿಂತ ಸೈನಿಕನ ಸುರಕ್ಷತೆಗೆ ಬುಲೆಟ್ ಫ್ರೂಫ್ ಜಾಕೆಟ್, ಗುಂಡು ನಿರೋಧಕ ಹೆಲ್ಮೆಟ್ ಗಳನ್ನು ನೀಡದೆ ಕಳಿಸಿದಂತಾಗುತ್ತದೆ. ವಾರಿಯರ್ಸ್ ಯುದ್ದ ಗೆಲ್ಲ ಬೇಕಾದರೆ ಸುರಕ್ಷತಾ ಸಾಧನಗಳನ್ನು ಸರ್ಕಾರ ನೀಡಬೇಕು. ಆಶಾ ಕಾರ್ಯಕರ್ತೆಯರು ಕಡ್ಡಾಯವಾಗಿ ಎನ್95 ಮಾಸ್ಕ್, ಸ್ಯಾನಿಟೈಜರ್‌ಗಳನ್ನು ಬಳಸಿಯೇ ಕೆಲಸ ಮಾಡಬೇಕಿದ್ದು, ತಮಗೆ ಅವುಗಳ ಕೊರತೆ ಇದ್ದರೆ ನಾವು ನಿಮಗೆ ಅವುಗಳನ್ನು ಕೊಡಿಸುವ ವ್ಯವಸ್ಥೆ ಮಾಡುತ್ತೇವೆ, ಸಮಾಜಕ್ಕೆ ನಿಮ್ಮ ಸುರಕ್ಷತೆಯೂ ಮುಖ್ಯ ಎಂದರು.

ನಂತರ ಸ್ಪಂದನ ಸೇವಾ ಬಳಗದ ಸಂಯೋಜಕ ಕಿಬ್ಳಿ ಪ್ರಸನ್ನಕುಮಾರ್ ಮಾತನಾಡಿ, ಗ್ರಾಮೀಣ ಭಾಗಗಳಲ್ಲಿ ಆಶಾ ಕಾರ್ಯಕರ್ತೆಯರು ಕರೋನಾ ಸೋಂಕಿತರ ಶುಶ್ರುಷೆ ಹಾಗೂ ಕರೋನಾ ಜಾಗೃತಿ ಮಾಡುವಲ್ಲಿ ಮಹತ್ವದ ಕಾರ್ಯ ಮಾಡುತ್ತಿದ್ದಾರೆ. ತಮಗಿರುವ ಕನಿಷ್ಠ ಸಂಬಳದಲ್ಲಿಯೇ ಅಗತ್ಯ ಸುರಕ್ಷತಾ ಸಾಧನಗಳನ್ನು ಖರೀಧಿಸಿ, ತಮ್ಮ ಆರೋಗ್ಯವನ್ನು ಒತ್ತೆಯಿಟ್ಟು ಪ್ರಾಮಾಣ ಕತೆಯಿಂದ ಕೆಲಸ ಮಾಡುತ್ತಿರುವುದು ಅಭಿನಂದನೀಯ ಕಾರ್ಯವಾಗಿದೆ. ಅಲ್ಲದೆ ಗ್ರಾಮೀಣ ಭಾಗಗಳಲ್ಲಿ ಅನೇಕ ಕಿಲೋಮೀಟರ್‌ಗಳಷ್ಟು ದೂರವನ್ನು ಕಾಲ್ನಡಿಗೆಯಲ್ಲೇ ದಿನ ನಿತ್ಯ ಸಂಚರಿಸಿ, ಸೋಂಕಿತರ ಆರೋಗ್ಯವನ್ನು ನಿತ್ಯ ಪರೀಕ್ಷಿಸುತ್ತಾ, ಅವರಲ್ಲಿ ಆತ್ಮವಿಶ್ವಾಸ ತುಂಬುತ್ತಾ, ಕರೊನಾ ವಿರುದ್ದ ಜಾಗೃತಿ ಮೂಡಿಸುತ್ತಿದ್ದಾರೆ. ಎಲೆ ಮರೆಕಾಯಿಯಂತೆ ಕೆಲಸ ಮಾಡುತ್ತಿರುವ ಇಂತಹ ಸಾಧಕರನ್ನು ಗೌರವಿಸುವ ಕೆಲಸವನ್ನು ನಮ್ಮ ಸ್ಪಂದನ ಸೇವಾ ಬಳಗ ಮಾಡುತ್ತಿದ್ದು ಇದು ನಮಗೆ ಹೆಮ್ಮೆಯ ಸಂಗತಿಯಾಗಿದೆ. ಹೋಬಳಿಯ ಜಯಪುರ, ಶಾಂತಿಗ್ರಾಮ, ಅತ್ತಿಕುಡಿಗೆ ಪಿಹೆಚ್‌ಸಿ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಎಲ್ಲಾ ಆಶಾ ಕಾರ್ಯಕರ್ತೆಯರನ್ನು ನಾವು ಗೌರವಿಸಲಿದ್ದೇವೆ. ಅಲ್ಲದೆ ಮೇಗುಂದಾ ಹೋಬಳಿ ವ್ಯಾಪ್ತಿಯಲ್ಲಿರುವ ಅಶಕ್ತ ಕುಟುಂಬಗಳಿಗೆ ಈ ಲಾಕ್ಡೌನ್ ಸಮಯದಲ್ಲಿ ನಾವು ದಿನಸಿ ಪದಾರ್ಥಗಳ ಕಿಟ್‌ಗಳನ್ನು ನೀಡುತ್ತಿದ್ದು, ಇದಕ್ಕೆ ವಸ್ತುರೂಪದಲ್ಲಿ ದಿನಸಿ ಪದಾರ್ಥಗಳನ್ನು ನೀಡಿ ಸಹಕಾರ ನೀಡಿದ ಎಲ್ಲಾ ಸಹೃದಯಿ ಧಾನಿಗಳಿಗೆ ಧನ್ಯವಾದಗಳನ್ನು ಸಮರ್ಪಿಸುತ್ತೇವೆ ಎಂದರು.

ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಸಹಕಾರ್ಯವಾಹ ಆಸ್ತಿಕ್ ಹೆಬ್ಬಾರ್ ಮಾತನಾಡಿ, ಆರ್‌ಎಸ್‌ಎಸ್ ನ ಸ್ವಯಂಸೇವಕರು ಹಾಗೂ ದಾನಿಗಳ ಸಹಕಾರದಿಂದ ಕೊಪ್ಪದಲ್ಲಿ ಸೇವಾ ವಾಹಿನಿ ಟ್ರಸ್ಟ್ ಮೂಲಕ ಜಿಲ್ಲೆಯ ಕೊಪ್ಪ, ಶೃಂಗೇರಿ, ಎನ್.ಆರ್ ಪುರ ಹಾಗೂ ಕಳಸ ತಾಲೂಕುಗಳ ಆಸ್ಪತ್ರೆಗಳಿಗೆ ಕರೊನಾ ಚಿಕಿತ್ಸೆಗಾಗಿ ಸುಮಾರು 2ಲಕ್ಷದ 15ಸಾವಿರ ರೂ. ಮೌಲ್ಯದ ಔಷದಿಗಳನ್ನು ಹಾಗೂ ಆಶಾ ಕಾರ್ಯಕರ್ತೆಯರಿಗೆ 18ಸಾವಿರ ಮೌಲ್ಯದ ಮಾಸ್ಕ್ಗಳನ್ನು ಹಾಗೂ 13ಸಾವಿರ ಮೌಲ್ಯದ ಸ್ಯಾನಿಟೈಜರ್‌ಗಳನ್ನು ವಿತರಿಸಿದ್ದೇವೆ. ಕರೊನಾ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ನಾವು ಆಭಾರಿಗಳು ಎಂದರು.

ಈ ಸಂಧರ್ಭದಲ್ಲಿ ಸ್ಪಂದನ ಸೇವಾ ಬಳಗದ ಸದಸ್ಯೆಯರು ಹೂವು, ಅರಿಶಿನ-ಕುಂಕುಮ, ಬಳೆ ಮತ್ತು ಸೀರೆಯನ್ನು ಆಶಾ ಕಾರ್ಯಕರ್ತೆಯರಿಗೆ ನೀಡಿ ವಿಶಿಷ್ಠವಾಗಿ ಗೌರವಿಸಿದರು. ಸ್ಪಂದನ ಬಳಗದ ಸುರೇಶ್, ಮಣ ಕಂಠನ್ ಕಂದಸ್ವಾಮಿ, ಸುಕನ್ಯಾಸುರೇಶ್, ಭಾಗ್ಯಲಕ್ಷ್ಮೀ ರಾಮಮೂರ್ತಿ ಆರ್‌ಎಸ್‌ಎಸ್‌ನ ವಿಶ್ವನಾಥ್, ರಕ್ಷಿತ್, ಹರೀಷ್, ಅನೀಶ್, ಪತ್ರಕರ್ತ ಪ್ರದೀಪ್ ಹೆಬ್ಬಾರ್ ಹಾಗೂ ಬಿಜೆಪಿಯ ಸಂಪತ್, ಸುಧಾಕರ ಭಜರಂಗದಳದ ಅಕ್ಷಯ್, ಆಶಾ ಕಾರ್ಯಕರ್ತೆಯರ ಸುಗಮಕಾರರಾದ ಶ್ರೀಮತಿ ಹಾಗೂ ಆಶಾ ಕಾರ್ಯಕರ್ತೆಯರಿದ್ದರು.