ತೌಕ್ತೇ ಚಂಡಮಾರುತದಿಂದ ಚಿಕ್ಕಮಗಳೂರು ಜಿಲ್ಲೆಯಲ್ಲಿ ಒಟ್ಟು 14 ಕೋಟಿ ನಷ್ಟವಾಗಿದ್ದು, ಒಂದು ಸಾವು ಸಂಭವಿಸಿದ್ದು, ಒಟ್ಟು 383 ಕಿ.ಮೀ ನಷ್ಟು ರಸ್ತೆ ಹಾನಿಯಾಗಿದೆ ಎಂದು ಕೇಂದ್ರ ಸರ್ಕಾರದ ಪರಿಶೀಲನಾ ತಂಡದ ಹೆದ್ದಾರಿ ಸಚಿವಾಲಯದ ಅಧೀಕ್ಷಕ ಅಭಿಯಂತಕರಾದ ಸದಾನಂದ ಬಾಬು ಅವರು ಮಾಹಿತಿ ನೀಡಿದ್ದಾರೆ.
ತೌಕ್ತೇ ಆರ್ಭಟಕ್ಕೆ ಮೂಡಿಗೆರೆ ಹಾಗೂ ಶೃಂಗೇರಿ ಭಾಗದಲ್ಲಿನ ಹಾನಿಯ ಕುರಿತು ತಂಡವು ಪರಿಶೀಲನೆ ನಡೆಸಿತ್ತು. ಕಳಸ ತಾಲೂಕಿನ ಕಲ್ಲುಗೋಡು ಸೇತುವೆ, ಮಧುಗುಂಡಿಯ ಕೆಲವು ಭಾಗಗಳು ಹಾಗೂ ಶೃಂಗೇರಿಯ ದೇವಲಕೊಪ್ಪ ರಸ್ತೆಯು ಹೆಚ್ಚು ಹಾನಿಗೆ ಒಳಗಾಗಿದೆ.
ಸ್ಥಳಕ್ಕೆ ಭೇಟಿ ನೀಡಿ ಈ ಕುರಿತು ವರದಿ ತಯಾರಿಸಲಾಗಿದ್ದು, ಈ ವರದಿಯ ಆಧಾರದ ಮೇಲೆ ಸರ್ಕಾರದ ಅನುದಾನ ಬಿಡುಗಡೆಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಒಟ್ಟು ಜಿಲ್ಲೆಯಲ್ಲಿ 77 ಗ್ರಾಮಗಳನ್ನು ಸೂಕ್ಷ್ಮ ಪ್ರದೇಶಗಳು ಎಂದು ಗುರುತಿಸಲಾಗಿದೆ.
41 ಗ್ರಾಮಗಳನ್ನು ಪ್ರವಾಹಪೀಡಿತ ಹಾಗೂ 32 ಗ್ರಾಮಗಳನ್ನು ಭೂಕುಸಿತ ಗ್ರಾಮಗಳೆಂದು ಗುರುತಿಸಲಾಗಿದ್ದು ಮುಂದಿನ ದಿನಗಳಲ್ಲಿ ಪ್ರಕೃತಿ ವಿಕೋಪದ ಪರಿಸ್ಥಿತಿಗಳನ್ನು ಎದುರಿಸಲು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಾದ ರಮೇಶ್ ಅವರು ತಿಳಿಸಿದರು.
ರಾಜ್ಯ ವಿಪತ್ತು ನಿರ್ವಹಣಾ ತಂಡದ ಆಯುಕ್ತ ಮನೋಜ್ ರಾಜನ್, ವಿತ್ತ ಸಚಿವಾಲಯದ ಮಹೇಶ್ ಕುಮಾರ್, ಕೇಂದ್ರ ಕೃಷಿ ಸಚಿವಾಲಯದ ಅಧಿಕಾರಿ ಶ್ರೀವಾಸ್ತವ್, ಚಿಕ್ಕಮಗಳೂರು ಉಪ ವಿಭಾಗಾಧಿಕಾರಿ ಡಾ. ನಾಗರಾಜ್ ಉಪಸ್ಥಿತರಿದ್ದರು.


0 Comments