ಮೂಡಿಗೆರೆಯ ಚಾರ್ಮಾಡಿ ಘಾಟಿಯಲ್ಲಿ ರಸ್ತೆಯ ಪಕ್ಕದಲ್ಲಿರುವ ಮಂಗಗಳಿಗೆ ಬಜರಂಗದಳದ ಕಾರ್ಯಕರ್ತರು ಹಾಗೂ.ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಣ್ಣು ಹಂಚಿರುವುದು ಹಲವು ಟೀಕೆಗೆ ಹಾಗೂ ಪರ ವಿರೋಧ ಚರ್ಚೆಗೆ ಸಹ ಕಾರಣವಾಗಿದೆ.
ಅರಣ್ಯ ಕಾಯ್ದೆ ಪ್ರಕಾರ ರಸ್ತೆಗಳಲ್ಲಿ ಕಾಡು ಪ್ರಾಣಿಗಳಿಗೆ ಪ್ರವಾಸಿಗರು ಯಾವುದೇ ಆಹಾರ ನೀಡುವಂತಿಲ್ಲ, ಈ ಹಿಂದೆ ಚಾರ್ಮಾಡಿ ಘಾಟಿಯು ಅತಿವೃಷ್ಟಿ ಕಾರಣ ಬಂದ್ ಆಗಿದ್ದರಿಂದ ಆಹಾರ ಇಲ್ಲದೇ ಪ್ರವಾಸಿಗರನ್ನು ಅರಸಿ ಬದುಕುತ್ತಿದ್ದ ಹಲವು ಮಂಗಗಳು ಸಾವನ್ನಪ್ಪಿದ್ದವು, ಕಾಡು ಪ್ರಾಣಿಗಳಿಗೆ ಆಹಾರ ಕೊಡುವುದಕ್ಕೆ ಪರಿಸರವಾದಿಗಳು ಸಹ ವಿರೋಧ ವ್ಯಕ್ತಪಡಿಸಿದ್ದರು. ಆ ನಂತರ ಅರಣ್ಯ ಇಲಾಖೆ ಯಾವುದೇ ಆಹಾರ ನೀಡದಂತೆ ಸೂಚನಾ ಫಲಕವನ್ನು ಸಹ ಅಳವಡಿಸಿತ್ತು. ಆದರೂ ಸಹ ಸಂಪೂರ್ಣವಾಗಿ ನಿಯಂತ್ರಿಸಲು ಸಾಧ್ಯವಾಗಿರಲಿಲ್ಲ.
ಈಗ ಕೋವಿಡ್ ಹಿನ್ನೆಲೆಯಲ್ಲಿ ಪ್ರವಾಸಿಗರು ಚಾರ್ಮಾಡಿ ಘಾಟಿಯಲ್ಲಿ ಓಡಾಡುವುದು ಕಮ್ಮಿಯಾಗಿರುವುದರಿಂದ ಮಂಗಗಳು ಹಸಿವಿನಿಂದ ಬಳಲುತ್ತಿವೆ ಎಂದು ಚಿಕ್ಕಮಗಳೂರು ಬಜರಂಗದಳದ ಕಾರ್ಯಕರ್ತರು ಸುಮಾರು ನೂರು ಕೆಜಿ ಬಾಳೆಹಣ್ಣನ್ನು ಮಂಗಗಳಿಗೆ ಹಂಚಿದ್ದು, ಅದೇ ರಸ್ತೆಯಲ್ಲಿ ಬರುತ್ತಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಹ ಅವುಗಳಿಗೆ ಹಣ್ಣುಗಳನ್ನು ನೀಡಿ ತೆರಳಿದ್ದರು ಆದರೆ ಇದೀಗ ಇದು ವ್ಯಾಪಕ ಟೀಕೆಗೆ ಗುರಿಯಾಗಿದ್ದು ಅರಣ್ಯ ಕಾಯ್ದೆ ಉಲ್ಲಂಘನೆಯಾಗಿದ್ದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.
ಪರ-ವಿರೋಧ ಚರ್ಚೆ
ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಬಿಸಿ ಬಿಸಿ ಚರ್ಚೆ ನಡೆದಿದ್ದು ಕೆಲವರು ಮಾನವೀಯತೆ ದೃಷ್ಟಿಯಿಂದ ಹಂಚಿದ್ದು ಸರಿ ಎಂದರೆ ಇನ್ನೂ ಹಲವರು ಭವಿಷ್ಯದ ಅಪಾಯದ ಲೆಕ್ಕದಲ್ಲಿ ಹಾಗೂ ಕಾನೂನಿನ ಪ್ರಕಾರ ಇದು ತಪ್ಪು ಎಂದಿದ್ದಾರೆ.
