ಬೆಂಗಳೂರು: ಬೈಕ್ ಅಪಘಾತಕ್ಕೀಡಾಗಿ ಕೋಮಾದಲ್ಲಿದ್ದ ನಟ ಸಂಚಾರಿ ವಿಜಯ್ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಬೈಕ್ ಅಪಘಾತಕ್ಕೊಳಗಾಗಿ ಗಂಭೀರ ಗಾಯಗೊಂಡಿದ್ದ ನಟನನ್ನು ಬನ್ನೇರುಘಟ್ಟದ ಅಪೋಲೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಮೆದುಳಿಗೆ ಗಂಭೀರ ಗಾಯಗಳಾಗಿ ನಿಷ್ಕ್ರಿಯವಾಗಿದ್ದರಿಂದ ಚಿಕಿತ್ಸೆ ಫಲಿಸದೇ ಇಂದು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಮೂಲತಃ ಚಿಕ್ಕಮಗಳೂರಿನ ಕಡೂರಿನವರು.

ಇಂದು ಬೆಳಗ್ಗೆ ನಟನ ಆರೋಗ್ಯದ ಬಗ್ಗೆ ಅಪೊಲೋ ಆಸ್ಪತ್ರೆ ವೈದ್ಯ ಡಾ. ಅರುಣ್ ಕುಮಾರ್ ನಾಯ್ಕ್ ಮಾತನಾಡಿ, ಸಂಚಾರಿ ವಿಜಯ್ ಗೆ ಚಿಕಿತ್ಸೆ ಶುರುವಾಗಿ 36 ಗಂಟೆಗೆ ಆಗಿದೆ. ಆಸ್ಪತ್ರೆಗೆ ಬಂದಾಗ ಅವರ ಪರಿಸ್ಥಿತಿ ತುಂಬಾ ಚಿಂತಾಜನಕವಾಗಿತ್ತು. ಆಸ್ಪತ್ರೆಗೆ ಬಂದ ಕೆಲವೇ ನಿಮಿಷದಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಯ್ತು. ಸದ್ಯ ಅವರ ಬ್ರೈನ್ ಫೇಲ್ಯೂರ್ ಆಗಿದೆ. 36 ಗಂಟೆಯಾದ್ರೂ ವಿಜಯ್ ಸ್ಪಂದಿಸ್ತಿಲ್ಲ. ಎಷ್ಟೇ ಚಿಕಿತ್ಸೆ ಕೊಟ್ರು ಸ್ಪಂದಿಸ್ತಿಲ್ಲ. ಮೆದುಳು ಚಿಕಿತ್ಸೆಗೆ ಸ್ಪಂದಿಸ್ತಿಲ್ಲ. ಎಲ್ಲಾ ಚಿಕಿತ್ಸೆ ಕೊಡಲಾಗ್ತಿದೆ. ವಿಜಯ್ ಉಸಿರಾಟ ಕೂಡ ಕ್ಷೀಣವಾಗಿದೆ. ಚಿಕಿತ್ಸೆ ಕೊಟ್ರೂ ರಿಕವರಿ ಕಷ್ಟ ಎಂಬುದಾಗು ವೈದ್ಯರು ಮಾಹಿತಿ ನೀಡಿದ್ದಾರೆ.

ನಿನ್ನೆ ರಾತ್ರಿ ಗೆಳೆಯನ ಮನೆಯಲ್ಲಿ ಊಟ ಮಾಡಿಕೊಂಡು ಬೈಕಿನಲ್ಲಿ ನಟ ಹಿಂದಿರುಗುತ್ತಿದ್ದರು. ಗೆಳೆಯ ನವೀನ್ ಬೈಕ್ ಓಡಿಸುತ್ತಿದ್ದು, ವಿಜಯ್ ಹಿಂಬದಿಯಲ್ಲಿ ಕುಳಿತಿದ್ದರು. ಜೆಪಿ ನಗರದ 7ನೇ ಹಂತದಲ್ಲಿ ಬೈಕ್ ಸ್ಕಿಡ್ ಆಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿತ್ತು. ಅಪಘಾತದ ರಭಸಕ್ಕೆ ನಟ ಬೈಕಿನಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು.