ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ. ರವಿ ಸೇರಿದಂತೆ ನಾಲ್ವರ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ರದ್ದುಗೊಳಿಸಿ ಆದೇಶ ಹೊರಡಿಸಿದೆ.
2019ರ ಏಪ್ರಿಲ್ 7 ರಂದು ಬಿಜೆಪಿ ಶಾಸಕ ಸಿ.ಟಿ.ರವಿ ಮತ್ತವರ ಬೆಂಬಲಿಗರು ಸಕಲೇಶಪುರ ತಾಲೂಕಿನ ಬಾಗೇಹಳ್ಳಿಯಲ್ಲಿ ಸುಮಾರು 80ರಿಂದ 100 ಕಾರ್ಯಕರ್ತರನ್ನು ಸೇರಿಸಿ ಸಭೆ ನಡೆಸಿದ್ದರು. ಆದರೆ, ಸಭೆ ನಡೆಸಲು ಸಿಟಿ ರವಿ ಚುನಾವಣಾ ಆಯೋಗದಿಂದ ಯಾವುದೇ ಅನುಮತಿ ಪಡೆದಿರಲಿಲ್ಲ ಎಂಬ ಆರೋಪದಡಿ ದೂರು ದಾಖಲಾಗಿತ್ತು. ಸಿಟಿ ರವಿ ಅವರು ನೀತಿ ಸಂಹಿತೆಯ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಚುನಾವಣಾಧಿಕಾರಿ ಸಕಲೇಶಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಬಳಿಕ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಬಳಿಕ ಕೇಸ್ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಿಚಾರಣಾ ಹಂತದಲ್ಲಿತ್ತು.
ಈ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರು ಪೀಠ ಪ್ರಕರಣವನ್ನು ರದ್ದುಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಲ್ಲದೇ ನಿಯಮಗಳ ಪ್ರಕಾರ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ದೂರು ದಾಖಲಿಸಬೇಕಿತ್ತು. ಆದರೆ, ನೇರವಾಗಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಈ ಮೂಲಕ ಕಾನೂನು ಉಲ್ಲಂಘನೆಯಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಹಾಗೂ ದೂರುದಾರರು ಕಾನೂನು ಪ್ರಕಾರ ಹೊಸದಾಗಿ ದೂರು ದಾಖಲಿಸಲು ಸ್ವತಂತ್ರರಾಗಿದ್ದಾರೆ ಎಂದು ನ್ಯಾಯಪೀಠ ಸ್ಪಷ್ಟನೆ ನೀಡಿದೆ.


0 Comments