ಚಿಕ್ಕಮಗಳೂರು : ಸಂವಿಧಾನದ ಮೇಲೆ ಗೌರವತೋರದೆ ಸರ್ವಾಧಿಕಾರಿಯಂತೆ ರಾಜ್ಯ ಸರ್ಕಾರದ ಆಡಳಿತ ನಡೆಸುತ್ತಿದ್ದಾರೆ ಎಂದು ಶೃಂಗೇರಿ ಕ್ಷೇತ್ರದ ಶಾಸಕ ಟಿ ಡಿ ರಾಜೇಗೌಡ ಕಿಡಿಕಾರಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಅದೇ ರೀತಿಯಾದ ಪರಿಸ್ಥಿತಿ ಇದ್ದು,ಜಿಲ್ಲೆಗೆ ಉಸ್ತುವಾರಿ ಸಚಿವರು ಭೇಟಿ ನೀಡುವುದನ್ನು ಸಂಬಂಧಪಟ್ಟವರು ಹಾಗೂ ಅವರ ಆಪ್ತಸಹಾಯಕರು ಸರಿಯಾದ ಮಾಹಿತಿಯನ್ನು ನೀಡುತ್ತಿಲ್ಲ ಎಂದು ಅವರು ಅಸಮಾಧಾನವನ್ನು  ಹೊರಹಾಕಿದ್ದಾರೆ. ಮುಖ್ಯವಾದ ಸಭೆಗಳಿಗೆ ಆಹ್ವಾನಿಸುತಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಭೋಜೇಗೌಡ ರವರು ಒಬ್ಬಂಟಿಯಾಗಿ ನಡೆಸಿದ ಪ್ರತಿಭಟನೆ ಸರಿಯಾಗಿದೆ, ಈ ರೀತಿಯ ಪ್ರತಿಭಟನೆಗಳು ಸರ್ಕಾರಕ್ಕೆ ಬಿಸಿಮುಟ್ಟಿಸಲು ಅವಶ್ಯಕವಾಗಿದೆ ಎಂದರು.

ಕೋವಿಡ್ ಎರಡನೇ ಹಂತವನ್ನು ನಿರ್ವಹಣೆ ಮಾಡುವಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ.ಸಾವಿನ ಲೆಕ್ಕಾಚಾರಗಳು ತಾಳೆಯಾಗುತ್ತಿಲ್ಲ ಎಂದು ಆರೋಪ ಮಾಡಿದ್ದಾರೆ. ಶೃಂಗೇರಿ ಕ್ಷೇತ್ರದಲ್ಲಿ 18 ವೆಂಟಿಲೇಟರ್ ಗಳು ಇದ್ದರೂ ಕಾರ್ಯನಿರ್ವಹಿಸುವ ತಜ್ಞರ  ಕೊರತೆಯಿದೆ, ಆ ಕಾರಣದಿಂದ ಅವುಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ಅತೃಪ್ತಿ ಹೊರಹಾಕಿದ್ದಾರೆ. ಮೂರನೇ ಅಲೆ ಎದುರಾಗುವ ಎಲ್ಲಾ ಸಾಧ್ಯತೆಗಳು ಇದ್ದು, ಇದು ಮಕ್ಕಳ ಮೇಲೆ ಹೆಚ್ಚಿನ ಪರಿಣಾಮ ಬೀರುವುದರಿಂದ ಈಗಲೇ ಸರ್ಕಾರ ಮಕ್ಕಳ ಆಸ್ಪತ್ರೆ ವಾರ್ಡ್ ಗಳನ್ನೂ  ರಚಿಸಿಕೊಡುವಂತೆ ಆಗ್ರಹಿಸಿದ್ದಾರೆ.