ಪ್ರವಾಸಿಗರು ಇಲ್ಲದ ಕಾರಣ ಮಂಗಗಳು ಹಸಿವಿನಲ್ಲಿವೆ ಎಂದು ಭಾವನಾತ್ಮಕವಾಗಿ ಹಾಗೂ ಮಾನವೀಯ ದೃಷ್ಟಿಯಿಂದ ಇದನ್ನು ಹಂಚಲಾಗಿದೆ, ಕಾನೂನಿನ ಕುರಿತು ತಿಳಿ ಹೇಳುವವರು ಈ ಹಿಂದಿನಿಂದಲೂ ಕಠಿಣ ನಿರ್ಧಾರ ತೆಗೆದುಕೊಂಡಿದ್ದರೆ ಅಲ್ಲಿ ಇಂದು ಮಂಗಗಳೇ ವಾಸಿಸುತ್ತಿರಲಿಲ್ಲ, ಬದಲಿಗೆ ಕಾಡು ಸೇರಿರುತ್ತಿದ್ದವು.
ಈಗ ಅವುಗಳು ಅಲ್ಲಿಯೇ ಹಸಿವಿನಿಂದ ಬಳಲುತ್ತಿವೆ ಇಂತಹ ಸಂದರ್ಭದಲ್ಲಿ ಮಾನವೀಯತೆ ದೃಷ್ಟಿಯಿಂದ ನಾವು ಹಂಚಿದ್ದೇವೆ ಎಂಬುದು ಹಂಚಿದವರ ಅಭಿಪ್ರಾಯ.
ಒಟ್ಟಾರೆ ಚರ್ಚೆಗೆ ಬಂದ ಕೆಲವರ ಅಭಿಪ್ರಾಯಗಳು ಹೀಗಿವೆ.
➤ ಒಂದು ಕಾಲದಲ್ಲಿ ಹಾವಾಡಿಸುವುದು, ಕರಡಿ ಆಡಿಸುವುದು, ಮಂಗನ ಕುಣಿಸುವುದು ಕೂಡ ಭಾವನಾತ್ಮಕ, ಹೊಟ್ಟೆಪಾಡಿನ ವಿಷಯವಾಗಿತ್ತು. ಆಮೇಲೆ ಅದು ನಿಷೇಧವಾಯಿತು. ಮಂಗಗಳಿಗೆ ಆಹಾರ ಕೊಡುವುದು ಕೂಡ ನಿಷೇಧವಾಗಿದೆ. ಭಾವನಾತ್ಮಕ, ಮಾನವೀಯ ಎಂಬ ಸವಕಲು ಮಾತು ಬಿಟ್ಟು ಅವುಗಳನ್ನು ಅವುಗಳ ಪಾಡಿಗೆ ಬದುಕಲು ಬಿಡುವುದೇ ಬಹುದೊಡ್ಡ ಮಾನವೀಯತೆ.
➤ ಕಾಡು ಪ್ರಾಣಿಗಳಿಗೆ ಆಹಾರ ಒದಗಿಸಿದರೆ ಅವುಗಳಿಗೆ ಅದು ಅಭ್ಯಾಸವಾಗಿ ನಂತರ ಕಾಡಿಗೆ ಹೋಗಿ ಆಹಾರ ಅರಸುವುದನ್ನೇ ಬಿಟ್ಟು ದಾರಿಬದಿಯಲ್ಲಿ ಹೊಟ್ಟೆಗಾಗಿ ಕಾಯುವುದು ರೂಡಿಯಾಗುತ್ತದೆ , ನಂತರದ ದಿನದಲ್ಲಿ ಯಾರಾದರೂ ಆಹಾರ ಕೊಡದೇ ಹೋದರೆ ಅವು ಸ್ವತಃ ಆಹಾರ ಹುಡುಕಲು ಯೋಗ್ಯವಾಗದೇ ದಾರಿ ಕಾದು ಕಾದು ಸತ್ತೇ ಹೋಗುತ್ತವೆ, ಉದಾಹರಣೆಗೆ ಚಾರ್ಮಾಡಿ ಘಾಟಿ ಬಂದ್ ಆದಾಗ ಹಲವು ಮಂಗಗಳು ದಾರಿಬದಿಯಲ್ಲಿ ಆಹಾರ ಹಾಕುವವರಿಲ್ಲದೇ ಅವರಿಗಾಗಿ ಕಾದು ಕಾದು ಸತ್ತೊ ಹೋದ ಉದಾಹರಣೆಗಳಿವೆ . ಕಾಡು ಪ್ರಾಣಿಗಳಿಗೆ ಆಹಾರ ಮನುಷ್ಯ ಹಾಕುವುದು ಒಂದು ರೀತಿ ಪರಾವಲಂಬಿ ಮಾಡಿದಂತೆ , ಪ್ರತಿ ದಿನವೂ ಹಾಕದಿದ್ದಾಗ ಅವುಗಳು ತೊಂದರೆಗೀಡಾಗುತ್ತವೆ .
➤ ಚಾರ್ಮಾಡಿ ರಸ್ತೆಯಲ್ಲಿ ಮಂಗಗಳಿಗೆ ಹಣ್ಣು ನೀಡುವುದು ಇಂದಿನದ್ದಲ್ಲ. ಆ ಮಾರ್ಗದಲ್ಲಿ ಪ್ರಯಾಣಿಸುವವರು ದಿನನಿತ್ಯ ಹಣ್ಣು ಆಹಾರ ಕೊಡುತ್ತಾರೆ. ಆಗುಂಬೆ ಘಾಟಿ ರಸ್ತೆ ಸೇರಿದಂತೆ ದೇಶದ ಹಲವೆಡೆ ಇದು ನಡೆದೇ ಇದೆ. ಆಹಾರ ಕೊಡುವುದು ಅಪರಾಧವೇನಲ್ಲ. ಈಗಲೂ ಮಂಗಗಳನ್ನು ಮಾಂಸಕ್ಕಾಗಿ ಬೇಟೆಯಾಡುತ್ತಾರೆ ಅದು ಖಂಡಿತಾ ಅಪರಾಧ. ಹೊಟ್ಟೆ ಪಾಡಿಗಾಗಿ ಅವುಗಳನ್ನು ಹಿಡಿದು ಈಗಲೂ ಹಿಂಸಿಸಲಾಗುತ್ತಿದೆ ಅದು ತಪ್ಪು.
➤ ಅರಣ್ಯ ಪ್ರದೇಶದಲ್ಲಿ ಅಕ್ರಮ ಪ್ರವೇಶ ಮಾಡಿ ಈ ರೀತಿ ಮಾಡಿದರೆ ಅಪರಾಧವೆ, ಇದೊಂದು ಭಾವನಾತ್ಮಕ ಪ್ರಕ್ರಿಯೆ ಅಷ್ಟೆ. ಅದನ್ನು ಅಪರಾಧ ದೃಷ್ಟಿಯಲ್ಲಿ ನೋಡಬಾರದು
➤ ಮಂಗಗಳಿಗೆ ಹಣ್ಣು ಕೊಡುವುದು ಸರಿ ಎನ್ನುವುದು ಮೇಲ್ನೋಟಕ್ಕೆ ಮಾನವೀಯತೆ ಎನಿಸುತ್ತದೆ, ಆದರೆ ಮಂಗಗಳಿಗೆ ಹಣ್ಣು ಕೊಡಬಾರದು ಎನ್ನುವುದು ಸ್ವಲ್ಪ ಮುಂದಾಲೋಚನೆ ಹಾಗೂ ಭವಿಷ್ಯದ ಅಪಾಯವನ್ನು ಲೆಕ್ಕಕ್ಕೆ ಹಾಕಿ ಯೋಚಿಸಿದಾಗ ನಿಜವಾದ ಮಾನವೀಯತೆ ಎನಿಸುತ್ತದೆ.
ಹಾಗಾಗಿ ಹಣ್ಣು ಕೊಡುವುದು ಸರಿ ಎನ್ನುವುದು ಅಥವಾ ಕೊಡುವುದು ಭಾವನಾತ್ಮಕವಾಗಿ ಮಾತ್ರ ಸರಿಯಾದ ವಿಷಯ. ಭಾವನೆಗಳಿಗೆ ಮಾತ್ರ ಬೆಲೆ ಕೊಟ್ಟರೆ ಭವಿಷ್ಯಕ್ಕೆ ಮಾರಕವಾಗುತ್ತದೆ.
ನಾವು ಕೋಡುವುದೇ ಆದರೆ ಒಂದು ದಿನ ಮಾತ್ರವಲ್ಲ, ವರ್ಷದ 365ದಿನವೂ ಕೊಡುವ ಪ್ರತಿಜ್ಞೆ ಮಾಡಬೇಕು. ಜೊತೆಗೆ ಆಹಾರದ ಗುಣಮಟ್ಟವನ್ನು ಸರ್ಟಿಫೈ ಮಾಡಿಸಿಯೇ ಕೊಡಬೇಕು ಅದೆಲ್ಲಾ ಆಗಿಹೋಗದ ಕೆಲಸ ಎಂದು ಎಲ್ಲರಿಗೂ ಗೊತ್ತಿರುವ ವಿಚಾರ.
ವನ್ಯಜೀವಿಗಳು ನಮ್ಮನ್ನ ಅವಲಂಬಿಸಿದ್ದರೆ ನಾವು ಅವುಗಳ ಬದುಕನ್ನೂ ಕಿತ್ತುಕೊಂಡತೆಯೇ ಸರಿ. ಮಂಗಗಳಂತೆಯೇ ನಾವೂ ಇಲ್ಲಿನ ಸಾಮಾನ್ಯ ಜೀವಿಗಳು, ಅವುಗಳ ಬದುಕನ್ನು ನಿಯಂತ್ರಿಸುವ ಹಕ್ಕು ನಮಗಿಲ್ಲ.
➤ Wild animals Rehabilitation centre ನಲ್ಲೂ ಆಹಾರವನ್ನ ಕೊಡುವಾಗ ಅವುಗಳಿಗೆ ಅರಿವಿಲ್ಲದಂತೆ ದೂರದಲ್ಲೆಲ್ಲೋ ಆಹಾರ ಅವುಗಳಿಗೆ ಸಿಗುವಂತೆ ಇರಿಸಿ ಬರಲಾಗುತ್ತದೆ ಹೊರತು ಅವುಗಳ ಎದುರೇ ಇಡೋದಿಲ್ಲ , ಅವುಗಳು ಕೊಂಚವಾದರೂ ಹುಡುಕಿ ನಂತರ ಆಹಾರವನ್ನ ಸೇವಿಸಬೇಕು , ಕಾರಣ ಅವುಗಳು ಗಾಯ ಅಥವಾ ರೋಗವಾಸಿಯಾದ ನಂತರವೂ ಕಾಡಿಗೆ ಬಿಟ್ಟಾಗ ಆಹಾರವನ್ನ ಅರಸುವ ಅವುಗಳ ಕ್ಷಮತೆ ಕಡಿಮೆಯಾಗಬಾರದು ಅಂತ.
➤ ಚಾರ್ಮಾಡಿ ಘಾಟ್ ರಸ್ತೆಯಲ್ಲಿ ಸಾಗುವ ಪ್ರತಿ ಪ್ರಯಾಣಿಕರು ಮಂಗಗಳಿಗೆ ಹಣ್ಣು ನೀಡುತ್ತಾರೆ. ಇದರಲ್ಲಿ ತಪ್ಪು ಕಾಣ್ಣುವುದಿಲ್ಲ , ಘಾಟ್ ನಲ್ಲಿ ಇರುವ ಮಂಗಗಳಿಗೆ ಅಲ್ಲಿ ಪರಿಸರದಿಂದ ಆಹಾರ ಸಿಗುವುದು ಕಷ್ಟ
➤ ವನ್ಯ ಪ್ರಾಣಿಗಳ ಪೈಕಿ ಮಂಗಗಳು ಮಾತ್ರ ಹೆಚ್ಚಾಗಿ ಮನುಷ್ಯನ ಸಾಮೀಪ್ಯದಲ್ಲಿರುತ್ತವೆ ಚಾರ್ಮಾಡಿ ಸೇರಿದಂತೆ ಹಲವು ಸ್ಥಳಗಳಲ್ಲಿ 365 ದಿನವೂ ಒಬ್ಬರಲ್ಲಾ ಒಬ್ಬರು ಆಹಾರ ಕೊಡುತ್ತಾರೆ ಇದು ಕೇವಲ ಮಾನವೀಯತೆ, ಭಾವನೆಗಳ ವಿಚಾರವಲ್ಲ ಇಂದು ನಡೆದಿರುವುದೂ ಅಷ್ಟೆ ಎನ್ನುವುದು ನನ್ನ ಅಭಿಪ್ರಾಯ
➤ವನ್ಯ ಜೀವಿಗಳ ಕುರಿತು ಸಾರ್ವಜನಿಕರಿಗೆ ಮಾಹಿತಿ ಕೊರತೆ ಇದೆ, ಜಾಗೃತಿ ಮೂಡಿಸುವ ಹೊಣೆ ಅರಣ್ಯ ಇಲಾಖೆ & ngos ಮೇಲೂ ಇದೆ. ಹೆಚ್ಚೆಚ್ಚು ಜಾಗೃತಿ ಮೂಡಿಸುವ ಫಲಕಗಳು ಚಾರ್ಮಾಡಿಯ ಅಂಕುಡೊಂಕಿನ ರಸ್ತೆಯಲ್ಲಿ ಹಾಕಿದಲ್ಲಿ ಪ್ರಯೋಜನ ಆಗಬಹುದು.


0 Comments